ಬೆಳ್ತಂಗಡಿ: ಪ್ರತೀ ಗ್ರಾಮದಲ್ಲಿರುವ ಶಾಲೆ, ಸೊಸೈಟಿ, ಪಂಚಾಯತ್, ದೇವಸ್ಥಾನ, ದೈವಸ್ಥಾನ, ಪ್ರಾರ್ಥನಾಲಯಗಳು, ಉದ್ದಿಮೆ, ಪ್ರೇಕ್ಷಣೀಯ ಸ್ಥಳಗಳ ಸಂಪೂರ್ಣ ಮಾಹಿತಿ ಮತ್ತು ದೇಶ-ವಿದೇಶ ಸಹಿತ ಪರವೂರಿನಲ್ಲಿರುವ ಬಳಂಜದವರ ಮಾಹಿತಿ ಸಂಗ್ರಹಿಸಿ ಜಗತ್ತಿಗೆ ಒದಗಿಸುವ ನಮ್ಮೂರು-ನಮ್ಮ ಹೆಮ್ಮೆ ಅರಿವು ಅಭಿಯಾನ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದಲ್ಲಿ ನಡೆಯಲಿದೆ.
ಈ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆಯುವ ಮತ್ತು ಸಂಗ್ರಹಿಸಿರುವ ಮಾಹಿತಿಗಳನ್ನು ಪ್ರದರ್ಶಿಸುವ ಅರಿವು ಅಭಿಯಾನದ ಸಭೆ ಡಿಸೆಂಬರ್ 6ರಂದು ಬೆಳಗ್ಗೆ 11.00ಕ್ಕೆ ಬಳಂಜ ಗ್ರಾ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಂಜೀವಿನಿ ಒಕ್ಕೂಟದವರು, ಸ್ವಸಹಾಯ ಸಂಘದವರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪ್ರಮುಖರು, ಪಂಚಾಯತ್ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ಊರ ಪ್ರಮುಖರು ಆಹ್ವಾನಿತರಾಗಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್ ಸಭೆಯನ್ನು ಉದ್ಘಾಟಿಸಲಿದ್ದಾರೆ. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ ಅವರು ಮಾಹಿತಿ ನೀಡಲಿದ್ದಾರೆ.
ನಮ್ಮೂರು ನಮ್ಮ ಹೆಮ್ಮೆ ಯೋಜನೆಯನ್ನು ಡಿಸೆಂಬರ್ ತಿಂಗಳಿನೊಳಗೆ ಬೆಳ್ತಂಗಡಿ ತಾಲೂಕಿನಾದ್ಯಂತ ವಿಸ್ತರಿಸಿ ಸಂಪೂರ್ಣ ಮಾಹಿತಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ತಮ್ಮ ತಮ್ಮ ಊರಿನಲ್ಲಿರುವ ವೈಶಿಷ್ಟ್ಯಗಳ ಬಗ್ಗೆ ಹಾಗೂ ಕಿರು ಉದ್ಯಮದ ಮೂಲಕ ಸ್ವಾಲಂಬಿಗಳಾಗಲು ಪ್ರಯತ್ನಿಸುತ್ತಿರುವವರ ಬಗೆಗೆ ಆಯಾಯ ಗ್ರಾಮದ ಜನರು ಸುದ್ದಿ ಅರಿವು ಕೇಂದ್ರಕ್ಕೆ ಮಾಹಿತಿ ನೀಡಬೇಕಾಗಿ ವಿನಂತಿ.