Site icon Suddi Belthangady

ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜು ವಾರ್ಷಿಕ ಕ್ರೀಡಾಕೂಟ

ಉಜಿರೆ: ಕಲಿಕೆ ಜೊತೆ ವಿದ್ಯಾರ್ಥಿಗಳು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡರೆ, ಆರೋಗ್ಯ ವೃದ್ಧಿಸುವುದು. ಅರೋಗ್ಯಯುತ ಜೀವನವೇ ನಿಜವಾದ ಸಂಪತ್ತು. ಕ್ರೀಡೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಪೂರಕ. ಸ್ಪರ್ಧಾಗುಣದೊಂದಿಗೆ ನಮ್ಮ ಚಿತ್ತವನ್ನು ಸದೃಢಗೊಳಿಸುವ ಶಕ್ತಿ ಕ್ರೀಡೆಗಿದೆಯೆಂದು ಎಸ್. ಡಿ.ಎಂ.ಉಜಿರೆ ಕ್ರೀಡಾ ಸಂಘದ ಕಾರ್ಯದರ್ಶಿಯಾಗಿರುವ ರಮೇಶ್.ಹೆಚ್ ಹೇಳಿದರು. ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಕ್ರೀಡೆಯ ಮಹತ್ವ ಹಾಗೂ ಕಲಿಕೆಗೆ ಕ್ರೀಡೆಯಿಂದಾಗುವ ಪ್ರಯೋಜನದ ಬಗ್ಗೆ ತಿಳಿಸಿದರು. ಉತ್ತಮ ಆರೋಗ್ಯಕರ ಸ್ಪರ್ಧೆ ಏರ್ಪಡಲಿ ಎಂದರು. ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪಥಸಂಚಲನ ನೆರವೇರಿತು. ಇದರ ತೀರ್ಪುಗಾರರಾಗಿ ಆಗಮಿಸಿದ್ದ ಗಣ್ಯರಾದ ಜಯರಾಮ್ ಶೆಟ್ಟಿ ಹಾಗೂ ಪ್ರಸಾದ್ ಡಿ. ಇವರನ್ನು ಗೌರವಿಸಲಾಯಿತು. ಕಾಲೇಜಿನ ದೈಹಿಕ ಶಿಕ್ಷಕ ಲಕ್ಷ್ಮಣ ಜಿ.ಡಿ ಸ್ವಾಗತಿಸಿದರು. ಕಾಲೇಜಿನ ಕ್ರೀಡಾ ಕಾರ್ಯದರ್ಶಿ ವಿಶ್ರುತ್ ಗೌಡ ಹೆಚ್.ವಿ ವಂದಿಸಿದರು. ಕಾಲೇಜಿನ ಗಣಿತ ಉಪನ್ಯಾಸಕಿ ಪ್ರಿಯ ಹಾಗೂ ಭೌತಶಾಸ್ತ್ರ ಉಪನ್ಯಾಸಕ ವಿಕ್ರಂ.ಪಿ ನಿರೂಪಿಸಿದರು.

Exit mobile version