ಕೊಯ್ಯೂರು: ಮಲೆಬೆಟ್ಟು ಹಾಲು ಉತ್ಪಾದಕ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಹಾಲು ಉತ್ಪಾದಕರ ನಡುವೆ ಉಂಟಾದ ವಿವಾದ ಮತ್ತೆ ಬುಗಿಳೆದ್ದಿದೆ. ಕಳೆದ ಹಲವು ತಿಂಗಳಿಂದ ನಡೆದ ಅಧ್ಯಕ್ಷರ ಗೂಂಡಾಗಿರಿ ಹಾಗೂ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಆಡಳಿತ ಮಂಡಳಿಯನ್ನು ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆಡಳಿತ ಮಂಡಳಿಯನ್ನು ರದ್ದುಗೊಳಿಸಿದರು.
ಈ ಆದೇಶದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರ ನ್ಯಾಯಾಲಯಕ್ಕೆ ಅಧ್ಯಕ್ಷ ಪ್ರಮೋದ್ ಕುಮಾರ್ ದಾವೆಯನ್ನು ನೀಡಿರುತ್ತಾರೆ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಹಾಗೂ ಆಡಳಿತ ಅಧಿಕಾರಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆಡಳಿತ ಮಂಡಳಿಗೆ ಮತ್ತೆ ಅಧಿಕಾರ ವಹಿಸಲು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘದ ಉಪನಿಬಂಧಕರ ನ್ಯಾಯಾಲಯವು ಅದೇಶಿಸಿತು.
ಇದರಿಂದಾಗಿ ಆಡಳಿತ ಅಧಿಕಾರಿ ಯಮುನಾ, ಪ್ರಮೋದ್ ಕುಮಾರ್ ನೇತೃತ್ವದ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಲು ನ. 5 ರಂದು ತುರ್ತು ಸಭೆ ಮಾಡಲು ಬಂದಿದ್ದರು. ಇದಕ್ಕೆ ಕೆಲವು ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ವಿರೋಧಿಸಿದರು.
ಅಧ್ಯಕ್ಷರು ಹೂಡಿದ ದಾವೆಗೆ ಯಮುನಾ ಹಾಜರಾಗದ ಹಿನ್ನಲೆಯಲ್ಲಿ ಹಾಗೂ ಕಳೆದ ಮಹಾಸಭೆಯಲ್ಲಿ 2 ತಿಂಗಳಿನ ಅವಧಿಯ ಒಳಗೆ ಚುನಾವಣೆ ನಡೆಸುವುದಾಗಿ ನಿರ್ಣಯಿಸಲಾಗಿತ್ತು. ಈ ಎಲ್ಲಾ
ವಿಷಯಗಳಿಂದ ಹಾಲು ಉತ್ಪಾದಕರು ಹಾಗೂ ಊರಿನವರು ಅಧ್ಯಕ್ಷರ ಹಾಗೂ ಆಡಳಿತ ಅಧಿಕಾರಿ ಯಮುನಾ ವಿರುದ್ಧ ತುರ್ತು ಸಭೆಯನ್ನು ನಡೆಸದಂತೆ ಹಾಗೂ ಸ್ಥಳಕ್ಕೆ ಪುತ್ತೂರು ವಿಭಾಗದ ಸಹಕಾರಿ ಸಂಘಗಳ ನಿಬಂಧಕರು ಆಗಮಿಸಲು ಬಿಗಿ ಪಟ್ಟುಹಿಡಿದರು.
ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿಗಳು ಮದ್ಯ ಪ್ರವೇಶಿಸಿ ಹಾಲು ಉತ್ಪಾದಕರು ಹಾಗೂ ಊರಿನವರನ್ನು ಸಮಾಧಾನಗೊಳಿಸಿದರು. ಕೊನೆಗೆ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸದೆ ಮೇಲಾಧಿಕಾರಿ ಆಜ್ಞೆಯಂತೆ ಮುಂದಿನ ಆದೇಶ ಬರುವವರೆಗೂ ಸಭೆಯನ್ನು ಮುಂದೂಡಲಾಯಿತು.