ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು (45ವ)ರವರು ನ.19ರಂದು ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಕಾಯರಂಡ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ನ.೧೭ರ ಸಂಜೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪಾಂಕ್ರಿಯಾಟೈಟಿಸ್ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನ.೧೯ರಂದು ಕೊನೆಯುಸಿರೆಳೆದಿದ್ದಾರೆ.
ಮಂಗಳೂರಿನಲ್ಲಿ ಕರಾವಳಿ ಅಲೆ, ಚೆನ್ನೈಯಲ್ಲಿ ವೆಬ್‌ದುನಿಯಾ, ಬೆಂಗಳೂರಿನಲ್ಲಿ ಕಸ್ತೂರಿ ಚಾನೆಲ್ ಮತ್ತು ಮಂಗಳೂರಿನಲ್ಲಿ ವಿಜಯವಾಣಿಯಲ್ಲಿ ಕಾರ್ಯ ನಿರ್ವಹಿಸಿದ್ದ ಭುವನೇಂದ್ರ ಪುದುವೆಟ್ಟು ಅವರು ಕಳೆದ ಆರು ತಿಂಗಳಿನಿಂದ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿದ್ದರು. ೨೦೨೪ರ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಕಾರ್ಯ ನಿರ್ವಾಹಕ ಸಂಪಾದಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಕ್ರಿಯಾಶೀಲ ಪತ್ರಕರ್ತರಾಗಿದ್ದ ಭುವನೇಂದ್ರ ಅವರು ತನ್ನ ಲೇಖನ, ವರದಿ, ಬರವಣಿಗಳಿಂದ ಖ್ಯಾತಿ ಗಳಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಮೃತರು ತಂದೆ ನಾರಾಯಣ ಪೂಜಾರಿ, ತಾಯಿ ಮೋಹಿನಿ, ಪತ್ನಿ ಸುಜಾತ, ಪುಟ್ಟ ಮಕ್ಕಳಾದ ಅಕ್ಷರ, ಆಯುಷ್, ಸಹೋದರ ಯತೀಂದ್ರ ಮತ್ತು ಸಹೋದರಿ ಹೇಮಾ ಅವರನ್ನು ಅಗಲಿದ್ದಾರೆ. ಭುವನೇಂದ್ರ ಅವರ ಪಾರ್ಥೀವ ಶರೀರವನ್ನು ಮಧ್ಯಾಹ್ನ ಮಂಗಳೂರು ಆಸ್ಪತ್ರೆಯಿಂದ ತರಲಾಗಿದ್ದು ಪುದುವೆಟ್ಟು ಕಾಯರಂಡ ಮನೆಯಲ್ಲಿ ನ.೧೯ರ ಸಂಜೆ ಅಂತಿಮ ವಿಧಿವಿಧಾನ ನಡೆಸಲಾಯಿತು.
ಶಾಸಕ ಹರೀಶ್ ಪೂಂಜ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಸಿಇಒ ಸಿಂಚನಾ ಊರುಬೈಲು, ವಿಜಯವಾಣಿ ಪತ್ರಿಕೆಯ ಮಂಗಳೂರು ಸ್ಥಾನೀಯ ಸಂಪಾದಕ ಸುರೇಂದ್ರ ವಾಗ್ಲೆ, ವರದಿಗಾರ ಮನೋಹರ್ ಬಳಂಜ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಕಾಂಗ್ರೆಸ್ ಮುಖಂಡ ಪಿ.ಟಿ ಸೆಭಾಸ್ಟಿನ್, ಭೂ ಮಂಡಳಿ ಸದಸ್ಯ ಬೊಮ್ಮಣ್ಣ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಬೆಳ್ತಂಗಡಿ ಬಿಲ್ಲವ ಸಂಘದ ಸದಸ್ಯ ಸಂತೋಷ್ ಕೆ., ಉಜಿರೆಯ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಯಶವಂತ್ ಪುದುವೆಟ್ಟು, ಮಾಜಿ ಎ.ಪಿ.ಎಂ.ಸಿ ಸದಸ್ಯ ಗಫೂರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಯ್, ಮುಂಡಾಜೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಕಾಂತ್ ಪ್ರಭು, ಉದ್ಯಮಿ ಧನಕೀರ್ತಿ ಅರಿಗ ಮತ್ತಿತರರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಅಂತಿಮ ನಮನ: ಮಂಗಳೂರು ಆಸ್ಪತ್ರೆಯಿಂದ ಪುದುವೆಟ್ಟು ಮನೆಗೆ ಭುವನೇಂದ್ರ ಅವರ ಪಾರ್ಥೀವ ಶರೀರವನ್ನು ಕೊಂಡೊಯ್ಯುತ್ತಿದ್ದ ವೇಳೆ ಬೆಳ್ತಂಗಡಿ ಬಸ್ ನಿಲ್ದಾಣದ ನಾರಾಯಣಗುರು ವಾಣಿಜ್ಯ ಸಂಕೀರ್ಣದಲ್ಲಿರುವ ಸುದ್ದಿ ಬಿಡುಗಡೆ ಪತ್ರಿಕಾ ಕಾರ್ಯಾಲಯದ ಬಳಿ ಅಂತಿಮ ನಮನ ಸಲ್ಲಿಸಲಾಯಿತು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಆರ್‌ಎಸ್‌ಎಸ್ ಮುಂದಾಳು ಪ್ರಸಾದ್ ಕುಮಾರ್ ಬೆಳ್ತಂಗಡಿ, ಬೆಳ್ತಂಗಡಿ ಗ್ರಾಹಕರ ಸಂಘದ ಅಧ್ಯಕ್ಷ ಮಹಾವೀರ ಅರಿಗ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ಸುದ್ದಿ ಬಿಡುಗಡೆ ಸಿಇಒ ಸಿಂಚನಾ ಊರುಬೈಲು, ವ್ಯವಸ್ಥಾಪಕ ಮಂಜುನಾಥ ರೈ, ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ, ನೋಟರಿ ವಕೀಲ ಭಗೀರಥ ಜಿ., ಉದ್ಯಮಿ ಚಿದಾನಂದ ಸುವರ್ಣ ಇಡ್ಯ, ಸುದ್ದಿ ಬಿಡುಗಡೆ ಬಳಗದ ಜಾರಪ್ಪ ಪೂಜಾರಿ ಬೆಳಾಲು, ಲಕ್ಷ್ಮಣ ಗೌಡ ಕಾವಟೆ, ಹೆರಾಲ್ಡ್ ಪಿಂಟೋ, ಮನೀಶ್ ವಿ.ಅಂಚನ್ ಕುಕ್ಕಿನಡ್ಡ, ಸಂದೀಪ್ ಶೆಟ್ಟಿ, ಸುವೀರ್ ಜೈನ್, ನಿಶಾನ್ ಬಂಗೇರ, ರೂಪೇಶ್ ಶಿಬಾಜೆ, ರಂಜನ್ ನೆರಿಯ, ವನೀಶ್, ಶ್ರೇಯಾ ಪಿ. ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಆದಿತ್ಯ ಶೆಟ್ಟಿ, ನೈನಾ ಪ್ರಸಾದ್, ವಿವಿನಾ ಕ್ಯಾರಲ್ ಡಿಸೋಜ, ತೇಜಸ್ವಿನಿ ಶೆಟ್ಟಿ, ವೀಣಾಶ್ರೀ ಕೆ. ಪೂಜಾರಿ, ಪಂಚೇಶ್ ಕೆ.ಚಾರ್ಮಾಡಿ, ಕುಶಾಲಪ್ಪ ಗೌಡ ಆಗಳಿ, ರಚನಾ, ಸೂಕ್ಷ್ಮ, ಶಾಲಿನಿ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಭೆ: ಸಂಘದ ಸಕ್ರಿಯ ಸದಸ್ಯರಾಗಿದ್ದ ಹಿರಿಯ ಪತ್ರಕರ್ತ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಭುವನೇಂದ್ರ ಪುದುವೆಟ್ಟು ಅವರಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.