Site icon Suddi Belthangady

ಬೆಳ್ತಂಗಡಿ: ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಬೆಳ್ತಂಗಡಿ: ಏಡ್ಸ್ ಎಂದರೆ ಶಾಪವಲ್ಲ, ಏಡ್ಸ್ ಸೋಂಕಿತರಿಗೂ ಈ ಸಮಾಜದಲ್ಲಿ ಬದುಕುವ ಹಕ್ಕಿದೆ. ಅವರಿಗೆ ತಾರತಮ್ಯ ಮಾಡುವುದು ಸರಿಯಲ್ಲ. ಹೆಚ್.ಐ.ವಿ. / ಏಡ್ಸ್ ಸೋಂಕಿತ ಹಾಗೂ ಪೀಡಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಬೆಳ್ತಂಗಡಿ ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ಕಾರ್ಯ ಪ್ರಶಂಸನೀಯ ಎಂದು ಗಂಡಿಬಾಗಿಲು ಸಂತ ಥೋಮಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ತ್ರೇಸ್ಯಾ ಕೆ. ಪಿ. ಅಭಿಪ್ರಾಯಪಟ್ಟರು.

ನ. 29 ರಂದು ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಗಂಡಿಬಾಗಿಲಿನ ಸಂತ ಥೋಮಸ್ ಪ್ರೌಢಶಾಲೆಯಲ್ಲಿ ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯು ಆಯೋಜಿಸಿದ ವಿಶ್ವ ಏಡ್ಸ್ ದಿನಾಚರಣಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಡಿ. ಕೆ. ಆರ್ .ಡಿ. ಎಸ್ ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಮೂಲಕ ನಡೆಸಲ್ಪಡುವ ನವಜೀವನ ಹೆಚ್.ಐ.ವಿ/ ಏಡ್ಸ್ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ’ಸೋಜ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಹೆಚ್.ಐ.ವಿ./ ಏಡ್ಸ್ ರೋಗದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಗಣಿತ ಶಿಕ್ಷಕ ಫಾ. ಸೆಬಾಸ್ಟಿಯನ್ ಪುನ್ನತ್ತಾನತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಒಟ್ಟು 90 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಕ ಬೇಬಿ ಜೋಸೆಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version