ಧರ್ಮಸ್ಥಳ: ಮಳೆ ಕಡಿಮೆಯಾಗುತ್ತಿದ್ದಂತೆಯೇ ನಾರ್ಯ-ದೊಂಡೋಲೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಮಳೆಗಾಲದಲ್ಲಿ ರಸ್ತೆ ಬದಿ ಕುಸಿತಗೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಊರಿನವರು ಸೇರಿ ಪ್ರತಿಭಟನೆ ನಡೆಸಿ ಹಿಡಿಶಾಪ ಹಾಕಿದ್ದರು. ಗ್ರಾಮಸಭೆಯಲ್ಲಿ ಈ ವಿಚಾರದ ಬಗ್ಗೆ ಜನಾಕ್ರೋಶ ಗಮನಿಸಿದ ಧರ್ಮಸ್ಥಳ ಗ್ರಾಮ ಪಂಚಾಯತ್ ಮಳೆ ಹೋದ ಬಳಿಕ ಕಾಮಗಾರಿ ನಡೆಸುವ ಭರವಸೆ ನೀಡಿದ್ದರು. ಅದರಂತೆ ಪಂಚಾಯತ್ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ.
ಭಾರೀ ಮಳೆ ಇದ್ದ ಕಾರಣ ಕಾಮಗಾರಿ ನಡೆದಿರಲಿಲ್ಲ. ಇದೀಗ ಕಾಮಗಾರಿ ಪ್ರಾರಂಭಿಸಿದ್ದು ಜನರಲ್ಲಿ ಸಂತಸ ಉಂಟು ಮಾಡಿದೆ. ಸಾರ್ವಜನಿಕರು ಎದುರಿಸುತ್ತಿರುವ ರಸ್ತೆ ಸಮಸ್ಯೆ ಕುರಿತು ಸುದ್ದಿ ಬಿಡುಗಡೆ ಪ್ರತಿಕೆ ಮತ್ತು ಚಾನೆಲ್ ಪ್ರಸಾರ ಮಾಡಿತ್ತು. ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತ ೫ ಲಕ್ಷ ರೂ ಅನುದಾನ ಘೋಷಿಸಿ ಕಾಮಗಾರಿ ಕೈಗೆತ್ತಿಕೊಂಡಿದೆ.
ಕುಸಿತವಾದ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಬಂಡೆಕಲ್ಲು ಮತ್ತು ನೀರು ಹರಿದು ಹೋಗುತ್ತಿರುವುದರಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ಕಲ್ಲುಗಳನ್ನು ಪುಡಿ ಮಾಡಿ ಹರಿಯುವ ನೀರಿನ ದಿಕ್ಕನ್ನು ಬದಲಿಸಿದ ನಂತರ ಪಿಲ್ಲರ್ ಹಾಕಿ ಕೆಲಸ ಪ್ರಾರಂಭಿಸಲಾಗುವುದು ಎಂದು ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಗೌಡ ತಿಳಿಸಿದ್ದಾರೆ. ಧರ್ಮಸ್ಥಳ ಲಕ್ಷ ದೀಪೋತ್ಸವದ ಮುಂಚೆ ಈ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಾವು ನಿರ್ಧರಿಸಿದ್ದೆವು. ಆದರೆ ಜೋರಾದ ಮಳೆ ಇದ್ದ ಕಾರಣ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಕಾಂಟ್ರಾಕ್ಟರ್ ಪ್ರಕಾಶ್ ತಿಳಿಸಿದ್ದಾರೆ.