Site icon Suddi Belthangady

ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿ ನೇಮಕ ರದ್ದು- ಆಡಳಿತ ಮಂಡಳಿಗೆ ಮತ್ತೆ ಅಧಿಕಾರ – ಸಹಕಾರ ಸಂಘಗಳ ನಿಬಂಧಕರ ಕೋರ್ಟ್ ಆದೇಶ

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿಯನ್ನು ನೇಮಿಸಿ ಹೊರಡಿಸಲಾಗಿದ್ದ ಆದೇಶವನ್ನು ರದ್ದು ಪಡಿಸಿರುವ ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯ ಮರಳಿ ಹಿಂದಿನ ಆಡಳಿತ ಮಂಡಳಿಗೆ ಅಧಿಕಾರ ನೀಡಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಡಿ.5ರಂದು ಆಡಳಿತ ಮಂಡಳಿಯ ಸಭೆ ನಡೆಯಲಿದ್ದು, ಈ ಸಭೆಗೆ ಪೊಲೀಸ್ ರಕ್ಷಣೆ ಕೇಳಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಕೊಯ್ಯೂರು ಗ್ರಾಮದ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಕೆಲವು ಸದಸ್ಯರುಗಳ ನಡುವಿನ ಕಿತ್ತಾಟದಿಂದಾಗಿ 2023 ರ ಡಿಸೆಂಬರ್‌ನಿಂದ 14-03-2024ರವರೆಗೆ ಆಡಳಿತ ಮಂಡಳಿ ಸಭೆ ನಡೆದಿರಲಿಲ್ಲ. ಅಲ್ಲದೆ ಸಂಘದ ಕಾರ್ಯದರ್ಶಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಸಂಘದ ಹಾಲು ಶೇಖರಣೆ ಮತ್ತು ಹಣ ಬಟವಾಡೆಗೆ ಸಮಸ್ಯೆಯಾಗಿತ್ತು ಹಾಗೂ ಒಕ್ಕೂಟದ ಯೋಜನೆಗಳನ್ನು ಸದಸ್ಯರಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ದ.ಕ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ವ್ಯವಸ್ಥಾಪಕರು ತಿಳಿಸಿದ್ದರಿಂದ ಆಡಳಿತ ಮಂಡಳಿಯನ್ನು ರದ್ದು ಪಡಿಸಿ ವಿಶೇಷಾಧಿಕಾರಿಯಾಗಿ 3 ತಿಂಗಳ ಅವಧಿಗೆ ಕೆಎಂಎಫ್ ವಿಸ್ತರಣಾಧಿಕಾರಿ ಯಮುನಾ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿತ್ತು. ಅದರಂತೆ ಸಂಘದ ವಿಶೇಷಾಧಿಕಾರಿಯಾಗಿ ಯಮುನಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆಡಳಿತ ಮಂಡಳಿ ರಚನೆ ಆಗದೇ ಇರುವುದರಿಂದ ವಿಶೇಷಾಧಿಕಾರಿಯವರ ಅವಧಿಯನ್ನು ಮುಂದಿನ ಮೂರು ತಿಂಗಳ ಅವಧಿಗೆ ವಿಸ್ತರಿಸುವಂತೆ ಕೋರಿದ್ದರು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಅವರು ಮಂಗಳೂರಿನ ವಕೀಲ ವಿಶಾಲ್ ಶೆಟ್ಟಿ ಅವರ ಮೂಲಕ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಸಂಖ್ಯೆ 01/2024-25ರ ಅರ್ಜಿಯನ್ನು ವಿಚಾರಣೆ ನಡೆಸಿದ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ 2024ರ ಎಪ್ರಿಲ್23ರಂದು ವಿಶೇಷಾಧಿಕಾರಿಯನ್ನು ನೇಮಕಗೊಳಿಸಿದ್ದ ಆದೇಶವನ್ನು ರದ್ದುಪಡಿಸಿದ್ದು ವಿಶೇಷಾಧಿಕಾರಿಯವರ ಪ್ರಭಾರವನ್ನು ಕೂಡಲೇ ಆಡಳಿತ ಮಂಡಳಿಗೆ ಹಸ್ತಾಂತರಿಸಿ ವರದಿ ಮಾಡುವಂತೆ ಆದೇಶಿಸಿದೆ. ಸದ್ರಿ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್, ಉಪಾಧ್ಯಕ್ಷರಾಗಿ ಗಂಗಯ್ಯ ಗೌಡ, ನಿರ್ದೇಶಕರುಗಳಾಗಿ ದಾಮೋದರ ಗೌಡ, ಜಯಂತ ಗೌಡ, ಪ್ರವೀಣ್ ಪೂಜಾರಿ, ಸೇಸಪ್ಪ, ಚಿತ್ರ, ಅಣ್ಣಿ ಪೂಜಾರಿ ಮತ್ತು ಸಂಜೀವ ಎಂ.ಕೆ. ಉದಯ ಕುಮಾರ್ ಜೈನ್, ಪುಷ್ಪರಾಜ್ ಜೈನ್, ನಾರಾಯಣ ಮತ್ತು ಲಕ್ಷ್ಮಿ ಅವರು ಕಾರ್ಯ ನಿರ್ವಹಿಸುತ್ತಿದ್ದು ಒಟ್ಟು 210 ಸದಸ್ಯರಿದ್ದಾರೆ.

Exit mobile version