Site icon Suddi Belthangady

ಬೆಳ್ತಂಗಡಿ: ಜಿಲ್ಲಾಧಿಕಾರಿ ಸಭೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮಲೆಕುಡಿಯ ಸಮುದಾಯದ ಮುಖಂಡರ ಒತ್ತಾಯ

ಬೆಳ್ತಂಗಡಿ: ಸಾಕಷ್ಟು ಮಲೆಕುಡಿಯ ಕುಟುಂಬಗಳು ರಸ್ತೆ ಹಾಗೂ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿವೆ. ಪ್ರಥಮ ಆಧ್ಯತೆಯಾಗಿ ವಿದ್ಯುತ್ ಹಾಗೂ ರಸ್ತೆ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡು ಹಂತ ಹಂತವಾಗಿ ಮಲೆಕುಡಿಯ ಸಮುದಾಯದ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹೇಳಿದರು.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಲೆಕುಡಿಯ ಸಮುದಾಯದ ಮುಖಂಡರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರ ಕ್ರಮಗಳ ಕುರಿತು ವಿವಿಧ ಇಲಾಖಾ ಅಧಿಕಾರಿಗಳ ಜೊತೆ ಹಾಗೂ ಮಲೆಕುಡಿಯ ಸಂಘದ ಪ್ರಮುಖರ ಜೊತೆ ಸಮಾಲೋಚನೆ ನಡೆಸಿದರು.

ಮಲೆಕುಡಿಯರ ಸಂಘ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಎಳನೀರು ಮಾತನಾಡಿ ಮಲೆಕುಡಿಯ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 10-15 ವರ್ಷದಿಂದ ಬೇಡಿಕೆಯನ್ನು ಸಲ್ಲಿಸುತ್ತಾ ಬಂದಿದ್ದು ಇದುವರೆಗೂ ಫಲಪ್ರದವಾಗಿಲ್ಲ. ವಿದ್ಯುತ್ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕೆಂದು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು. ಜೊತೆಗೆ ವಿವಿಧ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಸರಿಯಾದ ಮಾಹಿತಿ ಇಲಾಖೆಗಳಿಂದ ದೊರೆಯುತ್ತಿಲ್ಲ ಹಾಗಾಗಿ ಸಾಕಷ್ಟು ಜನರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು. ಸುಲ್ಕೇರಿಯ ನಾಯಿದಗುರಿಯ ಸಮಸ್ಯೆಯನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎಂದು ಎಂದು ಆಗ್ರಹಿಸಲಾಯಿತು.

ವಿದ್ಯುತ್ ಸಂಪರ್ಕ ಪಡೆಯುವ ಬಗ್ಗೆ ವೆಂಕಪ್ಪ ಬೊಟ್ಟಿತ್ತಿಲ್ ಇಲಾಖಾಧಿಕಾರಿಗಳಿಗೆ ದಾಖಲೆ ತೋರಿಸಿದರು. ಬೆಳ್ತಂಗಡಿ ತಾ. ಸಮಿತಿ ಕಾರ್ಯದರ್ಶಿ ಜಯಾನಂದ ಪಿಲಿಕಲ ಜಾತಿ ಪ್ರಮಾಣ ಪತ್ರವನ್ನು ಮಲೆಕುಡಿಯ ಎಂಬುದಾಗಿ ನೀಡಬೇಕು ಎಂದು ಆಗ್ರಹಿಸಿದರು ಹಾಗೂ 94 ಸಿ ಸಮಸ್ಯೆಯನ್ನು ಗಮನಕ್ಕೆ ತಂದರು.

ಪುತ್ತೂರು ತಾ. ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಲಬೆರಕೆ ಹಾಗೂ ಕಳಪೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಮನೆ ಇಲ್ಲದಿರುವುದು, ರೇಷನ್ ಕಾರ್ಡ್ ಇಲ್ಲದಿರುವುದು, ಅಕ್ರಮ ಸಕ್ರಮ, ಹೀಗೆ ಸಮುದಾಯದ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಯಿತು.

ರಾಜ್ಯ ಮಲೆಕುಡಿಯ ಸಂಘದ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ, ಜೊತೆ ಕಾರ್ಯದರ್ಶಿ ಲಕ್ಷಣ ನೆರಿಯ, ಸದಸ್ಯೆ ವಿನೋದಾ ಪುತ್ತೂರು, ತನಿಯಪ್ಪ ಬೆಟ್ಟಂಪಾಡಿ, ಉಮೇಶ್ ನಾರಾವಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Exit mobile version