Site icon Suddi Belthangady

ಮೂಡುಬಿದಿರೆ: ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ

ಮೂಡುಬಿದಿರೆ: ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ 12 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾನಗರ ಪಾಲಿಕೆಯ ಮುಖ್ಯ ಅಧಿಕಾರಿ ಇಂದು ಎಕ್ಸಲೆಂಟ್ ಸಂಸ್ಥೆ ಎಕ್ಸಲೆಂಟ್ ಎಂಬ ಹೆಸರಿಗೆ ಅನ್ವರ್ಥವಾಗಿದೆ. ದೂರದರ್ಶಿತ್ವ ಹಾಗೂ ಬದ್ಧತೆಯಿಂದ ತೊಡಗಿಸಿಕೊಂಡರೆ ವ್ಯಕ್ತಿಗೆ ಯಶಸ್ಸು ಸಿದ್ಧ ಎಂಬುವುದನ್ನು ಯುವರಾಜ ರಶ್ಮಿತಾ ದಂಪತಿ ಸಾಧಿಸಿ ತೋರಿಸಿದರು. ಶಿಕ್ಷಣದ ಜೊತೆಗೆ ಶೂನ್ಯ ತ್ಯಾಜ್ಯ ಕ್ಯಾಂಪಸ್ ನಂತಹ ಮೌಲಿಕ ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಿ ವಿದ್ಯಾರ್ಥಿ ಜೀವನಕ್ಕೆ ಶೇಷ್ಠ ಪಥವನ್ನು ಹಾಕಿ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಈ ದಾರಿಯಲ್ಲಿ ಪಥಿಕರಾಗಬೇಕು ಎಂದರು.

ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಎಮ್. ಎಸ್. ಮೂಡಿತ್ತಾಯ ಮಾತನಾಡುತ್ತಾ ವಯಸ್ಸಿನ ಆಧಾರದಲ್ಲಿ ಮತ್ತು ಉತ್ಸಾಹದಲ್ಲಿ ಭಾರತ ಅತಿ ಹೆಚ್ಚು ಯುವಜನತೆಯನ್ನು ಹೊಂದಿದ ದೇಶ. ಒಂದು ಕಾಲದಲ್ಲಿ ಭಾರತೀಯರು ಬಡವರೆಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಇಂದು ಬೌಧಿಕ ಮಟ್ಟದಲ್ಲಿ ಅತ್ಯಂತ ಉನ್ನತ ಸಾಧನೆಯನ್ನು ಮಾಡುತ್ತಿದ್ದು ಜಾಗತಿಕ ಮಟ್ಟದಲ್ಲಿ ಸಾಧನೆಯನ್ನು ಮಾಡುತ್ತಾ ಬಂದಿದೆ ಎಂದರು.

ಬೌದ್ಧಿಕ ರಾಜಧಾನಿ ಎಂದೇ ಹೆಸರುವಾಸಿಯಾದ ನಮ್ಮ ದೇಶದ ಸತ್ಪ್ರಜೆಗಳಾಗಿ ನೀವು ಜಾಗತಿಕ ಮಟ್ಟದಲ್ಲಿ ದೊರೆಯುವ ಅವಕಾಶಗಳ ಬಗ್ಗೆ ಆಲೋಚಿಸಬೇಕು. ಕೇವಲ ಬುದ್ಧಿಮತ್ತೆ ಮಾತ್ರವಲ್ಲದೆ ನಮ್ಮ ದೇಶದ ಹೃದಯ ಎಂದೆನಿಸಿದ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಬುದ್ಧಿಮತ್ತೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಸಾಧನೆಗೈಯಬಹುದು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ನಿರ್ದೇಶಕರಾದ ಜಯಣ್ಣ ಮಾತನಾಡುತ್ತಾ ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸತತವಾಗಿ ಮೇಲುಗೈಯನ್ನು ಸಾಧಿಸಿದೆ. ಇದಕ್ಕೆ ಕಾರಣ ಇಲ್ಲಿನ ಶಿಕ್ಷಣ ಸಂಸ್ಥೆಗಳು. ಎಕ್ಸಲೆಂಟ್ ನಂತಹ ವಿದ್ಯಾ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಓದಿಗೆ ಎಲ್ಲಾ ರೀತಿಯಲ್ಲೂ ಪೂರಕ ವಾತಾವರಣ ಕಲ್ಪಿಸಿದೆ. ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗವನ್ನು ಪಡೆದು ಉತ್ತಮ ಸಾಧನೆಗೈಯ್ಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಮಾತನಾಡುತ್ತಾ, ಸಾಧನೆಯ ಹಾದಿಯಲ್ಲಿ ಕೆಲವೊಮ್ಮೆ ನಿಮಗೆ ಸೋಲಾಗಬಹುದು. ಆಗ ನಿರಾಸೆಗೊಳ್ಳುವ ಅಗತ್ಯವಿಲ್ಲ. ಸತತ ಪರಿಶ್ರಮದ ಮೂಲಕ ನೀವು ಸಾಧನೆಯನ್ನು ಮಾಡಬಹುದು. ಸಂಸ್ಥೆಯ ಏಳಿಗೆಗಾಗಿ ಶಿಕ್ಷಕ ಶಿಕ್ಷಕೇತರ ವರ್ಗ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ನೆರವಾದ ಎಲ್ಲರಿಗೂ ಅಭಿನಂದನೆಗಳು ಎಂದರು.

ವಿಶೇಷ ಆಹ್ವಾನಿತಾರಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಪೂರ್ವ ವಿದ್ಯಾರ್ಥಿ ಆತಿರಾ ಮೆನನ್ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕುತ್ತಾ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕೆಂದು ಬಯಸಿದ್ದೆ, ಆದರೆ ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದು ಶಿಕ್ಷಕಿ ಆಗುವ ಗುರಿಯಿದೆ. ನನ್ನೆಲ್ಲಾ ಏಳಿಗೆಗೂ ಮೊದಲ ಹೆಜ್ಜೆಯಾಗಿದ್ದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದರು. ಮೂಡುಬಿದಿರೆ ತಾಲೂಕು ಮಹಾನಗರ ಪಾಲಿಕೆ ಅಧ್ಯಕ್ಷೆ ಜಯಶ್ರೀ ಕೇಶವ್, ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷಾ ವಿಭಾಗದ ನಿರ್ದೇಶಕ ಪ್ರಶಾಂತ್ ಹೆಗ್ಡೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಆಫ್ನಾನ್ ಬೇಗ್ ಮತ್ತು ಅನೀಶ್ ಗಣಪತಿ ದೇಸಾಯಿ ಬರೆದ ಕಾದಂಬರಿಗಳಾದ ಇನ್ಸೋಲೈಟ್ ಮತ್ತು ಲೈಫ್ ಇನ್ ಅ ಬ್ಲಾಕ್ ಹೋಲ್ ಬಿಡುಗಡೆಯಯಿತು. ಪ್ರಾಂಶುಪಾಲ ಪ್ರದೀಪ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಉಪಾಪ್ರಾಂಶುಪಾಲ ಮನೋಜ್ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರದ್ಧಾ ಮತ್ತು ವಿಲ್ಮಾ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ವಿಶ್ವರಾಜ್, ಸೌಮ್ಯಾ, ಅಶ್ವಿತಾ ರೈ ಅತಿಥಿಗಳನ್ನು ಪರಿಚಯಿಸಿದರು. ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ನಾಯಕ ರೋಹಿತ್ ಕಾಮತ್ ವಂದಿಸಿದರು

Exit mobile version