Site icon Suddi Belthangady

ಉಜಿರೆ : ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜು – ಡಾ.ಡಿ.ವೀರೇಂದ್ರ ಹೆಗ್ಗಡೆಯವರ 76ನೇ ಹುಟ್ಟುಹಬ್ಬದ ಸಂಭ್ರಮಾಚರಣೆ

ಉಜಿರೆ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬದುಕು ನಮಗೆ ಮಾದರಿಯಾದರೆ ಸಾಕು ಉಳಿದೆಲ್ಲವುಗಳು ತನ್ನಿಂದತಾನೆ ಒಡಮೂಡಿಕೊಳ್ಳುವುದು. ಅವರ ಸೇವಾ ಕಾರ್ಯಗಳು ಅನನ್ಯ. ಪೂಜ್ಯರು ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಆಡಳಿತಾತ್ಮಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಹಾಗೂ ಸಾಧನೆಗಳು ಇಂದಿನ ಯುವ ಪೀಳಿಗೆಗೆ ಮಾತ್ರವಲ್ಲ ಮುಂದಿನವರಿಗೂ ದಾರಿದೀಪ.


‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದ ಮೊಗದ ವರ್ಚಸ್ಸು ಇಂದಿಗೂ ಜಗ ಬೆಳಗೋ ಬೆಳಕಾದದ್ದು ಅಚ್ಚರಿ ಏನಲ್ಲ. ‘ಮಾತನಾಡೋ ಮಂಜುನಾಥ’ನೆಂದು ಸಮಸ್ತ ಜನಮಾನಸದಲ್ಲಿ ತನ್ನ ಕಾರ್ಯ ವೈಖರಿಯಲ್ಲಿ ಬೆಳಗಿ ನಿಂತವರೆಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಡಾ. ಎಲ್. ಹೆಚ್. ಮಂಜುನಾಥ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಮಾತಾಡಿ, ಕತ್ತಲೆಯಲ್ಲಿದ್ದ ಅದೆಷ್ಟೋ ಬದುಕುಗಳು ಪೂಜ್ಯರಿಂದ ಬೆಳಕಾಗಿದೆ, ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ನಮ್ಮೆಲ್ಲರ ಸೌಭಾಗ್ಯವೆಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಕೃತ ಉಪನ್ಯಾಸಕ ಮಹೇಶ್ ಎಸ್. ಎಸ್. ವಂದಿಸಿ, ನಿರೂಪಿಸಿದರು.

Exit mobile version