ಉಜಿರೆ: “ಉಜಿರೆಯ ಎಸ್. ಡಿ.ಎಂ. ಕಾಲೇಜು ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 25 ವರ್ಷಗಳ ಮೌಲಿಕ ಶಿಕ್ಷಣ ಸಂಶೋಧನಾತ್ಮಕ ಮತ್ತು ಕೌಶಲ್ಯಯುತ ಹೆಜ್ಜೆಗಳನ್ನು ಮೆಲಕು ಹಾಕುವ ಉದ್ದೇಶದೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಡಿ.13 ಮತ್ತು 14 ರಂದು ‘ಬ್ರೇಕಿಂಗ್ಬ್ಯಾ ರಿಯರ್ಸ್ ಅಡ್ವಾನ್ಸಿಂಗ್ ಸೈಕಲಾಜಿಕಲ್ ವೆಲ್ ಬೀಯಿಂಗ್ ಅಕ್ರಾಸ್ ಬಾರ್ಡರ್ಸ್’ ಶೀರ್ಷಿಕೆಯಡಿ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ” ಎಂದು ಎಸ್ ಡಿಎಂ ಸ್ವಾಯತ್ತ ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ.ಕುಮಾರ್ ಹೆಗ್ಡೆ ಹೇಳಿದರು. ಅವರು ಡಿ. 9 ರಂದು ಉಜಿರೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಈ ಎರಡು ದಿನಗಳ ವಿಚಾರ ಸಂಕಿರಣವನ್ನು ಕಾಲೇಜಿನ ಇಂದ್ರಪ್ರಸ್ತ ಸಭಾಭವನದಲ್ಲಿ ಡಿ.13 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಡಾ. ಸತೀಶ್ಚಂದ್ರ ಎಸ್., ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಮೇಶ್ ಸಾಲಿಯನ್, ವಿಶ್ರಾಂತ ಪ್ರಾಧ್ಯಾಪಕಿ ಡಾ.ಎಂ.ವೈ. ಮಂಜುಳಾ, ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್, ಎಸ್ ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ., ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸುವರು” ಎಂದು ತಿಳಿಸಿದರು.
ಅಮೆರಿಕಾದ ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಮನೋಶಾಸ್ತ್ರಜ್ಞೆ ಡಾ.ಕ್ಯಾರೋಲ್ ಡಿ.ರಿಫ್, ಅವರು ‘ಮನೋಭಾವಾತ್ಮಕ ಕ್ಷೇಮಾಭ್ಯುದಯ ಸಂಬಂಧಿತ ಜಾಗತಿಕ ನೆಲೆಗಳು’ ಕುರಿತು, ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಮೇಶ್ ಸಾಲಿಯಾನ್ ಅವರು ಮಾನಸಿಕ ಆರೋಗ್ಯ ಮತ್ತು ರಾಷ್ಟ್ರದ ಕ್ಷೇಮಾಭ್ಯುದಯ ಕುರಿತು, ಕೊಲ್ಕತ್ತಾದ ಪ್ರಾಧ್ಯಾಪಕ ಡಾ. ಸುಮಿತ್ ದತ್ತಾ ಅವರು ಆರೋಗ್ಯ ಕ್ಷೇಮಾಭ್ಯುದಯ ಮತ್ತು ಒತ್ತಡ ನಿರ್ವಹಣೆ ಕುರಿತು ವಿಚಾರವನ್ನು ಮಂಡಿಸಲಿದ್ದಾರೆ” ಎಂದು ತಿಳಿಸಿದರು.
ಡಿ.14ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ್ ಹೆಗ್ಡೆ ವಹಿಸಲಿದ್ದು, ನಿವೃತ್ತ ಪ್ರೊಫೆಸರ್ ಎಚ್. ಡಿ. ಗಣೇಶ್ ರಾವ್, ಶಾಸಕ ಹರೀಶ್ ಪೂಂಜ, ಆಳ್ವಾಸ್ ಮೂಡಬಿದ್ರೆಯ ಡಾ. ದೀಪಾ ಕೊಠಾರಿ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಶಶಿಶೇಖರ ಕಾಕತ್ಕರ್, ಪಿಜಿ ವಿಭಾಗದ ಡೀನ್ ಪ್ರೊ. ವಿಶ್ವನಾಥ ಪಿ. ಉಪಸ್ಥಿತರಿರುವರು. ಈ ವಿಚಾರ ಸಂಕಿರಣದಲ್ಲಿ ದೇಶ ಹಾಗೂ ವಿದೇಶದ 300 ಮಂದಿಗೆ ಅವಕಾಶ ಮಾಡಿಕೊಡಲಾಗಿದ್ದು, ಈಗಾಗಲೇ ನೋಂದಾವಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ” ಎಂದು ಹೇಳಿದರು.
1999 ರಲ್ಲಿ ಆರಂಭವಾದ ಪಿಜಿ ವಿಭಾಗವು 2008ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಸಂಶೋಧನಾ ಕೇಂದ್ರವಾಗಿ ಗುರುತಿಸಲ್ಪಟ್ಟು, 12 ಸಂಶೋಧನಾರ್ಥೀಗಳು ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದೀಗ 7 ಸಂಶೋಧನಾರ್ಥಿಗಳು ಪಿ ಎಚ್ ಡಿ ಸಂಶೋಧನಾ ಅಧ್ಯಯನ ನಿರತರಾಗಿದ್ದಾರೆ. ಪ್ರಸ್ತುತ ಜನರಲ್ ಸೈಕಾಲಜಿ ವಿಷಯ ಇದ್ದು, ಮುಂದಿನ ವರ್ಷದಿಂದ ಕ್ಲಿನಿಕಲ್ ಸೈಕಾಲಜಿ ವಿಭಾಗವನ್ನು ಆರಂಭಿಸಲಾಗುವುದು” ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಿಜಿ ವಿಭಾಗದ ಡೀನ್ ಪ್ರೊ. ವಿಶ್ವನಾಥ ಪಿ., ವಿಭಾಗ ಮುಖ್ಯಸ್ಥೆ ಡಾ.ವಂದನಾ ಜೈನ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ, ಉಪನ್ಯಾಸಕರುಗಳಾದ ಅಶ್ವಿನಿ ಎಸ್. ಶೆಟ್ಟಿ, ಡಾ. ಮಹೇಶ್ ಬಾಬು ಎನ್, ಅಶ್ವಿನಿ ಎಚ್., ಸಿಂಧು ವಿ.,ಪದ್ಮಶ್ರೀ ಕೆ. ಉಪಸ್ಥಿತರಿದ್ದರು.