ಬೆಳ್ತಂಗಡಿ : ಅಮಾಯಕ ಯುವಕನೊಬ್ಬ ತನ್ನ ವಿನೂತನ ಶೈಲಿಯಲ್ಲಿ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಾಗ ಮೂರು ಜನ ಕಿಡಿಗೇಡಿಗಳ ಗುಂಪು ಆತನನ್ನು ತಡೆದು ನಿಲ್ಲಿಸಿ ಆತನ ಎರಡು ಕೈಗಳನ್ನು ಹಿಂದಕ್ಕೆ ಲಾಕ್ ಮಾಡಿ ಹಿಡಿದು ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಬಳಿಕ ಈ ವಿಡಿಯೋ ನೋಡಿದ ಯುವಕ ಮನನೊಂದು ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿ ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21ವ) ಎಂಬ ಯುವಕ ಈವಾಗಿನ ನವೀನ ಮಾದರಿಯ ಪ್ಯಾಂಟ್ ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದು, ಮಾರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ತಂಡವೊಂದು ಆತನನ್ನು ಸಾರ್ವಜನಿಕವಾಗಿ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಜೊತೆಗೆ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟ ಶಬೀರ್, ಅನೀಶ್, ಬಾಬ್ ಜಾನ್ ಸೇರಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.
ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಯುವಕ ಶಾಹಿಲ್ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಚಿಕಿತ್ಸೆಗಾಗಿ ಮನೆಯವರು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಥಮ ಚಿಕಿತ್ಸೆಯ ನಂತರ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ಘಟನೆ ಬಗ್ಗೆ ಸಾರ್ವಜನಿಕರು ಈ ಮೂವರು ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.