ನಿಟ್ಟಡೆ: ವಿದ್ಯೆಯೆಂಬ ಆಸ್ತಿಯನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಜೊತೆಗೆ ವಿನಯವನ್ನೂ ರೂಢಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಹೇಳಿದರು. ಅವರು ವೇಣೂರು ಸನಿಹ ನಿಟ್ಟಡೆ ಕುಂಭಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಡಿ. 8ರಂದು ನಡೆದ ಕುಂಭಶ್ರೀ ವೈಭವದಲ್ಲಿ ಅತಿಥಿ ಸ್ಥಾನದಿಂದ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಮಾತ್ರ ಸಾಲದು. ಆಗ್ಗಾಗ್ಗೆ ಶಾಲೆಗೆ ಬಂದು ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯ ಕಡೆಗೂ ಗಮನ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳೊಂದಿಗೆ ಆತ್ಮೀಯ ಸಂವಹನ ನಡೆಸುವುದು ಮುಖ್ಯವಾಗುತ್ತದೆ. ಹತ್ತನೇ ತರಗತಿಯಲ್ಲಿರುವ ಮಕ್ಕಳಿಗೆ ಜನವರಿಯಿಂದ ಪುನರಾವರ್ತನೆಯ ಕಾರ್ಯ ನಡೆಸಬೇಕು ಎಂದರು. ಮಂಗಳೂರಿನ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಸ್ಥಾಪಕ ಅನಿಲ್ ದಾಸ್ ಅವರು ಕುಂಭಶ್ರೀ ವಿದ್ಯಾಲಯವು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಇಲ್ಲಿನ ಶಿಕ್ಷಕರು ಹೊತ್ತುಕೊಂಡಿರುವುದು ವಿಶೇಷ ಎಂದ ಅವರು ಇಂತಹ ಸಂಸ್ಥೆಗೆ ಜನಪ್ರತಿನಿಧಿಗಳ, ಪೋಷಕರ ನಿರಂತರ ಸಹಕಾರ ಅಗತ್ಯ ಎಂದರು.
ಕುಂಭಶ್ರೀ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಗಿರೀಶ್ ಕೆ. ಹೆಚ್ ಅಧ್ಯಕ್ಷತೆ ವಹಿಸಿದ್ದರು. ಪ.ಪೂ. ಶಿಕ್ಷಣ ಇಲಾಖೆಯ ವಿಠಲ ಅಬುರ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಕುಂಭಶ್ರೀ ಕಾಲೇಜಿನ ಪ್ರಾಚಾರ್ಯ ಓಮನಾ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ್ತಿ ಉಷಾ ಜಿ., ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾ ರಾವ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶುಭಾ, ಪ್ರೌಢ ಶಾಲಾ ಮುಖ್ಯಶಿಕ್ಷಕಿ ಶ್ವೇತಾ, ವೈಭವ ಸಮಿತಿ ಗೌರವಾಧ್ಯಕ್ಷರುಗಳಾದ ಹರೀಶ್ ಪೊಕ್ಕಿ, ಗುರುಪ್ರಕಾಶ್ ಕಕ್ಕೆಪದವು, ಉಪಾಧ್ಯಕ್ಷ ಸೋಮನಾಥ್, ಸುರೇಶ್ ಪೂಜಾರಿ, ಕುಂಭಶ್ರೀ ಶಾಲೆಯ ವಿದ್ಯಾರ್ಥೀ ನಾಯಕ ಅಜೇಶ್, ಕುಂಭಶ್ರೀ ಕಾಲೇಜಿನ ವಿದ್ಯಾರ್ಥಿ ನಾಯಕಿ ಸಮೀಕ್ಷಾ ವೇದಿಕೆಯಲ್ಲಿದ್ದರು. ಕುಂಭಶ್ರೀ ವಿದ್ಯಾಗೌರವ ನೀಡಲಾಯಿತು. ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವೈಭವ ಸಮಿತಿ ಅಧ್ಯಕ್ಷ ಅಶ್ವಿತ್ ಕುಲಾಲ್ ಸ್ವಾಗತಿಸಿದರು. ಶಿಕ್ಷಕಿ ಪವಿತ್ರಾ ವಂದಿಸಿದರು. ಬೆಳಿಗ್ಗೆ ಸಾವ್ಯದ ಪ್ರಗತಿಪರ ಕೃಷಿಕ ಬಾಲಕೃಷ್ಣ ಭಟ್ ಧ್ವಜಾರೋಹಣ ನೆರವೇರಿಸಿದರೆ, ಉದ್ಯಮಿ ಮಂಜುನಾಥ ನಾಯ್ಕ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.