Site icon Suddi Belthangady

ಇಳಂತಿಲ, ಉಜಿರೆ, ಕುವೆಟ್ಟು ಗ್ರಾ.ಪಂ. ಉಪಚುನಾವಣೆಯಲ್ಲಿಬಿಜೆಪಿ-ಕಾಂಗ್ರೆಸ್ ಬೆಂಬಲಿತರ ನಡುವೆ ನೇರ ಸ್ಪರ್ಧೆ

ಬೆಳ್ತಂಗಡಿ: ಇಳಂತಿಲ, ಉಜಿರೆ ಮತ್ತು ಕುವೆಟ್ಟು ಗ್ರಾಮ ಪಂಚಾಯತ್‌ನ ತಲಾ ಒಂದು ಸ್ಥಾನಕ್ಕೆ ನ.೨೩ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕುವೆಟ್ಟು ಗ್ರಾ.ಪಂ. ಉಪಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಎಸ್‌ಡಿಪಿಐ ಬೆಂಬಲಿತ ವಿಮಲಾರವರು ನಾಮಪತ್ರ ಹಿಂಪಡೆದಿದ್ದು ಮೂರು ಗ್ರಾಮ ಪಂಚಾಯತ್‌ಗಳಲ್ಲಿ ಆರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಉಪಚುನಾವಣೆಗೆ ನ.6ರಂದು ಅಧಿಸೂಚನೆ ಪ್ರಕಟಗೊಂಡು ಅಂದೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ನ.೧೨ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿತ್ತು. ನ.13ರಂದು ನಾಮಪತ್ರ ಪರಿಶೀಲನೆ ನಡೆದಿದ್ದು ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿವೆ. ನ.೧೫ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು. ನ.೨೩ರಂದು ಬೆಳಿಗ್ಗೆ ೭ರಿಂದ ಸಂಜೆ ೫ ಗಂಟೆಯ ತನಕ ಆಯಾ ಆಯಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ನ.೨೬ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಇಳಂತಿಲದಲ್ಲಿ ಮೀನಾಕ್ಷಿ-ಕುಸುಮ ಪೈಪೋಟಿ: ಇಳಂತಿಲ 1ನೇ ವಾರ್ಡ್‌ಗೆ ನಡೆಯಲಿರುವ ಉಪಚುನಾವಣೆಗೆ ೧೨೦೦ ಮತದಾರರಿದ್ದಾರೆ. ಹಿಂದುಳಿದ ವರ್ಗ ಬಿ ಮಹಿಳೆ ಮೀಸಲು ಸ್ಥಾನದಿಂದ ಚುನಾಯಿತರಾಗಿದ್ದ ರೇಖಾ ಅವರು ನಿಧನರಾದ ಕಾರಣ ಉಪಚುನಾವಣೆ ಏರ್ಪಟ್ಟಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೀನಾಕ್ಷಿ ಮುರ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಸುಮ ಈಶ್ವರ ಗೌಡ ನಡುವೆ ಪೈಪೋಟಿ ಏರ್ಪಟ್ಟಿದ್ದು ಬೂತ್ ನಂಬ್ರ 229 ಇಳಂತಿಲ ಶಾಲೆಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಶೇಟ್ ಹಾಗೂ ಉಪಚುನಾವಣಾಧಿಕಾರಿಯಾಗಿ ಪಿಡಿಓ ಸುಮಯ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉಜಿರೆಯಲ್ಲಿ ಬಾಲಕ್ಕ-ಪ್ರೇಮಲತಾ ಸ್ಪರ್ಧೆ: ಉಜಿರೆಯ ೮ನೇ ವಾರ್ಡ್‌ಗೆ ನಡೆಯುವ ಚುನಾವಣೆಯಲ್ಲಿ2001 ಮತದಾರರಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಚುನಾಯಿತರಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಸುಮತಿ ವಿದೇಶಕ್ಕೆ ಹೋಗಿರುವುದರಿಂದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಾಲಕ್ಕ ನೂಜಿಮನೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರೇಮಲತಾ ಎಳಚಿತ್ತಾಯನಗರ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಬೂತ್ ನಂಬ್ರ 98 ಉಜಿರೆ ಶಾಲೆಯಲ್ಲಿ ಮತದಾನ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಚಂದ್ರಶೇಖರ ಮತ್ತು ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ ಉಪಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕುವೆಟ್ಟಿನಲ್ಲಿ ಜಯಂತಿ-ಮಾಲತಿ ಹಣಾಹಣಿ: ಕುವೆಟ್ಟು ಗ್ರಾ.ಪಂ. 1ನೇ ವಾರ್ಡ್‌ನ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದ ಎಸ್‌ಡಿಪಿಐ ಬೆಂಬಲಿತ ಮೋಹಿನಿ ನಿಧನರಾಗಿರುವುದರಿಂದ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ1300 ಮತದಾರರಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಂತಿ ಶಕ್ತಿನಗರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾಲತಿ ಎಸ್. ನಾನಾಡಿ ನಡುವೆ ಹಣಾಹಣಿ ಏರ್ಪಟ್ಟಿದೆ. ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವಿಮಲಾ ಮದ್ದಡ್ಕ ಅವರು ನಾಮಪತ್ರ ಹಿಂಪಡೆದಿದ್ದು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಜಯಂತಿ ಮತ್ತು ಮಾಲತಿ ನಡುವೆ ಸ್ಪರ್ಧೆ ನಡೆಯಲಿದೆ. ಬೂತ್ ನಂಬ್ರ 133 ಪಿಲಿಚಾಮುಂಡಿಕಲ್ಲು ಸ.ಹಿ.ಪ್ರಾ ಶಾಲೆಯಲ್ಲಿ ಮತದಾನ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಉಪನ್ಯಾಸಕ ಗಣೇಶ್ ರಾಮಚಂದ್ರ ಭಟ್ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಓ ಇಮ್ತಿಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ.

Exit mobile version