Site icon Suddi Belthangady

ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್‌ಗೆ ಬಲಿ – ನಟೋರಿಯಸ್ ನಾಯಕಿ ಮುಂಡಗಾರು ಲತಾ ಬೆಳ್ತಂಗಡಿಗೆ ಬಂದಿರುವ ಸಾಧ್ಯತೆ – ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಎನ್‌ಎಫ್ ಹೈ ಅಲರ್ಟ್

ಬೆಳ್ತಂಗಡಿ ತಾಲೂಕಿನಲ್ಲಿಯೂ ಸಖತ್ ಸದ್ದು ಮಾಡಿದ್ದ ಮತ್ತು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ(೪೮ವ) ನ.೧೮ರಂದು ಮಧ್ಯರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲು ಎಂಬಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಘಟನೆ ನಡೆದಿದೆ.
ಕೊಲೆ, ದರೋಡೆ, ಬೆದರಿಕೆ ಸೇರಿದಂತೆ ೬೦ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿಕ್ರಂ ಗೌಡನನ್ನು ಖಾಕಿ ಪಡೆ ಬಲಿ ಪಡೆದಿರುವ ಬೆನ್ನಲ್ಲಿಯೇ ನಟೋರಿಯಸ್ ನಕ್ಸಲ್ ನಾಯಕಿ ಮುಂಡಗಾರು ಲತಾ ದಟ್ಟ ಕಾಡಿನ ಮೂಲಕ ಬೆಳ್ತಂಗಡಿಗೆ ಬರಬಹುಹುದು ಮತ್ತು ನಕ್ಸಲ್ ಹೋರಾಟದಲ್ಲಿ ಗುರುತಿಸಿಕೊಂಡು ತಲೆ ಮರೆಸಿಕೊಂಡಿರುವ ಕುತ್ಲೂರಿನ ಸುಂದರಿ ತನ್ನ ತವರೂರಿಗೆ ಗುಪ್ತವಾಗಿ ಬರಬಹುದು ಎಂದು ಗುಪ್ತಚರ ಇಲಾಖೆ ವರದಿ ನೀಡಿರುವ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರು, ನಾರಾವಿ ಮುಂತಾದ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಹೈ ಅಲರ್ಟ್ ಘೋಷಿಸಿದ್ದು ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದೆ. ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ನೇತೃತ್ವದಲ್ಲಿ ಪೊಲೀಸ್ ಇಲಾಖೆ ಮತ್ತು ಆಂಟಿ ನಕ್ಸಲ್ ಫೋರ್ಸ್ ಬಿಗಿ ಪಹರೆ ಏರ್ಪಡಿಸಿದೆ.
ವಿಕ್ರಂ ಗೌಡ ಎನ್‌ಕೌಂಟರ್-ಮುಂಡಗಾರು ಲತಾಗೆ ಶೋಧ: ಕೊಲೆ, ದರೋಡೆ, ಬೆದರಿಕೆ ಸಹಿತ ೬೦ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ಬೇಕಾಗಿದ್ದ ವಿಕ್ರಂ ಗೌಡನನ್ನು ನ.೧೮ರಂದು ಮಧ್ಯರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪೇಟೆಯಿಂದ ಸುಮಾರು ೧೦ ಕಿ. ಮೀ. ದೂರದಲ್ಲಿರುವ ಮತ್ತು ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಗಡಿ ಪ್ರದೇಶದಲ್ಲಿರುವ ಪೀತಬೈಲು ದಟ್ಟ ಕಾಡಿನಂಚಿನಲ್ಲಿ ಕಾರ್ಯಾಚರಣೆ ನಡೆಸಿ ಎನ್‌ಕೌಂಟರ್ ನಡೆಸಲಾಗಿದೆ. ಈ ಹಿಂದೆ ಮೂರು ಬಾರಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ವಿಕ್ರಂ ಗೌಡ ಈ ಬಾರಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಉಸಿರು ಚೆಲ್ಲಿದ್ದಾನೆ. ಎತ್ತರದ ಕಾಡಿನಿಂದ ಕೊರಕಲು ಕಾಲುಹಾದಿಯಲ್ಲಿ ಇಳಿದು ಮನೆಯೊಂದಕ್ಕೆ ಅಕ್ಕಿ, ಬೇಳೆ ಪಡೆಯಲು ವಿಕ್ರಂ ಗೌಡ ಮತ್ತವನ ತಂಡ ಬರುತ್ತಿತ್ತು. ವಾರದ ಹಿಂದೆಯೂ ಪೀತಬೈಲು ಕಾಡಿನಿಂದ ಹೊರಗೆ ಬಂದು ಮಲೆಕುಡಿಯರ ಮನೆಯೊಂದರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ನಕ್ಸಲ್ ನಿಗ್ರಹ ಪಡೆಯವರು ಆ ಮನೆಯವರನ್ನು ಮೊದಲೇ ತೆರವುಗೊಳಿಸಿ ಆ ಪ್ರದೇಶದಲ್ಲಿ ಕಾದು ಕುಳಿತಿದ್ದರು. ವಿಕ್ರಂಗೌಡ ತಂಡ ಮನೆಯ ಅಂಗಳಕ್ಕೆ ಬರುತ್ತಿದ್ದಂತೆಯೇ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ನಕ್ಸಲ್ ತಂಡ ಕೆಲ ಕಾಲ ಪ್ರತಿದಾಳಿ ನಡೆಸಿ ಪ್ರತಿರೋಧ ಒಡ್ಡಿತ್ತು. ಈ ವೇಳೆ ವಿಕ್ರಂ ಗೌಡನ ಎದೆಗೆ ಮೂರು ಗುಂಡುಗಳು ಬಿದ್ದಿದ್ದು ಆತ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಇದರಿಂದ ಗಾಬರಿಗೊಂಡ ತಂಡದ ಇತರ ಸದಸ್ಯರು ಅರಣ್ಯದಲ್ಲಿ ಕತ್ತಲಲ್ಲಿಯೇ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಎನ್‌ಎಫ್ ತಂಡ ಕಾಡಿನಲ್ಲಿ ಕೂಂಬಿಂಗ್ ನಡೆಸುತ್ತಿದೆ. ಘಟನೆ ಹಿನ್ನೆಲೆಯಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಮತ್ತು ಡಿಐಜಿ ಪ್ರಣಬ್ ಮೊಹಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ನಡೆಸಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಲೆನಾಡಿನಲ್ಲಿ ನಕ್ಸಲೀಯರ ಹೋರಾಟ ಆರಂಭವಾಗಿ ೨೫ ವರ್ಷಗಳಾಗಿದೆ. ಈ ಅವಧಿಯಲ್ಲಿ ಈವರೆಗೆ ೧೫ ಮಂದಿ ಸಹಚರರನ್ನು ನಕ್ಸಲೀಯರು ಕಳೆದುಕೊಂಡಿದ್ದಾರೆ. ಅದರಲ್ಲಿ ೧೫ನೆಯವನೇ ವಿಕ್ರಂ ಗೌಡ.
ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು: ಇದೇ ನವೆಂಬರ್ ಮೊದಲ ವಾರ ಪಶ್ಚಿಮಘಟ್ಟದಲ್ಲಿ ಮತ್ತೆ ನಕ್ಸಲೀಯರ ಚಲನವಲನ ಶುರುವಾಗಿದೆ ಎಂಬ ಮಾಹಿತಿ ನಕ್ಸಲ್ ನಿಗ್ರಹ ಪಡೆಗೆ ಸಿಕ್ಕಿತ್ತು. ೨೦೦೩ರ ನ.೧೭ರಂದು ಮೊದಲ ಬಾರಿಗೆ ಎನ್‌ಕೌಂಟರ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಈದು ಗ್ರಾಮದ ಸುತ್ತಮುತ್ತ ನಕ್ಸಲೀಯರು ಓಡಾಡುತ್ತಿದ್ದರೆಂಬ ಮಾಹಿತಿ ದೊರೆತಿತ್ತು. ಕೂಡಲೇ ಎಎನ್‌ಎಫ್ ಪಡೆ ಚುರುಕುಗೊಂಡಿತ್ತು. ಹಲವೆಡೆ ಪರಿಶೀಲನೆ ಜತೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಹಾಗೂ ಶಿವಮೊಗ್ಗದಲ್ಲಿರುವ ಎಲ್ಲಾ ೧೭ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಈ ಸುದ್ದಿ ಎಲ್ಲೆಡೆ ಹರಡಿತ್ತು. ನ.೧೦ರಂದು ನಕ್ಸಲೀಯರಾದ ಮುಂಡಗಾರು ಲತಾ, ಜಯಣ್ಣ ಅವರು ಕೊಪ್ಪ ತಾಲೂಕಿನ ಸುಬ್ಬೇಗೌಡರ ಮನೆಗೆ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ನಿಗ್ರಹ ಪಡೆ ಸಿಬ್ಬಂದಿ ಹಾಗೂ ಜಯಪುರ ಪೊಲೀಸರು ಅದೇ ದಿನ ರಾತ್ರಿ ೧೧ರ ವೇಳೆಗೆ ಸ್ಥಳಕ್ಕೆ ತೆರಳಿದ್ದರು. ಅಷ್ಟರೊಳಗೆ ರಾತ್ರಿ ೯ ಗಂಟೆ ವೇಳೆಗೆ ನಕ್ಸಲೀಯರು ಊಟ ಮಾಡಿ ತೆರಳಿದ್ದರು. ಪೊಲೀಸರು ಸುಬ್ಬೇಗೌಡ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇದೇ ಸಂದರ್ಭದಲ್ಲಿ ಮನೆಯೊಳಗೆ ಎಸ್‌ಬಿಎಂಎಲ್ ಬಂದೂಕುಗಳು ಹಾಗೂ ಮದ್ದು ಗುಂಡುಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಒಂಟಿ ಮನೆಗೆ ಭೇಟಿ ನೀಡಿರುವ ಸಂಬಂಧ ಎಎನ್‌ಎಫ್ ಅಧಿಕಾರಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ನಕ್ಸಲೀಯರು ಬಂದು ಹೋಗಿರುವುದು ಖಚಿತವಾಗಿದ್ದರಿಂದ ಮುಂಡಗಾರು, ಯಡಗುಂದ, ಕಡೇಗುಂದಿ, ಮುಂಡೋಡಿ ಭಾಗದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಇದರ ಜತೆಗೆ ಜಿಲ್ಲೆಯ ಕೆರೆಕಟ್ಟೆ, ಕಿಗ್ಗಾ, ದೇವಾಲಕೊಪ್ಪ ಹಾಗೂ ಜಯಪುರದಲ್ಲಿರುವ ೪ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಹಾಗೂ ಪೊಲೀಸರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಿದ್ದರು. ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿಗೆ ತೆರಳುವ ಮಾರ್ಗಗಳಲ್ಲಿ ನಾಕಾಬಂಧಿ ಮಾಡಿ ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಚಿಕ್ಕಮಗಳೂರಿನಲ್ಲಿ ಎಎನ್‌ಎಫ್ ಚುರುಕಾಗುತ್ತಿದ್ದಂತೆ ಅತ್ತ ನೆರೆಯ ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ವಿಕ್ರಂಗೌಡ ಬಲಿಯಾಗಿದ್ದಾನೆ. ಕೊಪ್ಪ ತಾಲೂಕಿನ ಕಡೇಗುಂದಿಯಲ್ಲಿ ನಕ್ಸಲೀಯರು ಪತ್ತೆಯಾದ ಹತ್ತೇ ದಿನಕ್ಕೆ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿಯಾಗಿದ್ದಾನೆ. ವಿಕ್ರಂ ಗೌಡ ಬಲಿಯಾಗಿರುವ ಕಬ್ಬಿನಾಲೆಯ ಬಾಳ್ವಾರು, ಮೆದಿಪು, ಮತ್ತಾವು, ಹೊಂಡದರ್ಕಾಲ್, ಕುಚೂರು, ಕೊರ್ತಬೈಲು, ಮುಂಡಾನಿ, ಕಂಗೆ, ಕೊಳ್ಳಾಡಿ ಹಾಗೂ ನಾಡಾಲಿನ ತಿಂಗಳಮಕ್ಕಿ, ತೆಂಗಮಾರು, ಪೀತಬೈಲು ಇಡೀ ಪರಿಸರ ಕಬ್ಬಿನಾಲೆಯ ಸುತ್ತಮುತ್ತಲಿನ ಕಾಡಿನಿಂದ ಆವೃತ್ತವಾಗಿದೆ.
ನಕ್ಸಲರ ಜಾಡು ಪತ್ತೆ ಹಚ್ಚಿದ್ದ ಎಎನ್‌ಎಫ್: ಮಾರ್ಚ್ ೧೮ರಂದು ನಕ್ಸಲರ ಚಲನವಲನದ ವರದಿಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ-ಕೊಡಗು ಗಡಿ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಕೂಜುಮಲೆ ರಬ್ಬರ್ ಎಸ್ಟೇಟ್ ಬಳಿಯ ಅಂಗಡಿಯೊಂದಕ್ಕೆ ೮ ಮಂದಿ ಶಂಕಿತ ನಕ್ಸಲರ ತಂಡವು ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿ ದಿನಸಿ ವಸ್ತುಗಳನ್ನು ಖರೀದಿಸಿದ ವರ್ತಮಾನ ಲಭ್ಯವಾಗಿತ್ತು. ಕೂಜುಮಲೆ ರಬ್ಬರ್ ಎಸ್ಟೇಟ್ ಸುಳ್ಯ ತಾಲೂಕಿನ ಗುತ್ತಿಗಾರು, ಕೊಲ್ಲಮೊಗ್ರು ಮತ್ತು ಕಲ್ಪಕಾರು ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಎಪ್ರಿಲ್ ೬ರಂದು ಕಡಬ ತಾಲೂಕಿನ ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಶಂಕಿತ ತಂಡ ಆಗಮಿಸಿ ಊಟ ಮಾಡಿ ದಿನಸಿ ಸಾಮಗ್ರಿ ಪಡೆದು ತೆರಳಿತ್ತು. ತಂಡದಲ್ಲಿ ೬ ಮಂದಿ ಇದ್ದು ಮನೆಗೆ ಬಂದ ನಕ್ಸಲರು ಶಸ್ತ್ರಾಸ್ತ್ರ ಹಿಡಿದುಕೊಂಡಿದ್ದರು. ಬಳಿಕ ಅದೇ ಪ್ರದೇಶಕ್ಕೆ ಹೊಂದಿಕೊಂಡಿರುವ ಅರಣ್ಯಕ್ಕೆ ತೆರಳಿದ್ದರು. ಮಾರ್ಚ್ ೧೬ರಂದು ನಕ್ಸಲರು ಮತ್ತೆ ಕೊಜುಮಲೆಗೆ ಭೇಟಿ ಅಡ್ಡಾಡಿದ್ದರು. ಮಾರ್ಚ್ ೨೩ರಂದು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದರು. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿ ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ತೆರಳಿದ್ದರು. ಆಗಸ್ಟ್ ೭ರಂದು ಬೆಂಗಳೂರಿನಲ್ಲಿ ರಹಸ್ಯ ಸಭೆ ಹಾಗೂ ಗೆಳತಿಯೊಬ್ಬರನ್ನು ಭೇಟಿ ಮಾಡಲು ಆಗಮಿಸಿದ್ದ ಮಾವೋವಾದಿ ನಿಷೇಧಿತ ಸಂಘಟನೆಯ ಸದಸ್ಯ ಅನಿರುದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸಿರುವ ಪೊಲೀಸರು ಹಲವು ಮಾಹಿತಿಗಳನ್ನು ಬಹಿರಂಗ ಪಡಿಸಿದ್ದು ರಾಜ್ಯದಲ್ಲಿ ಸದ್ದಡಗಿರುವ ನಕ್ಸಲ್ ಚಟುವಟಿಕೆ ಮತ್ತೆ ಚುರುಕುಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ನವೆಂಬರ್ ೮ರಂದು ಕಾರ್ಕಳದ ಈದು ಗ್ರಾಮದಲ್ಲಿ ಇಬ್ಬರು ನಕ್ಸಲರ ಓಡಾಟದ ವದಂತಿ ಉಂಟಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು ನವೆಂಬರ್ ೮ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಡೆಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಸುಬ್ಬಿಗೌಡ ಎಂಬವರ ಒಂಟಿ ಮನೆಯಲ್ಲಿ ಮುಂಡಗಾರು ಲತಾ, ಜಯಣ್ಣ ಇತರರು ಅಡುಗೆ ಸಿದ್ಧಪಡಿಸಿ ಊಟ ಮಾಡಿದ್ದರು. ಈ ಎಲ್ಲಾ ಮಾಹಿತಿ ಸಂಗ್ರಹಿಸಿದ್ದ ಎಎನ್‌ಎಫ್ ಅಧಿಕಾರಿಗಳು ನಕ್ಸಲರು ಜಾಡು ಕಂಡು ಹಿಡಿದಿದದ್ದರು. ಹೀಗಾಗಿ ವಿಕ್ರಂ ಗೌಡನ ಸುಳಿವು ಖಚಿತವಾಗಿ ಎಎನ್‌ಎಫ್‌ಗೆ ಸಿಕ್ಕಿತ್ತು.
ಹುತಾತ್ಮರ ದಿನ ಆಚರಣೆಗೆ ಬಂದಿದ್ದರೇ?: ೨೦೦೩ರ ನ. ೧೭ಕ್ಕೆ ಈದುವಿನಲ್ಲಿ ಮೊದಲ ಎನ್‌ಕೌಂಟರ್ ನಡೆದಿತ್ತು. ಇದರ ೨೧ನೇ ವರ್ಷ ಕಳೆದು ಎರಡೇ ದಿನದಲ್ಲಿ ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ನಕ್ಸಲ್ ಮೃತಪಟ್ಟ ದಿನ ಹತ್ಯೆಯಾದ ಸ್ಥಳಕ್ಕೆ ಇತರ ನಕ್ಸಲ್ ಮುಖಂಡರು ತೆರಳಿ ಗೌರವ ಸಲ್ಲಿಸಿ ಹುತಾತ್ಮರ ದಿನ ಆಚರಿಸುವುದು ಅವರು ರೂಢಿಸಿಕೊಂಡಿರುವ ಕ್ರಮ. ಅದರಂತೆ ಈ ಭಾಗಕ್ಕೆ ವಿಕ್ರಂ ಗೌಡ ಹುತಾತ್ಮ ದಿನಾಚರಣೆ ಆಚರಿಸಲು ಬಂದಿದ್ದ ಎಂದು ಹೇಳಲಾಗುತ್ತಿದೆ. ಶರಣಾಗತಿ ಆಗಲು ಬಂದಿದ್ದ ಎಂದು ಹೇಳಲಾಗುತ್ತಿದ್ದರೂ ಶರಣಾಗತಿ ಎಂಬುದು ನಕ್ಸಲ್ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಆತ ನಂಬಿದ್ದರಿಂದ ಆತ ಶರಣಾಗತಿಗೆ ಆಗಮಿಸಿರುವ ಸಾಧ್ಯತೆ ವಿರಳ. ಇನ್ನೊಂದೆಡೆ ಶರಣಾಗತಿ ವಿಚಾರದಲ್ಲಿ ತಂಡದ ಸದಸ್ಯರೊಳಗೆ ಪರ-ವಿರೋಧ ಅಭಿಪ್ರಾಯವಿತ್ತು ಎಂದು ತಿಳಿದು ಬಂದಿದೆ.
ಹೈ ಅಲರ್ಟ್ ಆಗಿದ್ದ ನಕ್ಸಲ್ ನಿಗ್ರಹ ಪಡೆಯವರು ಎನ್‌ಕೌಂಟರ್‌ಗೆ ಸಿದ್ಧತೆ ನಡೆಸಿದ್ದರು: ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನ ಗಡಿ ಭಾಗವಾದ ಈದು ಸಮೀಪದ ಬೊಳ್ಳೆಟ್ಟುವಿನಲ್ಲಿ ನಕ್ಸಲ್ ಚಟುವಟಿಕೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಚುರುಕುಗೊಳಿಸಿದ್ದ ನಕ್ಸಲ್ ನಿಗ್ರಹ ದಳದವರು ಕಾರ್ಯಾಚರಣೆ ವೇಳೆ ನಕ್ಸಲರಿಂದ ಪ್ರತಿರೋಧ ಎದುರಾದರೆ ಎನ್‌ಕೌಂಟರ್ ನಡೆಸಲು ಸಿದ್ಧತೆ ನಡೆಸಿದ್ದರು. ಅದರಂತೆ ನಟೋರಿಯಸ್ ನಕ್ಸಲ್ ನಾಯಕ ವಿಕ್ರಂಗೌಡನನ್ನು ಖಾಕಿ ಪಡೆ ಹೊಡೆದುರುಳಿಸಿದೆ. ಇನ್ನೋರ್ವ ನಕ್ಸಲ್ ನಾಯಕಿ ಮುಂಡಗಾರು ಲತಾಳನ್ನು ಬಲೆಗೆ ಕೆಡವಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಎಎನ್‌ಎಫ್ ಕಾರ್ಯಾಚರಣೆಗೆ ಕೈ ಜೋಡಿಸಿದ್ದ ಪೊಲೀಸ್ ಇಲಾಖೆ: ಬೆಳ್ತಂಗಡಿ ತಾಲೂಕಿನ ಕುತ್ಲೂರು, ನಾರಾವಿ ಪರಿಸರದಲ್ಲಿ ಹೈ ಅಲರ್ಟ್ ಘೋಷಿಸಿದ್ದ ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆಗೆ ಪೊಲೀಸರು ಕೈ ಜೋಡಿಸಿದ್ದರು. ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದ ಪಶ್ಚಿಮಘಟ್ಟದ ತಪ್ಪಲಿನ ಈದು ಗ್ರಾಮದ ಬೊಲ್ಲೊಟ್ಟುವಿನಿಂದ ಒಂದು ಕಿಲೋ ಮೀಟರ್ ದೂರದ ಮುಸ್ಲಿಂ ಕಾಲೋನಿ ಬಳಿಯಿರುವ ಬಂಡೆಕಲ್ಲು ಬಳಿ ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡ ಹಾಡಹಗಲೇ ಕಾಣಿಸಿಕೊಂಡ ಬಗ್ಗೆ ಸುದ್ದಿಗಳು ಗ್ರಾಮದ ಜನರಲ್ಲಿ ಹರಿದಾಡುತ್ತಿದ್ದಂತೆಯೇ ಪೊಲೀಸ್ ಇಲಾಖೆ ಹಾಗೂ ಎಎನ್‌ಎಫ್ ತನಿಖೆ ಚುರುಕುಗೊಳಿಸಿತ್ತು. ಸುಮಾರು ೩೦ರಿಂದ ೪೦ ವರ್ಷ ವಯಸ್ಸಿನ ಯುವಕರು ನಕ್ಸಲರ ತಂಡದಲ್ಲಿದ್ದು ಹಾಡಹಗಲೇ ಕಾಣ ಸಿಕ್ಕಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಯಲಾಗುತ್ತಿದ್ದಂತೆಯೇ ಜನರು ಆತಂಕಕ್ಕೊಳಗಾಗಿದ್ದರು. ಕಾಡುತ್ಪತ್ತಿ ಸಂಗ್ರಹಕ್ಕೆ ತೆರಳಿದ್ದವರಿಗೆ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸ್ ಇಲಾಖೆ ಸ್ಥಳೀಯ ನಿವಾಸಿಗಳು ಹಾಗೂ ಕಾಡಂಚಿನ ಸಮೀಪ ವಾಸವಿರುವವರ ಬಳಿ ಮಾಹಿತಿ ಪಡೆಯುವ ಪ್ರಯತ್ನ ನಡೆಸಿತ್ತು. ನಕ್ಸಲ್ ನಿಗ್ರಹದಳದವರು ಶ್ವಾನದಳ ಹಾಗೂ ಡ್ರೋನ್ ನೆರವಿನಿಂದ ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕಿನ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿದ್ದರು.
ಈದು ಗ್ರಾಮದಲ್ಲಿ ನಕ್ಸಲ್ ಹೆಜ್ಜೆ ಗುರುತು ಪತ್ತೆ ಕಾಡಿಚ್ಚಿನಂತೆ ಹರಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪೊಲೀಸರು ಹಾಗೂ ಎಎನ್‌ಎಫ್ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸುತ್ತಿದ್ದು ಸಾರ್ವಜನಿಕರು ಅನವಶ್ಯಕ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದರು. ಈ ಮಧ್ಯೆ ಧರ್ಮಸ್ಥಳ ಗ್ರಾಮದ ನಿವಾಸಿಯೋರ್ವರನ್ನು ಭೇಟಿಯಾಗಲು ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಈರ್ವರು ಶಂಕಿತ ನಕ್ಸಲರನ್ನು ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದರು.
ಕಸ್ತೂರಿ ರಂಗನ್ ವರದಿಯ ವಿರುದ್ಧ ಜನರ ಹೋರಾಟ ತೀವ್ರಗೊಳ್ಳುತ್ತಿರುವಂತೆಯೇ ದಶಕಗಳ ಬಳಿಕ ಮಲೆನಾಡಿನಲ್ಲಿ ನಕ್ಸಲರ ಸದ್ದು ಮತ್ತೆ ಹೆಚ್ಚಾಗಿದೆ ಎಂಬ ಸುದ್ದಿಯ ನಡುವೆಯೇ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಿವಾಸಿಯೋರ್ವರನ್ನು ನಕ್ಸಲರು ಭೇಟಿಯಾಗಿದ್ದಾರೆ ಎಂಬ ಮಾಹಿತಿ ಜನರನ್ನು ಬೆಚ್ಚಿ ಬೀಳಿಸಿತ್ತು. ನಕ್ಸಲ್ ಪರ ಚಿಂತನೆ ಹೊಂದಿರುವ ಧರ್ಮಸ್ಥಳ ನಿವಾಸಿಯನ್ನು ಶಂಕಿತ ನಕ್ಸಲರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದ ಬೆನ್ನಲ್ಲಿಯೇ ಕಾರ್ಯಾಚರಣೆಗೆ ಇಳಿದಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣಾ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಈರ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.
ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ವಿಚಾರ ಪ್ರಚಾರ ಆದ ಕೂಡಲೇ ಎಚ್ಚೆತ್ತುಕೊಂಡಿದ್ದ ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ವಿವಿಧೆಡೆ ಕೂಂಬಿಂಗ್ ನಡೆಸಿದ್ದು ಶೃಂಗೇರಿ ತಾಲೂಕಿನ ನೆಮ್ಮಾರ್ ಸಮೀಪದ ಬುಕಡಿಬೈಲಿನಲ್ಲಿ ನಕ್ಸಲರ ಬಗ್ಗೆ ಸಹಾನುಭೂತಿ ಹೊಂದಿರುವ ಇಬ್ಬರನ್ನು ಶೃಂಗೇರಿ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯೊಂದಿಗೆ ಇದೀಗ ಎನ್‌ಕೌಂಟರ್‌ನಲ್ಲಿ ವಿಕ್ರಂ ಗೌಡ ಬಲಿಯಾಗಿದ್ದಾನೆ.
ಶಿಶಿಲ, ಶಿಬಾಜೆಯಲ್ಲಿಯೂ ಕೂಂಬಿಂಗ್ ನಡೆಸಲಾಗಿತ್ತು: ಬೆಳ್ತಂಗಡಿ ತಾಲೂಕಿನ ಕುತ್ಲೂರು, ನಾರಾವಿ ಮುಂತಾದ ಪ್ರದೇಶದಲ್ಲಿ ನಕ್ಸಲರ ಚಲನವಲನ ಈ ಹಿಂದೆ ಕಂಡು ಬಂದಿತ್ತು. ಗಡಿಭಾಗವಾದ ಕಾರ್ಕಳ ತಾಲೂಕಿನ ಈದು ಪ್ರದೇಶದಲ್ಲಿ ನಕ್ಸಲರ ಚಟುವಟಿಕೆ ಹೆಚ್ಚಿತ್ತು. ಎನ್‌ಕೌಂಟರ್ ಮೂಲಕ ನಕ್ಸಲರನ್ನು ಮಟ್ಟ ಹಾಕಲಾಗಿತ್ತು. ಮೂಲಭೂತ ಸೌಕರ್ಯಗಳನ್ನು ಪಡೆಯುವುದಕ್ಕಾಗಿ ನಾಡಿನಲ್ಲಿದ್ದ ವಿದ್ಯಾವಂತರೂ ಕಾಡಿನತ್ತ ಹೆಜ್ಜೆ ಹಾಕಿ ಕ್ರಾಂತಿಕಾರಿ ಹೋರಾಟಕ್ಕೆ ಮುಂದಾಗಿದ್ದಾರೆ, ಪ್ರಮುಖ ನಕ್ಸಲ್ ನಾಯಕರೊಂದಿಗೆ ಬೆಳ್ತಂಗಡಿ ತಾಲೂಕಿನ ಕೆಲವು ಯುವಕರು ಕಾನೂನು ಬಾಹಿರ ಕೃತ್ಯದಲ್ಲಿ ಕೈ ಜೋಡಿಸಿದ್ದಾರೆ ಎಂದು ಇಲಾಖೆ ಮಾಹಿತಿ ಸಂಗ್ರಹ ನಡೆಸಿತ್ತು. ೨೦೨೦೪ರ ಲೋಕಸಭಾ ಚುನಾವಣೆಯ ವೇಳೆ ಶಿಶಿಲ ಗ್ರಾಮದ ಕಲ್ಲಾಜೆ ಮತ್ತು ಶಿಬಾಜೆ ಗ್ರಾಮದ ಅಜಿರಡ್ಕದಲ್ಲಿ ನಕ್ಸಲರ ಪತ್ತೆಗಾಗಿ ನಕ್ಸಲ್ ನಿಗ್ರಹ ಪಡೆ ಕೂಂಬಿಗ್ ನಡೆಸಿತ್ತು. ಚುನಾವಣೆ ವೇಳೆ ಸುಳ್ಯ ತಾಲೂಕಿನಲ್ಲಿ ಕಂಡು ಬಂದಿದ್ದ ನಕ್ಸಲರು ಶಿರಾಡಿ, ಉದನೆ ಕಾಡಿನ ಮೂಲಕ ಬೆಳ್ತಂಗಡಿಗೆ ಬರುತ್ತಾರೆ ಎಂಬ ಶಂಕೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ನಕ್ಸಲರು ಪತ್ತೆಯಾಗಿರಲಿಲ್ಲ. ಕೆಲವೆಡೆ ನಕ್ಸಲರಿಗೆ ಊರವರು ಬೆಂಬಲ ಕೊಡುತ್ತಾರೆ ಎಂಬ ಶಂಕೆ ಇಲಾಖೆಯದ್ದಾಗಿದೆ. ಇದಕ್ಕಾಗಿಯೇ ಎಎನ್‌ಎಫ್ ತೀವ್ರ ಶೋಧ ನಡೆಸಿತ್ತು. ನಕ್ಸಲರ ಇರುವಿಕೆ ಕಾಣಿಸಿಕೊಂಡ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ಎಎನ್‌ಎಫ್‌ನ ಎಸ್‌ಪಿ ಜಿತೀಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ನಾಲ್ಕು ತಂಡಗಳಿಂದ ಶೋಧ ನಡೆಯುತ್ತಿತ್ತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಬೇರೆ ಬೇರೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆದಿತ್ತು.
ಹಲವು ನಕ್ಸಲರು ಶರಣಾಗಿದ್ದರು: ನಕ್ಸಲರ ಪೈಕಿ ನಟೋರಿಯಸ್ ಎಂದೇ ಬಣ್ಣಿಸಲ್ಪಡುತ್ತಿದ್ದ ವಿಕ್ರಂಗೌಡ ನೇತೃತ್ವದ ೬ ಮಂದಿ ಶರಣಾಗತಿಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಮತ್ತೆ ಅದೇ ವಿಕ್ರಂ ಗೌಡ ಬಣದ ನಕ್ಸಲರ ಹೆಜ್ಜೆ ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನಲ್ಲಿ ಕಂಡು ಬರುತ್ತಿದೆ ಎಂದು ಪೊಲೀಸ್ ಇಲಾಖೆ ಹಾಗೂ ನಕ್ಸಲ್ ನಿಗ್ರಹ ಪಡೆ ಶಂಕೆ ವ್ಯಕ್ತಪಡಿಸಿತ್ತು. ಈ ಹಿಂದೆ ಸರಕಾರ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನಾ ಫಲಕದಲ್ಲಿ ೨೨ ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ ಇನ್ನು ಕೆಲವರು ಶರಣಾಗಿದ್ದರು. ಈಗ ಇವರ ಸಂಖ್ಯೆ ಸುಮಾರು ೧೨ಕ್ಕೆ ಇಳಿದಿದ್ದು ೬ರಿಂದ ೮ ಮಂದಿ ಸಕ್ರಿಯರಾಗಿದ್ದಾರೆ. ಅವರಲ್ಲಿ ಬೆರಳೆಣಿಕೆಯ ಮಂದಿ ಕರ್ನಾಟಕ ರಾಜ್ಯದವರು. ಕೇರಳ, ಝಾಖಂಡ್ ಮತ್ತು ಛತ್ತೀಸ್‌ಘಡದಲ್ಲಿ ಸರಕಾರಗಳು ನಕ್ಸಲರನ್ನು ನಿಗ್ರಹಿಸಲು ಭಾರೀ ಕಾರ್ಯಾಚರಣೆ ನಡೆಸುತ್ತಿರುವುದು ಹಾಗೂ ಕೇರಳದಲ್ಲಿ ನಕ್ಸಲ್ ಗುಂಪಿನ ಆಂತರಿಕ ಭಿನ್ನಾಭಿಪ್ರಾಯ, ನಾಗರಿಕರಿಂದ ಬೆಂಬಲ ಕುಸಿತ ಮುಂತಾದ ಕಾರಣದಿಂದ ಶರಣಾಗತಿಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ವಿಕ್ರಂ ಗೌಡ ಬಣದ ನಕ್ಸಲರು ಮತ್ತೆ ಆಕ್ಟಿವ್ ಆಗಿದ್ದಾರೆ ಎಂಬ ಸಂಶಯದಲ್ಲಿ ಕಾರ್ಯಾಚರಣೆ ಮುಂದುವರಿದಿತ್ತು. ರಾಜ್ಯದಲ್ಲಿ ಈವರೆಗೆ ೧೪ ಮಂದಿ ನಕ್ಸಲರು ಶರಣಾಗಿದ್ದಾರೆ. ಅಂಥವರಿಗೆ ಸರಕಾರ ಪ್ಯಾಕೇಜ್ ಘೋಷಿಸಿದೆ. ೨೦೧೦ರಲ್ಲಿ ವೆಂಕಟೇಶ್, ಜಯಾ, ಸರೋಜಾ, ಮಲ್ಲಿಕಾ, ೨೦೧೪ರಲ್ಲಿ ಸಿರಿಮನೆ ನಾಗರಾಜ್, ನೂರ್ ಜಲ್ಪಿಕರ್, ೨೦೧೬ರಲ್ಲಿ ಭಾರತಿ, ಫಾತಿಮಾ, ಪದ್ಮನಾಭ್, ಪರಶುರಾಮ್, ೨೦೧೭ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ ಅವರು ಜಿಲ್ಲಾಡಳಿತದ ಮೂಲಕ ಶರಣಾಗಿದ್ದರು. ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂಚೂಣಿಯಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನದ ಬಳಿಕ ಮಲೆನಾಡಿನಲ್ಲಿ ನಕ್ಸಲ್ ನೆಲೆಗೆ ಕಡಿವಾಣ ಬಿದ್ದಿತ್ತು.

ಎನ್‌ಕೌಂಟರ್‌ಗೆ ಬಲಿಯಾದ ಹಾಜಿಮಾ, ಪಾರ್ವತಿ, ಸಾಕೇತ್‌ರಾಜನ್, ವಸಂತ ಗೌಡ ಸಾಲಿಗೆ ಸೇರಿದ ವಿಕ್ರಂ ಗೌಡ: ಕೇರಳ, ಝಾರ್ಖಂಡ್, ಛತ್ತೀಸ್‌ಗಢದಲ್ಲಿ ನಕ್ಸಲ್ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುತ್ತಿರುವುದರಿಂದ ಅಲ್ಲಿನ ನಕ್ಸಲರು ಕರ್ನಾಟಕದ ಪಶ್ಚಿಮ ಘಟ್ಟವನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸ್ ಇಲಾಖೆ ಶಂಕೆ ವ್ಯಕ್ತಪಡಿಸಿತ್ತು. ಪಶ್ಚಿಮಘಟ್ಟದಲ್ಲಿ ನಕ್ಸಲ್ ಇರುವಿಕೆ ೨೦೦೨ರಲ್ಲಿ ಗೋಚರವಾಗಿತ್ತು. ೨೦೦೩ರಲ್ಲಿ ಈದು ಗ್ರಾಮದ ಬೊಲ್ಲೊಟ್ಟುನಲ್ಲಿ ರಾಯಚೂರು ಮೂಲದ ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರು ನಕ್ಸಲರನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಯಶೋದಾ ಎಂಬಾಕೆ ಗಾಯಗೊಂಡು ಆಸ್ಪತ್ರೆ ಸೇರಿದ್ದಳು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು. ನಕ್ಸಲ್ ಕಾರ್ಯಾಚರಣೆಯಲ್ಲಿ ನಡೆಸಿದ ಎನ್‌ಕೌಂಟರ್ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ ಆಂಧ್ರಪ್ರದೇಶದ ನಕ್ಸಲ್ ಪರ ಹೋರಾಟಗಾರ, ಕವಿ, ಗದ್ದರ್ ಭಾಗವಹಿಸಿದ್ದರು. ಅವರ ನೇತೃತ್ವದಲ್ಲಿ ಪ್ರಗತಿಪರರು ನಾರಾವಿ ಪರಿಸರದಲ್ಲಿ ಪ್ರತಿಭಟನಾ ಸಭೆ ನಡೆಸಿದ್ದರು. ರಾಜ್ಯದ ನಕ್ಸಲ್ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ನಕ್ಸಲ್ ನಾಯಕ ಸಾಕೇತ್ ರಾಜನ್ ಮೆಣಸಿನಹಾಡ್ಯದಲ್ಲಿ ೨೦೦೫ರ ಫೆ.೬ರಂದು ನಡೆದಿದ್ದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ. ೨೦೧೦ರ ಮಾ.೧ರಂದು ಮೈರೊಳ್ಳಿಯಲ್ಲಿ ನಕ್ಸಲ್ ವಸಂತ ಗೌಡನ ಎನ್ಕೌಂಟರ್ ಆಗಿತ್ತು. ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ೨೦೧೧ರ ಡಿಸೆಂಬರ್ ತಿಂಗಳಲ್ಲಿ ತಿಂಗಳೆ ತೆಂಗುಮಾರ್ ಎಂಬಲ್ಲಿ ಗುಂಡಿ ಸದಾಶಿವ ಗೌಡರನ್ನು ನಕ್ಸಲರು ಹತ್ಯೆಗೈದಿದ್ದರು. ಆ ಬಳಿಕದ ದಿನಗಳಲ್ಲಿ ತಣ್ಣಗಾಗುತ್ತಾ ಸಾಗಿದ್ದ ನಕ್ಸಲ್ ಚಟುವಟಿಕೆ ಇದೀಗ ಮತ್ತೆ ಗರಿಗೆದರುತ್ತಿರುವ ಆತಂಕಕಾರಿ ಬೆಳವಣಿಗೆ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸುದ್ದಿಯಾಗುತ್ತಿತ್ತು. ನಕ್ಸಲರ ಚಟುವಟಿಕೆಗಳು ಕಡಿಮೆಗೊಂಡಿದೆ ಎನ್ನುವ ಕಾರಣಕ್ಕೆ ನಕ್ಸಲ್ ನಿಗ್ರಹ ದಳ ಕೂಬಿಂಗ್ ಕಾರ್ಯಾಚರಣೆ ಸಡಿಲಿಕೆ ಮಾಡಿತ್ತು. ಕಾರ್ಕಳದ ಪೇಟೆಯಲ್ಲಿ ಪ್ರತ್ಯೇಕವಾದ ಎಎನ್‌ಎಎಫ್ ಕೇಂದ್ರವಿದೆ. ಪಶ್ಚಿಮಘಟ್ಟದಲ್ಲಿ ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಹೆಚ್ಚಿನ ಅನುಭವಿ ಎಎನ್‌ಎಫ್ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆಗೊಳಿಸಲಾಗಿದ್ದು ಹೊಸ ಸಿಬ್ಬಂದಿಗಳು ಎಎನ್‌ಎಫ್‌ಗೆ ನೇಮಕಗೊಂಡಿದ್ದಾರೆ.

ಲತಾಳನ್ನು ಬಲೆಗೆ ಕೆಡವಲು ಸಿದ್ಧತೆ ನಡೆಸಿದ ಖಾಕಿ ಪಡೆ: ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಚುರುಕುಗೊಂಡಿರುವುದು ಸುದ್ದಿಯಾಗುತ್ತಿರುವಂತೆಯೇ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮುಂಡಗಾರು ಗ್ರಾಮದಲ್ಲಿ ನಕ್ಸಲರಿಗೆ ಸಂಬಂಧಿಸಿದ ಮೂರು ಬಂದೂಕುಗಳು ಪತ್ತೆಯಾಗಿತ್ತು. ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಶೃಂಗೇರಿ ಹಾಗೂ ಕೊಪ್ಪದಲ್ಲಿ ಸಭೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರು ಕೂಂಬಿಂಗ್ ಮಾಡುತ್ತಿರಬೇಕಾದರೆ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯಲ್ಲಿ ಮೂರು ಬಂದೂಕು ಲಭಿಸಿದ್ದು ಹೆಚ್ಚಿನ ಅಲರ್ಟ್ ಘೋಷಿಸಲಾಗಿತ್ತು. ಆ ಮೂಲಕ ದಶಕದ ಬಳಿಕ ಮಲೆನಾಡಿನಲ್ಲಿ ನಕ್ಸಲರು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿತ್ತು. ಮೂಲಗಳ ಪ್ರಕಾರ ಮಲೆನಾಡಿನಲ್ಲಿ ಸಕ್ರಿಯರಾಗಿದ್ದ ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಸಭೆ ನಡೆದಿರುವ ಬಗ್ಗೆಯೂ ಪೊಲೀಸರಿಗೆ ಸುಳಿವು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಸಿಐಡಿ ಎಡಿಜಿಪಿ ಪ್ರಣಬ್ ಮೊಹಂತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜತೆಗೆ ಎಲ್ಲೆಡೆ ವ್ಯಾಪಕ ಹೈಅಲರ್ಟ್ ಘೋಷಿಸಲಾಗಿತ್ತು. ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಕ್ಸಲರು ಸಭೆ ನಡೆಸಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು. ಪರಿಸರ ಅತೀ ಸೂಕ್ಷ್ಮ ವಲಯದ ಪರಿಸರ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ, ಪುಷ್ಪಗಿರಿ ವನ್ಯಜೀವಿ ವಿರುದ್ಧದ ಅಪಸ್ವರ-ವಿರೋಧಗಳು ನಕ್ಸಲರಿಗೆ ವರದಾನವಾಗಿತ್ತು.ನಕ್ಸಲ್ ನಾಯಕಿ ಮುಂಡಗಾರು ಲತಾಳ ಪತ್ತೆಗೆ ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸ್ ಇಲಾಖೆ ಶೋದ ಮುಂದುವರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಲತಾ ಪೊಲೀಸರ ಹಿಟ್‌ಲಿಸ್ಟ್‌ನಲ್ಲಿದ್ದಾಳೆ. ೨೦೨೧ರಲ್ಲಿ ಬಿ.ಜಿ. ಕೃಷ್ಣಮೂರ್ತಿ ಹಾಗೂ ಪ್ರಭಾಳನ್ನು ಬಂಧಿಸಿದ ಬಳಿಕ ಮುಂಚೂಣಿಗೆ ಬಂದಿರುವ ಹೆಸರು ಮುಂಡಗಾರುನ ಲತಾ. ಕೊಪ್ಪ ತಾಲೂಕಿನ ಬುಕ್ಕಡಿ ಬೈಲಿನ ಮುಂಡಗಾರು ಲತಾಳನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಲತಾ ಗುರುತಿಸಿಕೊಂಡಿದ್ದಳು. ಪೊಲೀಸರು ರಿಲೀಸ್ ಮಾಡಿರುವ ಮೋಸ್ಟ್ ವಾಂಟೆಂಡ್ ಲಿಸ್ಟ್‌ನಲ್ಲಿ ಲತಾ ಕೂಡ ಒಬ್ಬಳು. ಇವಳ ಜಾಡು ಪತ್ತೆ ಮಾಡಿಕೊಟ್ಟವರಿಗೆ ಸರ್ಕಾರ ಐದು ಲಕ್ಷ ಬಹುಮಾನ ಘೋಷಿಸಿದೆ. ಲತಾ ಮಲೆನಾಡಿನಲ್ಲಿ ಬಂದೂಕು ಹೆಗಲಿಗೇರಿಸಿಕೊಂಡು ಕ್ರಾಂತಿಯ ಹಾದಿ ಹಿಡಿದಾಗ ಜನರು ಬೆಚ್ಚಿ ಬಿದ್ದಿದ್ದರು. ಪೊಲೀಸರು ಲತಾ ಬಗ್ಗೆ ಮೋಸ್ಟ್ ವಾಂಟೆಡ್ ಕರಪತ್ರ ಬಹಿರಂಗಗೊಳಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಭೂಗತವಾಗಿಯೇ ಇರುವ ಲತಾ ಈ ಹಿಂದೆ ಬಿ.ಜಿ.ಕೆ. ತಂಡದಲ್ಲಿ ಗುರುತಿಸಿಕೊಂಡಿದ್ದಳು. ಕಳೆದ ವರ್ಷ ಡಿಸೆಂಬರ್ ವೇಳೆಗೆ ಕೇರಳದ ಗಡಿಭಾಗದಲ್ಲಿ ನಕ್ಸಲರು ಅಡಗಿದ ತಂಗುದಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ಕ್ಯಾಂಪ್‌ನಲ್ಲಿ ಮುಂಡಗಾರು ಲತಾ ಕೂಡ ಇದ್ದಳು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಲತಾ ಸತ್ತಿದ್ದಾಳೆ ಎನ್ನುವ ಬ್ಯಾನರ್ ಹಾಕಲಾಗಿತ್ತು. ಆದರೆ ಫೈರಿಂಗ್ ಸಂದರ್ಭದಲ್ಲಿ ಮುಂಡಗಾರು ಲತಾ ತಪ್ಪಿಸಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆಕೆ ಅಲ್ಲಿಂದ ತಪ್ಪಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದ ರೈಲು ಹತ್ತಿದ್ದಳು. ಹೀಗೆ ಮಂಗಳೂರು ರೈಲು ಹತ್ತಿದ್ದ ಲತಾ ನಂತರದಲ್ಲಿ ಎಲ್ಲಿಗೆ ಹೋದಳು ಎನ್ನುವ ಬಗ್ಗೆ ನಕ್ಸಲ್ ನಿಗ್ರಹ ಪಡೆ ತಂಡದವರಿಗಾಗಲಿ ಅಥವಾ ಪೊಲೀಸರಿಗಾಗಲಿ ಇಲ್ಲಿವರೆಗೆ ಯಾವುದೇ ಮಾಹಿತಿ ಇಲ್ಲ. ಹೀಗಿರುವಾಗ ಚಿಕ್ಕಮಗಳೂರಿನ ತಮ್ಮ ಊರಿನ ಕೊಪ್ಪದಲ್ಲಿ ನಟೋರಿಯಸ್ ಲತಾ ಮುಂಡಗಾರು ಪ್ರತ್ಯಕ್ಷವಾಗಿರುವುದು ಹಾಗೂ ಗ್ರಾಮಸ್ಥರೊಂದಿಗೆ ಸಭೆಗಳನ್ನು ನಡೆಸಿರುವುದು ಗಂಭೀರ ವಿಚಾರವಾಗಿದೆ ಎಂದು ಇಲಾಖೆ ಪರಿಗಣಿಸಿದೆ. ಲತಾ ಮುಂಡಗಾರು ಚಲನವಲನದ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯು ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ತನ್ನ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.
ಕರ್ನಾಟಕದಲ್ಲಿ ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚು ಸಕ್ರಿಯವಾಗಿದ್ದ ಜಿಲ್ಲೆ ಅಂದರೆ ಅದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ. ರಾಜ್ಯದ ನಕ್ಸಲ್ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ನಕ್ಸಲ್ ನಾಯಕ ಸಾಕೇತ್ ರಾಜನ್ ಮೆಣಸಿನಹಾಡ್ಯದಲ್ಲಿ ೨೦೦೫ರ ಫೆ.೬ರಂದು ನಡೆದಿದ್ದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ. ಅದಕ್ಕೂ ಮೊದಲು ೨೦೦೩ರ ನವೆಂಬರ್‌ನಲ್ಲಿ ಕಾರ್ಕಳದ ಈದು ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಮೃತಪಟ್ಟಿದ್ದರು. ಹೀಗೆ ಈ ಎರಡು ಪ್ರಮುಖ ಎನ್‌ಕೌಂಟರ್ ಮೂಲಕ ಮಲೆನಾಡಿನಲ್ಲಿ ತಲೆಯೆತ್ತಿದ್ದ ನಕ್ಸಲ್ ಚಟುವಟಿಕೆಗಳನ್ನು ಪೊಲೀಸರು ಮಟ್ಟ ಹಾಕಿದ್ದರು. ಆ ನಂತರದಲ್ಲಿ ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಕಾಡು ಪ್ರದೇಶದಲ್ಲಿ ಹಲವು ಬಾರಿ ನಕ್ಸಲರ ಓಡಾಟ ಸದ್ದು ಮಾಡಿತ್ತು. ಅತ್ತ ನೆರೆಯ ಕೇರಳ ಹಾಗೂ ಆಂಧ್ರ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಯನ್ನು ಗಮನಾರ್ಹವಾಗಿ ಮಟ್ಟ ಹಾಕಿದ ಬಳಿಕ ಕರ್ನಾಟಕದಲ್ಲಿಯೂ ನಕ್ಸಲ್ ಚಟುವಟಿಕೆ ಕಡಿಮೆಯಾಗಿತ್ತು.

ಅತ್ತೆ ಮನೆಗೆ ಬಂದಿದ್ದ ಲತಾ-ಡಿವೈಎಸ್‌ಪಿ ತನಿಖೆ: ನಟೋರಿಯಸ್ ನಕ್ಸಲ್ ನಾಯಕಿ ಮುಂಡಗಾರು ಲತಾ ಕೆಲವು ದಿನಗಳ ಹಿಂದೆ ಬಂದು ಹೋಗಿದ್ದು ಅಪರಿಚಿತರ ಮನೆಗಲ್ಲ. ಅವರ ಅತ್ತೆ ಮನೆಗೆ ಎಂದು ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆ ಮಾಹಿತಿ ಕಲೆ ಹಾಕಿದೆ. ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮಕ್ಕೂ ಮುಂಡಗಾರು ಗ್ರಾಮಕ್ಕೂ ಅವಿನಾವಭಾವ ಸಂಬಂಧ ಇದೆ. ಈ ಎರಡೂ ಗ್ರಾಮಗಳು ಪರಸ್ಪರ ಹೆಣ್ಣು-ಗಂಡಿನ ಸಂಬಂಧ ಮಾಡಿಕೊಂಡಿದೆ. ಹಾಗಾಗಿ, ಸಂಬಂಧಿಕರೇ ಹೆಚ್ಚು. ಮುಂಡಗಾರು ಹಾಗೂ ಕಡೇಗುಂದಿ ಗ್ರಾಮಗಳ ನಡುವಿನ ಕಾಡಿನ ದಾರಿಯ ಅಂತರ ಕೇವಲ ೩-೪ ಕಿಲೋ ಮೀಟರ್. ಆದರೆ, ಮುಂಡಗಾರು ಗ್ರಾಮಕ್ಕೆ ಹೋಗಬೇಕಾದರೆ ಕೆರೆಕಟ್ಟೆ ಮಾರ್ಗದಲ್ಲಿ ಹೋಗಬೇಕು. ಕಡೇಗುಂದಿ ಗ್ರಾಮಕ್ಕೆ ಹೋಗಬೇಕಾದರೆ ಜಯಪುರ, ಮೇಗೂರಿನಿಂದ ಹೋಗಬೇಕು. ಆದರೆ, ಈ ಎರಡೂ ಗ್ರಾಮಕ್ಕೆ ಕಾಡು ದಾರಿಯೇ ಹತ್ತಿರ. ಗೊತ್ತಿದ್ದವರು ಮಾತ್ರ ಈ ರಸ್ತೆಯಲ್ಲಿ ಓಡಾಡುತ್ತಾರೆ. ಹೆಚ್ಚಿನ ಮಂದಿ ಜಯಪುರ ಹಾಗೂ ಕೆರೆಕಟ್ಟೆ ಮಾರ್ಗದಲ್ಲಿ ಬಂದು ಹೋಗುತ್ತಾರೆ. ಕಡೇಗುಂದಿ ಹಾಗೂ ಮುಂಡಗಾರು ಗ್ರಾಮಗಳ ಜನರು ಹಬ್ಬ ಹರಿದಿನಗಳು ಮಾತ್ರವಲ್ಲ, ಆಗಾಗ ಬಂದು ಹೋಗುವುದು ರೂಢಿಯಾಗಿದೆ. ಹಾಗೆಯೇ ಮುಂಡಗಾರು ಲತಾ ಬಂದು ಹೋಗುವುದಕ್ಕೆ ಇಲ್ಲಿನ ಜನ ವಿಶೇಷ ಅಂದುಕೊಳ್ಳುವುದಿಲ್ಲ. ನ.೧೦ರಂದು ಮುಂಡಗಾರು ಲತಾ ಹಾಗೂ ಅವರ ಸಹಚರರು ಕಡೇಗುಂದಿ ಗ್ರಾಮಕ್ಕೆ ಬಂದಿದ್ದರು. ಅಂದು ರಾತ್ರಿ ಸುಬೇಗೌಡರ (ಮುಂಡಗಾರು ಲತಾ ಅವರ ಅತ್ತೆ ಮನೆ) ಮನೆಯಲ್ಲಿ ಊಟ ಮಾಡಿದ್ದಾರೆ. ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು ರಾತ್ರಿ ೧೧ ಗಂಟೆ ವೇಳೆಗೆ. ಜಯಪುರದಲ್ಲಿ ಕ್ಯಾಂಪ್ ಮಾಡಿರುವ ಎಎನ್‌ಎಫ್ ಹಾಗೂ ಸ್ಥಳೀಯ ಪೊಲೀಸರು ಕಡೇಗುಂದಿ ಗ್ರಾಮಕ್ಕೆ ಹೋಗುವಷ್ಟರಲ್ಲಿ ನಕ್ಸಲೀಯರು ಸ್ಥಳದಿಂದ ತೆರಳಿದ್ದರು. ಮುಂಡಗಾರು ಲತಾ ತನ್ನ ಸಂಬಂಧಿಕರ ಮನೆಗೆ ಬಂದು ಹೋಗಿರುವುದು ಬಗ್ಗೆ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರು ತನಿಖೆ ಕೈಗೊಂಡಿದ್ದಾರೆ.

ಬೆಳ್ತಂಗಡಿ ಗಡಿಭಾಗದಲ್ಲಿ ೨೧ ವರ್ಷದ ಹಿಂದೆ ನಡೆದಿದ್ದ ಮೊದಲ ನಕ್ಸಲ್ ಎನ್‌ಕೌಂಟರ್ ಬಳಿಕ ಮತ್ತೊಂದು ಬಲಿ!: ಕರ್ನಾಟಕ ರಾಜ್ಯದಲ್ಲಿಯೇ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದು ೨೧ ವರ್ಷ ಸಂದಿದೆ. ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನ ಗಡಿಭಾಗವಾದ ಈದು ಗ್ರಾಮದ ಬೊಳೆಟ್ಟು ಎಂಬಲ್ಲಿ ೨೦೦೩ರ ನವೆಂಬರ್ ೧೭ರ ಮುಂಜಾನೆ ರಾಮಪ್ಪ ಪೂಜಾರಿ ಅವರ ಮನೆಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್ ನಡೆಸಿ ಇಬ್ಬರು ನಕ್ಸಲರನ್ನು ಬಲಿ ಪಡೆಯಲಾಗಿತ್ತು. ಈ ಘಟನೆ ನಡೆದ ೨೧ ವರ್ಷದ ಬಳಿಕ ಮತ್ತೆ ಎನ್‌ಕೌಂಟರ್ ನಡೆದಿದೆ. ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
ಅಂದು ಉಡುಪಿ ಎಸ್ಪಿ ಮುರುಗನ್ ನೇತೃತ್ವದಲ್ಲಿ ನಕ್ಸಲರ ರಕ್ತ ಚೆಲ್ಲಿತ್ತು: ೨೦೦೩ರ ನವೆಂಬರ್ ೧೬ರಂದು ರಾತ್ರಿ ಕಾರ್ಕಳದ ಬೊಳ್ಳೆಟ್ಟು ಎಂಬಲ್ಲಿಯ ರಾಮಪ್ಪ ಪೂಜಾರಿ ಅವರ ಮನೆಗೆ ಐದು ಮಂದಿ ಶಸ್ತ್ರಸಜ್ಜಿತ ನಕ್ಸಲರು ಬಂದಿದ್ದರು. ರಾತ್ರಿ ಊಟ ಮುಗಿಸಿದ ನಂತರ ಮನೆಯ ಚಾವಡಿಯಲ್ಲಿ ನಾಲ್ವರು ನಕ್ಸಲರು ಮಲಗಿದ್ದರು. ಮನೆಯ ಹೊರಗೆ ಸರತಿಯಂತೆ ಗಂಟೆಗೊಮ್ಮೆ ಓರ್ವ ನಕ್ಸಲ್ ಗಸ್ತು ತಿರುಗುತ್ತಿದ್ದರು. ನಕ್ಸಲರ ಚಲನವಲನಗಳ ಮಾಹಿತಿ ಪಡೆದ ಪೊಲೀಸರು ಮುಂಜಾನೆ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ನಕ್ಸಲರ ಮೇಲೆ ದಾಳಿ ನಡೆಸಿದ್ದರು. ಅಂದಿನ ಉಡುಪಿ ಎಸ್ಪಿ ಮುರುಗನ್ ನೇತೃತ್ವದ ಪೊಲೀಸ್ ತಂಡ ಮನೆಯ ಎದುರು ಗಸ್ತು ತಿರುಗುತ್ತಿದ್ದ ನಕ್ಸಲ್ ಪಾರ್ವತಿಯ ಕುತ್ತಿಗೆಗೆ ಬಂದುಕಿನಿಂದ ಗುಂಡು ಹಾರಿಸಿತ್ತು. ಗಾಯಗೊಂಡ ಪಾರ್ವತಿ ಚಾವಡಿಯಲ್ಲಿ ಮಲಗಿದ್ದ ನಾಲ್ವರನ್ನು ಓಡಿ ಎಂದು ಎಚ್ಚರಿಸಿ ಉಸಿರು ಚೆಲ್ಲಿದ್ದಳು. ಘಟನೆ ವೇಳೆ ನಕ್ಸಲರಾದ ಆನಂದ ಹಾಗೂ ವೇಣು ಮನೆಯ ಹಿಂಬಾಗಿಲಿನಿಂದ ಕಾಡಿನತ್ತ ಓಡಿದ್ದರು. ಒಳಗಿದ್ದ ಹಾಜೀಮಾ ಎಂಬಾಕೆ ಪೊಲೀಸರ ಗುಂಡೇಟಿಗೆ ಗಾಯಗೊಂಡಿದ್ದು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಳು. ಯಶೋದಾ ಎಂಬಾಕೆಗೆ ಗುಂಡೇಟು ತಗುಲಿದ್ದು ಪೊಲೀಸರ ಕೈಗೆ ಸೆರೆ ಸಿಕ್ಕಿದ್ದಳು. ಅಂದು ಎನ್ಕೌಂಟರ್ ನಡೆದ ಬಳಿಕ ತನ್ನ ಹಳೆಯ ಮನೆಯನ್ನು ಕೆಡವಿ ಹೊಸ ರಾಮಪ್ಪ ಪೂಜಾರಿ ಹೊಸ ಮನೆ ಕಟ್ಟಿಸಿದ್ದಾರೆ. ನಂತರದ ದಿನಗಳಲ್ಲಿ ರಾಮಪ್ಪ ಪೂಜಾರಿ ನಿಧನರಾಗಿದ್ದು ಅವರ ಮಗ ಪ್ರಶಾಂತ್ ಪೂಜಾರಿ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಜಿಲ್ಲಾಡಳಿತದ ನಿದ್ದೆಗೆಡಿಸುತ್ತಿರುವ ನಕ್ಸಲರು: ಹಸಿರನ್ನೇ ಹೊದ್ದು ಮಲಗಿರುವ ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ಕೋಲಾಹಲ ಎಬ್ಬಿಸಿದ್ದ ನಕ್ಸಲೀಯ ಅಧ್ಯಾಯ ಅಂತ್ಯಗೊಂಡಿತೆಂದು ನಿಟ್ಟುಸಿರು ಬಿಡುವ ಸಂದರ್ಭದಲ್ಲೇ ಹಾಡಿಗಳಲ್ಲಿ ಮತ್ತೆ ಕೆಂಪು ಉಗ್ರರ ಹೆಜ್ಜೆ ಸಪ್ಪಳ ಕೇಳಿ ಬಂದಿರುವುದು ಜಿಲ್ಲಾಡಳಿತ ಹಾಗೂ ಮಲೆನಾಡಿಗರ ನಿದ್ದೆಗೆಡಿಸಿದೆ. ಕಾಫಿನಾಡಿನಲ್ಲೇ ಸುಮಾರು ೩೮ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ಜಯಣ್ಣ ಇಬ್ಬರೂ ಕೆಲವೇ ದಿನಗಳ ಹಿಂದಷ್ಟೇ ಕೊಪದ ಕಡೆಗುಂಡಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ತಮ್ಮ ಚಟುವಟಿಕೆಗಳಿಗೆ ಬೆಂಬಲ ಕೋರಿರುವ ವಿಚಾರವನ್ನು ಪೊಲೀಸ್ ಇಲಾಖೆಯೇ ದೃಢಪಡಿಸಿದ ನಂತರವಂತೂ ಪ್ರಶಾಂತವಾಗಿದ್ದ ಮಲೆನಾಡು ತಲ್ಲಣಿಸಲಾರಂಭಿಸಿದೆ. ೨ ದಶಕಗಳ ಹಿಂದಿನ ಎನ್‌ಕೌಂಟರ್, ನಕ್ಸಲೀಯರ ಕ್ರೌರ್ಯಗಳು ನೆನಪು ಮತ್ತೆ ನೆನಪಾಗುತ್ತಿವೆ. ೧೫ ವರ್ಷಗಳ ಹಿಂದೆಯೇ ಸಾಕೇತ್ ರಾಜನ್ ಸೇರಿದಂತೆ ಘಟಾನುಘಟಿ ನಾಯಕರ ದಂಡೇ ಮಲೆನಾಡಿನಲ್ಲಿ ಭೂಗತರಾಗಿ ಬಂದೂಕಿನ ನಳಿಕೆಯಡಿ ವ್ಯವಸ್ಥೆಯನ್ನು ನಿಯಂತ್ರಿಸಲು ನಡೆಸಿದ ಪ್ರಯತ್ನಕ್ಕೆ ಗುಡ್ಡಗಾಡು ಜನರ ಬೆಂಬಲ ಸಿಕ್ಕಿರಲಿಲ್ಲ. ನಕ್ಸಲ್ ನಿಗ್ರಹ ದಳ ಮತ್ತು ಪೊಲೀಸ್ ಇಲಾಖೆಗಳ ನಿರಂತರ ಕಾರ್ಯಾಚರಣೆಗಳಿಂದಾಗಿ ನಕ್ಸಲೀಯರು ಪಶ್ಚಿಮಘಟ್ಟದಿಂದ ಕಾಲು ಕೀಳಬೇಕಾಗಿ ಬಂದಿತ್ತು.
ಕಸ್ತೂರಿರಂಗನ್ ವರದಿ ಸೇರಿದಂತೆ ಕೆಲ ಸಮಸ್ಯೆಗಳು ಇಂದಿಗೂ ಮಲೆನಾಡಿಗರ ದುಸ್ವಪ್ನವಾಗಿದೆ. ಆದರೂ ಸೇತುವೆ ಸೇರಿದಂತೆ ಹಲವು ಮೂಲ ಸೌಕರ್ಯಗಳ ವಿಚಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇದರ ನಡುವೆ ಅಂದು ನಕ್ಸಲ್ ತಂಡದ ಮುಂಚೂಣಿಯಲ್ಲಿದ್ದ ಬಹುತೇಕ ನಾಯಕರು ಸರ್ಕಾರದ ಮುಂದೆ ಶರಣಾರಾಗಿದ್ದಾರೆ. ಅಲ್ಲದೆ, ತನಿಖಾ ತಂತ್ರಜ್ಞಾನ ಸಾಕಷ್ಟು ಸುಧಾರಿಸಿದೆ. ಈ ನಡುವೆ ಮತ್ತೆ ನೆಲೆಯೂರುವ ನಕ್ಸಲೀಯರ ಪ್ರಯತ್ನಕ್ಕೆ ಯಶಸ್ಸು ಸಿಗಲಾರದು ಎಂದು ಇಲಾಖಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ಹೆಸರಿನ ತಂಡದಲ್ಲಿ ಸುಮಾರು ೩೦ ಮಂದಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಶಸ್ತ್ರ ಹೋರಾಟಕ್ಕಿಳಿದಿದ್ದ ತಂಡದಲ್ಲಿ ನಾಲ್ಕೈದು ಮಂದಿ ಮಾತ್ರ ಉಳಿದಿದ್ದಾರೆ. ಕಳೆದ ೨೦೦೯ರಿಂದ ಈವರೆಗೆ ನಕ್ಸಲೀಯರ ದಾಳಿ, ಪೊಲೀಸರ ಎನ್‌ಕೌಂಟರ್‌ನಂತಹ ಪ್ರಮುಖ ಘಟನಾವಳಿಗಳು ನಡೆದಿರಲಿಲ್ಲ.

ಸುಬ್ರಹ್ಮಣ್ಯದಲ್ಲಿ ನಡೆದಿದ್ದ ಎನ್‌ಕೌಂಟರ್: ೨೦೧೨ರ ಸೆ.೨ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆಯಲ್ಲಿ ನಕ್ಸಲ್ ನಿಗ್ರಹದಳ ಹಾಗೂ ನಕ್ಸಲರ ನಡುವೆ ಮುಖಾಮುಖಿ ನಡೆದಿತ್ತು. ಆಗ ನಡೆದ ಎನ್‌ಕೌಂಟರ್‌ನಲ್ಲಿ ರಾಯಚೂರಿನ ಮುದ್ದುಗೋಡೆ ನಿವಾಸಿ ಯಲ್ಲಪ್ಪ (೩೫) ಎಂಬಾತ ಮೃತಪಟ್ಟಿದ್ದ. ತಂಡದಲ್ಲಿದ್ದ ಉಳಿದವರು ಪರಾರಿಯಾಗಿದ್ದರು. ಈ ತಂಡದಲ್ಲಿ ವಿಕ್ರಂ ಗೌಡ ಇದ್ದ. ಇದೀಗ ಎನ್‌ಕೌಂಟರ್‌ನಲ್ಲಿ ಬಲಿಯಾಗಿರುವ ವಿಕ್ರಂ ಗೌಡ ಕಬಿನಿ-೨ ಎಂಬ ನಕ್ಸಲ್ ದಳವನ್ನು ಮುನ್ನಡೆಸುತ್ತಿದ್ದ. ನಕ್ಸಲರ ಓಡಾಟ ಬಗ್ಗೆ ೧೦ ದಿನಗಳಿಂದ ಅಧಿಕಾರಿಗಳಿಗೆ ಖಚಿತ ಮಾಹಿತಿ ಇತ್ತು. ಕಾಡಂಚಿನಲ್ಲಿರುವ ಮಲೆಕುಡಿಯರ ಮನೆಯಿಂದ ಅಕ್ಕಿ, ಬೇಳೆ ಪಡೆಯಲು ವಿಕ್ರಂ ಗೌಡ ತಂಡ ಬಂದು ಹೋಗುತ್ತಿದೆ. ಕಾಡಿನಿಂದ ಕೊರಕಲು ಕಾಲುಹಾದಿಯಲ್ಲಿ ಇಳಿದು ಮನೆಗೆ ತೆರಳಿ ವಾರದ ಹಿಂದೆಯೂ ಸಾಮಾಗ್ರಿ ಸಂಗ್ರಹಿಸಿ ಹೋಗಿದೆ ಎಂದು ಗುಪ್ತಚರ ಇಲಾಖೆಯ ವರದಿಯನ್ವಯ ದಾಳಿ ನಡೆಸಿದ ಎಎನ್‌ಎಫ್ ತಂಡ ವಿಕ್ರಂಗೌಡನನ್ನು ಎನ್‌ಕೌಂಟರ್ ಮಾಡಿದೆ.
ಬೆಳ್ತಂಗಡಿಯಲ್ಲಿ ಗುರಿ ತಪ್ಪಿ ಎನ್‌ಕೌಂಟರ್ ಆಗಿತ್ತು: ೨೦೧೧ರಲ್ಲಿ ಬೆಳ್ತಂಗಡಿಯ ಸವಣಾಲಿನ ಕುತ್ಲೂರಿನಲ್ಲಿ ನಕ್ಸಲ್ ಶಂಕೆ ಮೇರೆಗೆ ನಡೆದ ಎನ್‌ಕೌಂಟರ್‌ನಲ್ಲಿ ಗುರಿ ತಪ್ಪಿ ಎಎನ್‌ಎಫ್ ಸಿಬ್ಬಂದಿಯೇಬಲಿಯಾದ ಘಟನೆ ನಡೆದಿತ್ತು.ಪಶ್ಚಿಮ ಘಟ್ಟ ತಪ್ಪಲಲ್ಲಿ ನಕ್ಸಲರ ಸಂಚಾರದ ಮಾಹಿತಿ ಮೇರೆಗೆ ಎಎನ್‌ಎಫ್ ತಂಡ ಕೂಂಬಿಂಗ್ ನಡೆಸುತ್ತಿತ್ತು. ರಾತ್ರಿ ವೇಳೆ ಇನ್ನೊಂದು ಎಎನ್‌ಎಫ್ ತಂಡವನ್ನು ನಕ್ಸಲರು ಎಂದು ಭಾವಿಸಿ ಒಂದು ಎಎನ್‌ಎಫ್ ತಂಡ ಗುಂಡು ಹಾರಿಸಿತ್ತು. ಅದು ಎಎನ್‌ಎಫ್ ಸಿಬ್ಬಂದಿಯಾಗಿದ್ದ ವಿಜಯಪುರದ ಮಹದೇವ ಮಾನೆ ಎಂಬವರ ಸಾವಿಗೆ ಕಾರಣವಾಗಿತ್ತು.

ಹೊಟೇಲ್ ಕಾರ್ಮಿಕನಾಗಿದ್ದ ವಿಕ್ರಂ ಗೌಡ ನಕ್ಸಲ್ ಆದದ್ದು…: ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪೀತಬೈಲಿನ ನಾಡ್ತಾಲು ಗ್ರಾಮದ ಕೂಡ್ಲು ಮೂಲದವನಾದ ವಿಕ್ರಂ ಗೌಡ ೪ನೇ ತರಗತಿವರೆಗೆ ಮಾತ್ರ ಓದಿದ್ದಾನೆ. ೨೦ ವರ್ಷಗಳ ಹಿಂದೆ ತಂದೆ, ತಾಯಿ, ತಂಗಿ ಜತೆ ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಗುಡಿಸಲಿನಲ್ಲಿ ವಾಸಿಸುತ್ತಿದ್ದ ಈತನನ್ನು ಕಡು ಬಡತನದ ಹಿನ್ನೆಲೆಯಲ್ಲಿ ತಂದೆ ಮುಂಬೈಗೆ ಕಳುಹಿಸಿದ್ದರು. ಅಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದ ಈತ ಎರಡು ದಶಕಗಳ ಹಿಂದೆ ಕಾರ್ಮಿಕ ಸಂಘಟನೆಗಳ ಮೂಲಕ ಹೋರಾಟ ನಡೆಸುತ್ತಿದ್ದ. ೨೦೦೨-೦೩ರಲ್ಲಿ ಕುದುರೆಮುಖ ಹೋರಾಟದಿಂದ ಪ್ರಭಾವಿತನಾದ ವಿಕ್ರಂ ಗೌಡ ನಕ್ಸಲ್ ನಾಯಕನಾಗಿದ್ದ ಸಾಕೇತ್ ರಾಜನ್‌ನನ್ನು ಭೇಟಿಯಾದ ಬಳಿಕ ನಕ್ಸಲ್ ಸಂಘಟನೆಗೆ ಸೇರಿಕೊಂಡಿದ್ದ. ಕರ್ನಾಟಕ ವಿಮೋಚನಾ ರಂಗದಲ್ಲಿ ಸಕ್ರಿಯವಾಗಿದ್ದ ವಿಕ್ರಂ ಗೌಡ ಸಂಘಟನೆಯ ಬಲವರ್ಧನೆಗೆ ತಳಮಟ್ಟದಲ್ಲಿ ಹೋರಾಡಿ ತಂಡ ಕಟ್ಟಿದ್ದ. ಈ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಿ ಸಂಘಟನೆಯಲ್ಲಿ ತೊಡಗಿ ಸಿಕೊಳ್ಳುವಂತೆ ಮಾಡಿದ್ದ. ೧೨ ವರ್ಷದ ಹಿಂದೆ ತನ್ನ ತಾಯಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲೂ ವಿಕ್ರಂ ಗೌಡ ಕೂಡ್ಲುವಿಗೆ ಬಂದಿರಲಿಲ್ಲ. ಹೆಬ್ರಿಯಿಂದ ಸುಮಾರು ೨೧ ಕಿ.ಮೀ. ದೂರದ ನೆಲ್ಲಿಕಟ್ಟೆಯಿಂದ ೧೦ ಕಿ.ಮೀ. ದೂರದಲ್ಲಿರುವ ವಿಕ್ರಂ ಗೌಡನ ಮನೆಯಲ್ಲಿ ಸದ್ಯ ಯಾರೂ ವಾಸವಿಲ್ಲ. ಸ್ವಸಹಾಯ ಸಂಘವನ್ನು ಕಟ್ಟಿಕೊಂಡು ಅಡಕೆ, ತೆಂಗು ಕೃಷಿ ಮಾಡಿಕೊಂಡಿದ್ದ ವಿಕ್ರಂ ಗೌಡರ ತಂದೆ-ತಾಯಿ ಮೃತಪಟ್ಟಿದ್ದಾರೆ. ಸಹೋದರ ಮುದ್ರಾಡಿಯಲ್ಲಿ ವಾಸವಿದ್ಯು, ಸಹೋದರಿ ಮೇಗದ್ದೆಯಲ್ಲಿ ವಾಸವಿದ್ದಾರೆ. ವಿಕ್ರಂ ಗೌಡ ವಾಸವಿದ್ದ ಮನೆಯೂ ಬಿದ್ದು ಹೋಗಿದ್ದು ಸದ್ಯ ಸಹೋದರಿ ಹಳೆಯ ಮನೆಯ ಜಾಗದಲ್ಲಿ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Exit mobile version