Site icon Suddi Belthangady

ಗುಂಡ್ಯದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಪ್ರತಿಭಟನೆ: ಬೆಳ್ತಂಗಡಿಯ ಹಲವರು ಭಾಗಿ – ಮನವಿ ಸ್ವೀಕಾರ ವಿಳಂಬ-ಹೆದ್ದಾರಿ ತಡೆದು ಆಕ್ರೋಶ: ಎ.ಸಿ. ಆಗಮನದ ಬಳಿಕ ಪ್ರತಿಭಟನೆ ವಾಪಸ್ – ಸುಳ್ಯ ಶಾಸಕಿ ಭಾಗೀರಥಿ, ಬೈಂದೂರು ಶಾಸಕ ಗುರುರಾಜ್ ಸಹಿತ 15 ಮಂದಿ ವಿರುದ್ಧ ಕೇಸು ದಾಖಲು

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನಾ ಸಭೆ ನಡೆಸಿದ ಬಾಧಿತ ಗ್ರಾಮಗಳ ಸಾವಿರಾರು ಗ್ರಾಮಸ್ಥರು, ಸಭೆ ಮುಗಿದರೂ ಮನವಿ ಸ್ವೀಕರಿಸಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಇರುವುದರಿಂದ ಆಕ್ರೋಶಗೊಂಡು ಗುಂಡ್ಯ ಜಂಕ್ಷನ್‌ನಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಸುಮಾರು ೧ ತಾಸಿಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ ಘಟನೆ ನ.೧೫ರಂದು ನಡೆದಿದೆ. ಈ ಪ್ರತಿಭಟನೆಯಲ್ಲಿ ಬೆಳ್ತಂಗಡಿ ತಾಲೂಕಿನಿಂದಲೂ ಹಲವಾರು ಮಂದಿ ಭಾಗವಹಿಸಿದ್ದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಮಾಡ ಮೈದಾನದಲ್ಲಿ ಪ್ರತಿಭಟನೆ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ದ.ಕ.ಕರ್ನಾಟಕ ಇದರ ಆಶ್ರಯದಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧ ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಗಳ ಕೃಷಿಕರ ಬೃಹತ್ ಪ್ರತಿಭಟನಾ ಸಭೆ ನ.೧೫ರಂದು ಬೆಳಿಗ್ಗೆ ಗುಂಡ್ಯ ಸಮೀಪದ ಮಾಡ ಮೈದಾನದಲ್ಲಿ ನಡೆಯಿತು. ಪ್ರತಿಭಟನಾ ಸಭೆ ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಂಡಿತು.

ತಹಶೀಲ್ದಾರ್ ಸುಳ್ಳು ಹೇಳುತ್ತಿದ್ದಾರೆ: ಸಭೆಯ ಮಧ್ಯೆ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು ತಹಶೀಲ್ದಾರ್ ಅಥವಾ ಅದಕ್ಕಿಂತ ಕೆಳಗಿನ ಅಧಿಕಾರಿಗಳಿಗೆ ಮನವಿ ನೀಡುವುದಿಲ್ಲ. ಸಭೆ ಮುಗಿಯುವುದರೊಳಗೆ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರು ಆಗಮಿಸಿ ಮನವಿ ಸ್ವೀಕರಿಸಬೇಕು. ಇಲ್ಲದೇ ಇದ್ದಲ್ಲಿ ಮೊದಲೇ ನಿರ್ಧರಿಸಿದಂತೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದರು. ಸಭೆ 3 ಗಂಟೆಗೆ ಮುಗಿದರೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಧಿಕ್ಕಾರ ಕೂಗಲು ಆರಂಭಿಸಿದರು. ಈ ವೇಳೆ ಮಾತನಾಡಿದ ಕಿಶೋರ್ ಶಿರಾಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರೂ ಬಂದಿಲ್ಲ. ಮೊದಲು ನಿರ್ಧರಿಸಿದಂತೆ ರಸ್ತೆ ತಡೆ ನಡೆಸುವುದು ಗ್ಯಾರಂಟಿ. ಸಹಾಯಕ ಆಯುಕ್ತರು ಎಷ್ಟು ಸಮಯಕ್ಕೆ ಇಲ್ಲಿಗೆ ಬರುತ್ತಾರೆ ಎಂಬ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಬೇಕೆಂದು ಹೇಳಿದರು. ಈ ವೇಳೆ ವೇದಿಕೆಗೆ ಬಂದ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಸಹಾಯಕ ಆಯುಕ್ತರು ಸರಕಾರದ ಹಂತದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಬರುತ್ತಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಸುಳ್ಯ ನಗರ ಪಂಚಾಯತ್ ಸದಸ್ಯರಾದ ನ್ಯಾಯವಾದಿ ವೆಂಕಪ್ಪ ಗೌಡ ಅವರು ತಹಶೀಲ್ದಾರ್ ಸುಳ್ಳು ಹೇಳುತ್ತಿದ್ದಾರೆ. ನಾನು ಸಹಾಯಕ ಆಯುಕ್ತರಿಗೆ ಫೋನ್ ಮಾಡಿದೆ. ಅವರು ಪುತ್ತೂರಿನಿಂದ ಇನ್ನಷ್ಟೇ ಹೊರಡಬೇಕಿದೆ. ಇಲ್ಲಿಗೆ ತಲುಪಲು ಅವರಿಗೆ 1.15 ಗಂಟೆ ಬೇಕಾಗಬಹುದು ಎಂದರು. ಎಲ್ಲರೂ ಊಟ ಮಾಡಿ ಮತ್ತೆ ಸಭೆಯಲ್ಲಿ ಸೇರಿ. ಬಳಿಕ ಹೆದ್ದಾರಿ ತಡೆ ನಡೆಸುವ ಎಂದು ಸಂಘಟಕರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಆದರೆ ಕೆಲವರು ಊಟ ಮಾಡಲು ತೆರಳಿದರೆ ಮತ್ತಷ್ಟೂ ಮಂದಿ ಹೆದ್ದಾರಿ ತಡೆಗೆ ಮುಂದಾದರು.

ಗುಂಡ್ಯ ಜಂಕ್ಷನ್‌ನಲ್ಲಿ ರಸ್ತೆ ತಡೆ-ಎ.ಸಿ. ಆಗಮನ: ಪ್ರತಿಭಟನಾ ಸಭೆ ನಡೆದ ಮಾಡ ಮೈದಾನದಿಂದ 1 ಕಿ.ಮೀ. ದೂರದ ಗುಂಡ್ಯ ಜಂಕ್ಷನ್‌ಗೆ ಪ್ರತಿಭಟನಾಕಾರರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಗುಂಡ್ಯ-ಕೈಕಂಬ ಹೆದ್ದಾರಿಯಲ್ಲಿ ಪಾದಯಾತ್ರೆ ಮೂಲಕ ಆಗಮಿಸಿದರು. ಗುಂಡ್ಯ ಜಂಕ್ಷನ್‌ಗೆ ಆಗಮಿಸಿದ ಪ್ರತಿಭಟನಾಕಾರರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದರು. ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್., ಎಸ್‌ಐ ಅವಿನಾಶ್ ಗೌಡ ಅವರು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಇತರೇ ಮುಖಂಡರಲ್ಲಿ ರಸ್ತೆ ತಡೆ ನಡೆಸದಂತೆ ಮನವೊಲಿಕೆ ನಡೆಸಿದರೂ ಹೆದ್ದಾರಿಯಲ್ಲಿ ಕುಳಿತರವರು ಎzಳಲಿಲ್ಲ. ಸುಮಾರು ೩.೧೫ರ ವೇಳೆಗೆ ಸ್ಥಳಕ್ಕೆ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಆಗಮಿಸಿ ಪ್ರತಿಭಟನಾ ನಿರತರ ಅಹವಾಲು ಆಲಿಸಿದರು. ಬಳಿಕ ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತರು ಗ್ರಾಮಸ್ಥರ ಮನವಿಯನ್ನು ಸರಕಾರಕ್ಕೆ ಮುಟ್ಟಿಸುವುದಾಗಿ ಹೇಳಿದರು. ಬಳಿಕ ರಸ್ತೆ ತಡೆ ಹಿಂತೆಗೆದುಕೊಳ್ಳಲಾಯಿತು. ಸುಮಾರು ೧ ತಾಸಿಗೂ ಹೆಚ್ಚು ಸಮಯ ಹೆದ್ದಾರಿ ತಡೆ ನಡೆಸಿದ ಪರಿಣಾಮ ರಸ್ತೆಯ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆ ತಡೆ ಹಿಂತೆಗೆದುಕೊಳ್ಳುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅಧಿವೇಶನದಲ್ಲಿ ಪ್ರಸ್ತಾಪ-ಭಾಗೀರಥಿ: ರಸ್ತೆ ತಡೆಗೂ ಮೊದಲು ನಡೆದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಬೆಳಗಾವಿಯಲ್ಲಿ ನಡೆಯುವ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕೈಬಿಡುವ ಸಂಬಂಧ ಹೋರಾಟ ನಡೆಸಲು ಕಟಿಬದ್ಧರಾಗಿವೆ ಎಂದರು. ಲಂಚ ಕೊಟ್ಟವನ ಕೆಲಸ ಮಾತ್ರ ಅಧಿಕಾರಿಗಳು ಮಾಡಿಕೊಡುವುದಲ್ಲ. ಬಡವನ ಸಹಿತ ಎಲ್ಲರಿಗೂ ನ್ಯಾಯ ಸಿಗಬೇಕು. ಪರಿಸರದಲ್ಲಿ ಪ್ರಾಣಿ, ಮನುಷ್ಯರೂ ಇರಬೇಕು. ಅರಣ್ಯ ಇಲಾಖೆಯವರು ರಸ್ತೆಯಲ್ಲಿ ಗಿಡ ನೆಡುವ ಬದಲು ಕಾಡಿನೊಳಗೆ ನೆಡಬೇಕು. ರಸ್ತೆ, ಹೊಳೆ, ಅರಣ್ಯದೊಳಗೆ ಬಿದ್ದ ಮರಗಳು ಹಾಗೇ ಇವೆ. ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೃಷಿಕರ ವಿರುದ್ಧ ದರ್ಪ ತೋರುತ್ತಾರೆ. ಇದು ಬದಲಾಗಬೇಕೆಂದು ಹೇಳಿದರು.

ವರದಿ ಜಾರಿಗೆ ಬಿಡುವುದಿಲ್ಲ- ಸಿಮೆಂಟ್ ಮಂಜು: ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಮಾತನಾಡಿ, ಅರಣ್ಯ ಇಲಾಖೆ ಜನತೆಗೆ ನಿತ್ಯ ಕಿರುಕುಳ ನೀಡುತ್ತಿದೆ. ಮಲೆನಾಡು ಜನರಿಂದಾಗಿ ಪರಿಸರ ಉಳಿದಿದೆ. ಬೆಂಗಳೂರಿನಲ್ಲಿ 1 ಅಡಿ ಜಾಗಕ್ಕೆ 50 ಸಾವಿರ ರೂ.ಕೊಡಬೇಕು. ಆದರೆ ಆನೆ ದಾಳಿಯಿಂದ ಮೃತಪಟ್ಟಲ್ಲಿ ಕೇವಲ ೧೫ ಲಕ್ಷ ರೂ.ಪರಿಹಾರ ಸಿಗುತ್ತಿದೆ. ಅರಣ್ಯ, ಕಂದಾಯ ಇಲಾಖೆಯವರ ಕಾನೂನು ಪಾಲನೆಯಿಂದ ಮಲೆನಾಡು ಭಾಗದ ಜನರಿಗೆ ಬದುಕಲು ಸಾಧ್ಯವಿಲ್ಲದಂತಾಗಿದೆ ಎಂದು ಹೇಳಿದರು. ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿ ಸಚಿವ ಈಶ್ವರ ಖಂಡ್ರೆ ಅವರು ಸಭೆ ಕರೆದಿದ್ದರು. ಜೀವದ ಕೊನೆ ಉಸಿರು ಇರುವ ತನಕ ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ ಎಂದು ಸಭೆಯಲ್ಲಿ ಸಚಿವರಲ್ಲಿ ಹೇಳಿzನೆ. ಈ ವರದಿಯಲ್ಲಿ ಮಾರ್ಪಾಡು ಮಾಡುವ ಪ್ರಶ್ನೆಯೂ ಇಲ್ಲ ಎಂದು ಹೇಳಿದರು. ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಬಾಧಿತ ಗ್ರಾಮಗಳ ಜನರು ಸ್ವಯಂಪ್ರೇರಿತರಾಗಿ ಬಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದ ಅವರು ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಮ್ಯಾನುವೆಲ್ ಸರ್ವೆ ಆಗಬೇಕು-ಗುರುರಾಜ್: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ ಕೇರಳದಲ್ಲಿ ನಡೆದ ಅಧ್ಯಯನದಂತೆ ರಾಜ್ಯದಲ್ಲೂ ಕಸ್ತೂರಿ ರಂಗನ್ ವರದಿ ಬಾಧಿತ ಗ್ರಾಮಗಳ ಸ್ಯಾಟಲೈಟ್ ಸರ್ವೆ ಬದಲು ಮ್ಯಾನುವಲ್ ಸರ್ವೆ ನಡೆಯಬೇಕು. ಈ ಸಂಬಂಧ ಪ್ರತಿ ಮನೆಗೂ ಭೇಟಿ ನೀಡಿ ಅಧಿಕಾರಿಗಳು ದಾಖಲೆ ಸಂಗ್ರಹಿಸಬೇಕು. ಮೂರು ಜಿಲ್ಲೆಗಳಲ್ಲೂ ಮ್ಯಾನುವಲ್ ಸರ್ವೆ ನಡೆಯಬೇಕು. ಇದಕ್ಕಾಗಿ ಯಾವ ಹಂತದ ಹೋರಾಟಕ್ಕೂ ಸಿದ್ಧವಿzವೆ ಎಂದು ಹೇಳಿದರು. ಕಾನೂನಾತ್ಮಕ ಹೋರಾಟದ ಜೊತೆಗೆ ಜನಾಂದೋಲನ ಮಾದರಿಯಲ್ಲಿ ಈ ಹೋರಾಟ ದ.ಕ, ಉಡುಪಿ ಹಾಗೂ ಹಾಸನ ಜಿಲ್ಲೆಯಲ್ಲಿ ನಡೆಯಬೇಕು. ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಸದನದ ಒಳಗೂ, ಹೊರಗೂ ಹೋರಾಟ ಮಾಡಲು ಬದ್ಧರಿದ್ಧೇವೆ. ಊರು, ಸಂಸ್ಕೃತಿ ಉಳಿಯಬೇಕು. ಇದಕ್ಕಾಗಿ ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಜಾತ್ಯಾತೀತ ಹೋರಾಟ ನಡೆಯಬೇಕು-ಮಠಂದೂರು: ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರುದ್ಧ ಕಾನೂನಾತ್ಮಕ, ರಾಜಕೀಯ, ರೈತ ಪರ ಹೋರಾಟ ಜಾತ್ಯಾತೀತವಾಗಿ ನಡೆಯಬೇಕು. ಅಕ್ರಮ ಸಕ್ರಮ, 94ಸಿ, ಡೀಮ್ಡ್ ಫಾರೆಸ್ಟ್, ಪ್ಲಾಟಿಂಗ್ ಸಹಿತ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ರೈತರ ಹಿತ ಕಾಪಾಡುವ ಎಂದು ಹೇಳಿದರು.
ಸುಳ್ಯದ ನ್ಯಾಯವಾದಿ ವೆಂಕಪ್ಪ ಗೌಡ, ಗುತ್ತಿಗಾರು ಚರ್ಚ್‌ನ ಧರ್ಮಗುರು ರೆ.ಫಾ.ಆದರ್ಶ ಜೋಸೆಫ್, ಧಾರ್ಮಿಕ ಮುಖಂಡ ಮಹಮ್ಮದ್ ಆಲಿ ಹೊಸಮಠ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಎ.ವಿ. ತೀರ್ಥರಾಮ ಸುಳ್ಯ, ನೋಯಿಸ್ ವರ್ಗೀಸ್ ಪುದುವೆಟ್ಟು, ಮುಂಡಾಜೆ ಚರ್ಚ್‌ನ ಧರ್ಮಗುರು ರೆ.ಫಾ.ಸಿಬಿ, ಜಿ.ಪಂ.ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಆಶಾ ತಿಮ್ಮಪ್ಪ ಗೌಡ, ಹರೀಶ್ ಕಂಜಿಪಿಲಿ, ಬಾಲಕೃಷ್ಣ ಬಾಣಜಾಲು, ವೆಂಕಟ್ ದಂಬೆಕೋಡಿ, ರಾಜಕೀಯ ಮುಖಂಡರಾದ ವೆಂಕಟ್ ವಳಲಂಬೆ, ಸುಧೀರ್ ಕುಮಾರ್ ಶೆಟ್ಟಿ, ಭಾಸ್ಕರ ಗೌಡ ಇಚ್ಲಂಪಾಡಿ, ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಚಾರ್ಯ ರೆ.ಫಾ.ವರ್ಗೀಸ್ ಕೈಪನಡ್ಕ, ಸಾಮಾಜಿಕ ಕಾರ್ಯಕರ್ತ ರಘು ಸಕಲೇಶಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನಂಜಯ ಕೊಡಂಗೆ ಸ್ವಾಗತಿಸಿದರು. ಹರಿಣಿ ಪುತ್ತೂರಾಯ ಮತ್ತು ದಾಮೋದರ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು. ಸುಭಾಷಿಣಿ ಮತ್ತು ತಂಡದವರು ರೈತಗೀತೆ, ವಂದೇಮಾತರಂ ಹಾಡಿದರು. ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಗಳ ಮೂರು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಕಸ್ತೂರಿ ರಂಗನ್ ವರದಿ ವಿರುದ್ಧ ಧಿಕ್ಕಾರ ಕೂಗಿದರು. ಮಧ್ಯಾಹ್ನ ಎಲ್ಲರಿಗೂ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಸುಳ್ಯ ಶಾಸಕಿ ಭಾಗೀರಥಿ, ಬೈಂದೂರು ಶಾಸಕ ಗುರುರಾಜ್, ಸಂಘಟಕ ಕಿಶೋರ್ ಶಿರಾಡಿ ಸಹಿತ ೧೫ ಮಂದಿ ವಿರುದ್ಧ ಕೇಸು ದಾಖಲು: ಕಸ್ತೂರಿ ರಂಗನ್ ವರದಿ ವಿರೋಧಿಸಿ ನ.೧೫ರಂದು ಮಧ್ಯಾಹ್ನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಗುಂಡ್ಯದಲ್ಲಿ ರಸ್ತೆ ತಡೆ ನಡೆಸಿದ ಆರೋಪದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಸಯ್ಯದ್ ಮೀರಾನ್ ಸಾಹೇಬ್ ಸಹಿತ 15 ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಪ್ಪಿನಂಗಡಿ ಠಾಣಾ ಎಸ್.ಐ.ಅವಿನಾಶ್ ಅವರ ದೂರಿನಂತೆ ಈ ಕೇಸು ದಾಖಲಾಗಿದೆ. ನ.೧೫ರಂದು ಸಿರಿಬಾಗಿಲು ಗ್ರಾಮದ ಲಕ್ಷ್ಮಿ ವೆಂಕಟೇಶ್ ದೇವಸ್ಥಾನದ ಮಾಡ ಮೈದಾನದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆದಿದ್ದು ಪ್ರತಿಭಟನಾ ಸಭೆಯಲ್ಲಿದ್ದವರು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಪ್ರತಿಭಟನಾ ಸಭೆಯ ಸ್ಥಳದಿಂದ ಸುಮಾರು1 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ ೭೫ರ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯಪೇಟೆಗೆ ಬಂದು ಮಧ್ಯಾಹ್ನ ೨.೩೦ ಗಂಟೆಗೆ ರಸ್ತೆತಡೆಯನ್ನು ಪ್ರಾರಂಭಿಸಿದ್ದು ರಸ್ತೆಯ ಮಧ್ಯದಲ್ಲಿಯೇ ಶಾಸಕರಾದ ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪ್ರತಿಭಟನಾಕಾರರಾದ ಸುಧೀರ್ ಶೆಟ್ಟಿ, ನವೀನ್ ನೆರಿಯಾ, ಸತೀಶ್ ಶೆಟ್ಟಿ ಬಲ್ಯ, ಉಮೇಶ್ ಸಾಯಿರಾಮ್, ವೆಂಕಟ ವಳಲಂಬೆ, ಪ್ರಕಾಶ್ ಗುಂಡ್ಯ, ಪ್ರಸಾದ್ ನೆಟ್ಟಣ, ಸೈಯದ್ ಮೀರಾನ್ ಸಾಹೇಬ್, ಉಮೇಶ್ ಬಲ್ಯ, ನವೀನ್ ರೆಖ್ಯಾ, ಯತೀಶ್ ಗುಂಡ್ಯ, ಗಣೇಶ್ ಮತ್ತು ಇತರರು ಅಕ್ರಮಕೂಟ ಸೇರಿಕೊಂಡು ಅಕ್ರಮ ರಸ್ತೆ ತಡೆ ಮಾಡಿ ಪ್ರತಿಭಟನೆಯನ್ನು ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡದಂತೆ ಹಾಗೂ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸದಂತೆ ತಿಳಿಸಿದರೂ ಇವರುಗಳು ಕೇಳದೆ ಪ್ರತಿಭಟನೆಯನ್ನು ಮುಂದುವರಿಸಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸರ್ಕಾರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದ್ದಾರೆ. ಈ ರೀತಿ ಅಕ್ರಮ ಕೂಟ ಸೇರಿಕೊಂಡು ರಸ್ತೆ ತಡೆ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಾನೂನು ಬಾಹಿರ ಎಂದು ತಿಳಿಸಿದರೂ ಗಣನೆಗೆ ತೆಗೆದುಕೊಳ್ಳದೆ ಮಧ್ಯಾಹ್ನ ೩.೩೦ ಗಂಟೆಯ ತನಕ ರಸ್ತೆ ತಡೆಮಾಡಿ ಸಾರ್ಜಜನಿಕರ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುತ್ತಾರೆ ಎಂದು ಪಿಎಸ್‌ಐ ಅವಿನಾಶ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಡಿ.ಸಿ. ಮೂಲಕ ಸರಕಾರದ ಗಮನಕ್ಕೆ: ಎ.ಸಿ. ಸುಮಾರು 7 ಅಂಶಗಳುಳ್ಳ ಮನವಿ ನೀಡಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸುತ್ತೇವೆ. ಮನವಿಯಲ್ಲಿ ಉಲ್ಲೇಖಿಸಿರುವಂತೆ ಗಡಿ ಗುರುತಿನ ಬಗ್ಗೆ ಕೂಡ ಸರಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ. ಸರಕಾರಕ್ಕೆ ಸಲ್ಲಿಕೆ ಮಾಡಿರುವ ಬಗ್ಗೆ ಕೂಡ ಮಾಧ್ಯಮಗಳ ಮೂಲಕ ತಿಳಿಸಲಾಗುವುದು. ಈ ಬಗ್ಗೆ ನಮಗೆ ಸರಕಾರದಿಂದ ಯಾವುದೇ ಮಾಹಿತಿ, ನಿರ್ದೇಶನಗಳು ಬಂದಲ್ಲಿ ಅದರ ಬಗ್ಗೆ ಕೂಡ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಈ ಹಿಂದೆಯೇ ಜಂಟಿ ಸರ್ವೆಯ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಕೆಲಸ ಆಗಿದೆ. ಮುಂದಿನ ದಿನಗಳಲ್ಲಿ ಪಾರದರ್ಶಕವಾಗಿ ಪ್ಲಾಟಿಂಗ್ ನಡೆಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಸುಧಾರಣೆಯ ಪ್ರಯತ್ನಗಳು ನಡೆಯುತ್ತಿವೆ. ಜಂಟಿ ಸರ್ವೆ ನಡೆಸಲು ಜಂಟಿ ತಂಡವನ್ನು ರಚನೆ ಮಾಡಬೇಕಾಗುತ್ತದೆ. ಸುಳ್ಯ, ಕಡಬದಲ್ಲಿ5-6 ಕಡೆ ನಾವೇ ಜಂಟಿ ಸರ್ವೆ ಮಾಡಿ ನಕಾಶೆಯನ್ನೂ ಮಾಡಿzವೆ. ತಮಗೆಲ್ಲಾ ತಿಳಿದಿರುವಂತೆ ಕರಾವಳಿ ಪ್ರದೇಶ ಗುಡ್ಡಗಾಡುಗಳನ್ನು ಹೊಂದಿದೆ. ಜಂಟಿ ಸರ್ವೆಯ ಬಗ್ಗೆ ಸರಕಾರದ ನಿರ್ದೇಶನಗಳನ್ನು ಕೇಳಿ, ನಿರ್ದೇಶನದ ಪ್ರಕಾರ ಅನುಷ್ಠಾನಗೊಳಿಸಿ ಆನ್ ಗ್ರೌಂಡ್ ರಿಸಲ್ಟ್ಸ್ ಮುಟ್ಟಿಸುವ ಕೆಲಸ ಮಾಡುತ್ತೇವೆ. ಕೆಲವೊಂದು ಪಾಲಿಸಿ ವಿಚಾರಗಳಲ್ಲಿ ಸರಕಾರದ ನಿರ್ದೇಶನ ಬೇಕಾಗುತ್ತದೆ. ಈ ವಿಚಾರವನ್ನು ತಮ್ಮ ಮನವಿಯ ಮೂಲಕ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಪ್ರತಿಭಟನಾನಿರತರಿಗೆ ತಿಳಿಸಿದರು.

Exit mobile version