Site icon Suddi Belthangady

ಉಜಿರೆ: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ – ಯಶೋವರ್ಮರ ಸ್ಮರಣಾರ್ಥ

ಉಜಿರೆ: “ಸದಾ ಹಸನ್ಮುಖಿ, ಒಮ್ಮೆ ಅವರ ಬಳಿ ಮಾತನಾಡಿದರೆ ಸಾಕು, ಅದೆಷ್ಟೋ ವರ್ಷಗಳ ಪರಿಚಯ ಇದೆಯೇನೋ ಅಂತ ಅನ್ನಿಸುತ್ತದೆ. ಅಹಂಕಾರ ಭಾವ ಎಂದಿಗೂ ನಮ್ಮಲ್ಲಿ ಬರಬಾರದು ಎಂಬ ಗೀತೆಯ ಸಾರವನ್ನು ಆದರ್ಶವಾಗಿ ತೆಗೆದುಕೊಂಡು ತನ್ನ ಜೀವನದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದ ಮನುಷ್ಯ ಬಿ. ಯಶೋವರ್ಮ ಇಂದು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೇ ಇದ್ದರೂ ಅವರ ನೆನಪುಗಳೇ ನಮಗೆ ಎಂದಿಗೂ ಸ್ಪೂರ್ತಿ. ಅವರು ಬದುಕಿದ ರೀತಿ ನಮಗೆಲ್ಲರಿಗೂ ಆದರ್ಶ ಎಂದು ಪ್ರದೀಪ್ ನಾವೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುತ್ತ ಹೇಳಿದರು.

ಮಾತನಾಡುತ್ತಾ ಅವರ ವಿದ್ಯಾರ್ಥಿ ಜೀವನದಲ್ಲಿ ಭಾಗವಹಿಸಿದ ವಿವಿಧ ಶಿಬಿರಗಳ ನೆನಪುಗಳು ಇನ್ನೂ ಹಚ್ಚ ಹಸಿರಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಮಿತಾನಂದ ಹೆಗ್ಡೆ ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿ ಮಾತನಾಡಿದ ಅವರು “ ಯಶೋವರ್ಮ ಅವರದ್ದು ಬಹಳ ದೊಡ್ಡ ವ್ಯಕ್ತಿತ್ವ ಅವರ ಜನ್ಮ ಸ್ಮರಣೆಯನ್ನು ನಮ್ಮ ಊರಿನ ಶಾಲೆಯಲ್ಲಿ ಈ ದಿನ ಆಚರಿಸುತ್ತಾ ಇರುವುದು ನಮಗೆ ಬಹಳ ಹೆಮ್ಮೆಯ ವಿಷಯ ಎಂದು ಹೇಳಿದರು.”

“ವಿದ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಸಿಕ್ಕಿರುವ ಅವಕಾಶ ಬಹಳ ಉತ್ತಮವಾದುದು ಆದ್ದರಿಂದ ಸರಿಯಾದ ರೀತಿಯಲ್ಲಿ ಇಲ್ಲಿ ಸಿಗುವ ಪಾಠಗಳನ್ನು, ಅನುಭವಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಖಂಡಿತಾ ನಿಮಗೆ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ” ಎಂದು ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಇನ್ನೋರ್ವ ಅತಿಥಿಯಾಗಿ ರಘುರಾಮ ಶೆಟ್ಟಿ ಭಾಗವಹಿಸಿದರು. ಪ್ರತಿವರ್ಷವೂ ಶ್ರೀ. ಧ. ಮಂ ಕಾಲೇಜಿನ ಶಿಬಿರದಲ್ಲಿ ಭಾಗವಹಿಸುತ್ತೇನೆ, ಇದುವರೆಗೂ ಹಲವಾರು ಶಿಬಿರಗಳಲ್ಲಿ ನಾನು ಭಾಗವಹಿಸಿದ್ದೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿ. ಯಶೋವರ್ಮ ಅವರ ಭಾವಚಿತ್ರಕ್ಕೆ ಅತಿಥಿಗಳು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿ ಪುಷ್ಪ ನಮನ ಸಲ್ಲಿಸಿದರು.

ಸ್ವಯಂಸೇವಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಯೋಜನಾಧಿಕಾರಿ ಮಹೇಶ್ ಕುಮಾರ್ ಶೆಟ್ಟಿ. ಹೆಚ್ ಸ್ವಾಗತಿಸಿ, ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಯಶೋವರ್ಮರವರ ಪಾತ್ರ ಏನು ಎಂಬುವುದರ ಕುರಿತು ಮಾತನಾಡಿದರು. ಸ್ವಯಂ ಸೇವಕ ವಂಶಿ. ಭಟ್ ನಿರೂಪಿಸಿ ಸ್ವಯಂ ಸೇವಕಿ ನಿಶಾ ಧನ್ಯವಾದ ಸಮರ್ಪಿಸಿದರು.

Exit mobile version