Site icon Suddi Belthangady

ಕಲ್ಮಂಜ: ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ, ಸಾಂಸ್ಕ್ರತಿಕ ವೈಭವ

ಕಲ್ಮಂಜ: ಸರ್ಕಾರಿ ಶಾಲೆ ಎಂದು ಯಾರಿಗೂ ಕೀಳಿರಿಮೆ ಬೇಡ. ಸರ್ಕಾರಿ ಶಾಲೆಯೇ ಬದುಕು ಕಟ್ಟಿಕೊಡುತ್ತದೆ ಮತ್ತು ಬದುಕಲು ಕಲಿಸುತ್ತದೆ ಎಂದು ಗುರುವಾಯನಕೆರೆಯ ಪ್ರಸಿದ್ಧ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಸುಮಂತ್ ಕುಮಾರ್ ಜೈನ್ ತಿಳಿಸಿದರು. ಅವರು ಕಲ್ಮಂಜ ಪ್ರೌಢಶಾಲೆಯ ಪ್ರತಿಭಾ ದಿನಾಚರಣೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮೇಲಿನಂತೆ ಕಿವಿಮಾತು ಹೇಳಿದರು.

ಇನ್ನೋರ್ವ ಅತಿಥಿ ಉಜಿರೆಯ ದಿಶಾ ಸಮೂಹ ಸಂಸ್ಥೆಗಳ ಮಾಲಕ ರೊಟೇರಿಯನ್ ಅರುಣ್ ಕುಮಾರ್ ವಿದ್ಯಾರ್ಥಿಗಳ ವೈವಿಧ್ಯಮಯ ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ವಾಹ್ನ 9 ಗಂಟೆಗೆ SDMC ಸದಸ್ಯ ಕೊರಗಪ್ಪ ಲಿಂಗಾಯತ ಧ್ವಜಾರೋಹಣಗೈದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಕುಮಾರ್ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿದರು. ಅಪರಾಹ್ನದ ಕಾರ್ಯಕ್ರಮದಲ್ಲಿ ಉಜಿರೆಯ ಪ್ರಸಿದ್ಧ ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕರು ಹಾಗೂ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು ಹಾಗೂ ಶಾಲಾ ಹಿತೈಷಿಗಳು ಮತ್ತು ದಾನಿಗಳಾದ ಮೋಹನ್ ಕುಮಾರ್ ಎಲ್ಲಾ ಶಾಲಾ ಶಿಕ್ಷಕರನ್ನು ಹಾರ ಶಾಲು ಫಲ ಪುಷ್ಪಗಳೊಂದಿಗೆ ಸನ್ಮಾನಿಸಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಶಾಲೆಯ ಶಿಕ್ಷಕ ವರ್ಗವನ್ನು ಸನ್ಮಾನಿಸಲು ಸಂತೋಷಪಡುತ್ತೇನೆ. ಪಠ್ಯ ಪಠ್ಯೇತರ ಚಟುವಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಈ ಶಾಲೆಗೆ ನನ್ನ ಬೆಂಬಲ ಸದಾ ಇದೆ. ಮಕ್ಕಳನ್ನು ಮತ್ತು ಶಿಕ್ಷಕರನ್ನು ಬೆಂಬಲಿಸುವ ಮೂಲಕ ನಾನು ಸಮಾಜದ ಋಣ ತೀರಿಸುತ್ತೇನೆ ಎಂದರು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಮುಖ್ಯ ಶಿಕ್ಷಕಿ ಪೂರ್ಣಿಮಾ ಪ್ರಸ್ತಾವಿಸಿ ಸ್ಟಾಗತಿಸಿದರು. ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷ ನವೀನ್ ಕುಮಾರ್, ಕಾರ್ಯದರ್ಶಿ ಅಶೋಕ್ ಕುಮಾರ್, ಕೊರಗಪ್ಪ ಲಿಂಗಾಯತ, ಕೃಷ್ಣಪ್ಪ ಗುಡಿಗಾರ್, ಶಾಲಾ ನಾಯಕಿ ಮುಕ್ಷಿತಾ ವೇದಿಕೆಯಲ್ಲಿದ್ದರು.

ಶಿಕ್ಷಕಿ ಹೇಮಲತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸವಿತಾ ಧನ್ಯವಾದವಿತ್ತರು. ಮಾಲಿನಿ ಹೆಗಡೆ ಸಮಗ್ರವಾದ ವರದಿ ವಾಚಿಸಿದರು. ಶಿಕ್ಷಕಿಯರಾದ ವಸಂತಿ ಎಂˌ ಪ್ರೇಮಲತಾˌ ಸಾವಿತ್ರಿ ಸಿ ಡಿˌ ಪ್ರೇಮಾ ಯಚ್ ವಿ ಸುಧೀಂದ್ರ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ, ನಾಟಕ, ಪ್ರಹಸನ, ತಾಲೀಮ್ ಪಿರಮಿಡ್ ಯೋಗ ನೃತ್ಯ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಶಿಧರ್ ಕಲ್ಮಂಜˌ, ಮೋನಪ್ಪ, ಸುಧೀರ್ ಲಿಂಗಾಯತ ಮುಂತಾದ ವಿದ್ಯಾಭಿಮಾನಿಗಳು ಹಾಗೂ ಶಾಲಾ ಎಲ್ಲಾ ಪೋಷಕರು ಭಾಗವಹಿಸಿದ್ದರು.

Exit mobile version