Site icon Suddi Belthangady

ಬೇಡಿಕೆ ಈಡೇರಿಕೆಗಾಗಿ ಗ್ರಾಮ ಪಂಚಾಯತ್ ನೌಕರರಿಂದ ನ. 27ಕ್ಕೆ ಬೃಹತ್ ಹೋರಾಟ – ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಬೆಳ್ತಂಗಡಿಯ ಸತೀಶ್ ನಾರಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳದ ಅಬ್ದುಲ್ ಸಲಾಂ ಆಯ್ಕೆ

ಬೆಳ್ತಂಗಡಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹೊಸ ಹೊಸ ಯೋಜನೆಗಳನ್ನು ಗ್ರಾಮೀಣ ಭಾಗದ ಬಡಜನರಿಗೆ ತಲುಪಿಸುವ ಗ್ರಾಮ ಪಂಚಾಯಿತಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ನ. 27ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್ ಡಿ ಪಿ ಆರ್) ರಾಜ್ಯಾಧ್ಯಕ್ಷ ಡಾ. ದೇವಿ ಪ್ರಸಾದ್ ಬೊಲ್ಮಾ ತಿಳಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯತ್ ನೌಕರರ ಜಿಲ್ಲಾ ಮಟ್ಟದ ಸಮಾಲೋಚನ ಸಭೆಯಲ್ಲಿ ಮಾತನಾಡಿ ಕಳೆದ ಮೂರು ದಶಕಗಳಿಂದ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್ ಹಾಗೂ ಸ್ವಚ್ಛತೆಗಾರ ವೃಂದದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರು ಸರಕಾರದ ಸವಲತ್ತುಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುವ ನೌಕರರು ಕಳೆದ ಮೂರು ದಶಕಗಳಿಂದ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿಗಳಲ್ಲಿ ಇತರ ಅಧಿಕಾರಿಗಳಿಗೆ ಸರಿ ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿರುವ ನೌಕರರು ಗ್ರಾಮ ಪಂಚಾಯತ್ ಆರ್ಥಿಕ ಸಂಪನ್ಮೂಲ ಕ್ರೂಡೀಕರಣ, ತಂತ್ರಾಂಶ ಸೇವೆ, ಮೂಲಭೂತ ಸೌಕರ್ಯ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಇತರ ಇಲಾಖೆಗಳಿಂದ ನಿರ್ವಹಿಸುವ ಹೆಚ್ಚುವರಿ ತುರ್ತು ಸೇವೆಗಳನ್ನು ಸೇರಿದಂತೆ ಪ್ರತಿಯೊಂದರಲ್ಲಿ ಮುಂಚೂಣಿಯಲ್ಲಿರುವ ನೌಕರರು ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆ ಸಲ್ಲಿಸುತ್ತಿದ್ದಾರೆ. ಹುದ್ದೆಗೆ ಸರಿಸಮಾನವಾದ ವೇತನ ಶ್ರೇಣಿ ನಿಗದಿಪಡಿಸಿಲ್ಲ ಹಗಲಿರುಳು ದುಡಿದರು ಆರೋಗ್ಯ ಭದ್ರತೆ ಹಾಗೂ ಸೇವಾ ಭದ್ರತೆ ಇರುವುದಿಲ್ಲ. ನಿವೃತ್ತಿ ಜೀವನಕ್ಕೂ ಸರಿಯಾದ ಆರ್ಥಿಕ ಭದ್ರತೆ ಇರುವುದಿಲ್ಲ. ನೌಕರರ ಬೇಡಿಕೆ ಸಮಸ್ಯೆಗಳ ಕುರಿತು ಇಲಾಖೆ ಅಸಡ್ಡೆಯಿಂದ ಕಾಣುತ್ತಿದ್ದು ನೈಜ ವರದಿಯನ್ನು ಸರಕಾರಕ್ಕೆ ಸಲ್ಲಿಸದೆ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿ ಪಡಿಸಿದ ಕನಿಷ್ಠ ವೇತನವನ್ನು ಪ್ರಸ್ತುತ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ. ಇದರಿಂದ ಹತ್ತು ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ನೌಕರನಿಗೂ ಇತ್ತೀಚೆಗೆ ಸೇವೆಗೆ ಸೇರಿದ ನೌಕರನಿಗೂ ಒಂದೇ ರೀತಿಯ ವೇತನ ಲಭಿಸಿ ಸೇವಾ ಹಿರಿತನದ ಪಂಚಾಯತ್ ಸಿಬ್ಬಂದಿಗಳಿಗೆ ಅನ್ಯಾಯವಾಗಿರುತ್ತದೆ ಇದನ್ನು ತ್ವರಿತವಾಗಿ ಸರಿಪಡಿಸಬೇಕು ಎಂದರು. 1994ರ ಸರಕಾರಿ ಆದೇಶದಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಶ್ರೇಣಿ ನಿಗದಿ ಪಡಿಸಬಹುದು ಎಂದು ಆದೇಶವಿದ್ದರೂ ಹಾಗೂ ಪಂಚಾಯತ್ ರಾಜ್ ಅಧಿನಿಯಮದಲ್ಲಿ ಸಿಬ್ಬಂದಿ ಸ್ವರೂಪ ವೇತನ ಶ್ರೇಣಿ ನೀಡಬಹುದು ಎಂದು ಇದ್ದರೂ ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ. 2019ರ ಸರಕಾರದ ಸುತ್ತೋಲೆಯಲ್ಲಿ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಿ ಮತ್ತು ಡಿ ದರ್ಜೆ ನಿಗದಿಪಡಿಸಿದೆ ಎಂದು ಉಲ್ಲೇಖಿಸಲಾಗಿದೆ. ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ನಿಯಮಾವಳಿ ರೂಪಿಸಿದಂತೆ ಅದಕ್ಕೆ ಸರಿಯಾಗಿ ಸರಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಸರಿ ಸಮನವಾದ ವೇತನಶ್ರೇಣಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ನ್ಯಾಯಯುತ ಹೋರಾಟದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ನೌಕರರು ಭಾಗವಹಿಸಿ ಬದಲಾವಣೆ ತರಲು ಕೈಜೋಡಿಸಬೇಕು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಕೆಗೆ ಹೋರಾಟದ ಅಗತ್ಯವಿದ್ದು, ರಾಜ್ಯಮಟ್ಟದ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಇದೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಗ್ರಾಮ ಪಂಚಾಯತ್ ನೌಕರರು ತಮ್ಮ ಸಮಸ್ಯೆಗಳು ಹಾಗೂ ಅಭಿಪ್ರಾಯಗಳನ್ನು ಸಭೆಯ ಗಮನಕ್ಕೆ ತಂದರು. ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು ನೂತನ ಜಿಲ್ಲಾ ಅಧ್ಯಕ್ಷರಾಗಿ ಸತೀಶ್ ನಾರಾವಿ, ಉಪಾಧ್ಯಕ್ಷರಾಗಿ ಪ್ರಿಯಾ ಪಿಂಟೊ ಮೂಡಬಿದ್ರೆ, ಲಕ್ಷ್ಮಣ ಕುಲಾಲ್ ಮಂಗಳೂರು, ಶ್ರೀನಿವಾಸ ಉಪ್ಪಿನಂಗಡಿ, ತಾರಾನಾಥ ಕಡಬ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಬಂಟ್ವಾಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ತೀರ್ಥರಾಮ ಸುಳ್ಯ, ಜಿಲ್ಲಾ ಕೋಶಾಧಿಕಾರಿಯಾಗಿ ನಾರಾಯಣ ನಾವುರು ಬೆಳ್ತಂಗಡಿ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಕಡಶಿವಾಲ್ಯ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಸತ್ಯಪ್ರಕಾಶ್ ಪುಣಚ, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮೇಶ್ ಕುಕ್ಕಿಪಾಡಿ ಬಂಟ್ವಾಳ, ಮಹಾಬಲ ಬಂಟ್ವಾಳ, ಶಿವಾನಂದ ಚೆನ್ನ ತೋಡಿ, ಪೂರ್ಣಿಮಾ ಬೆಳಾಲು, ಮೀನಾಕ್ಷಿ ನಡ ಬೆಳ್ತಂಗಡಿ, ರೋಹಿನಾಥ ಉಳಿ ಬಂಟ್ವಾಳ, ಮಮತಾ ಆರ್ಯಪು ಪುತ್ತೂರು, ಕೇಶವ ಮೂಲ್ಕಿ, ಗಣೇಶ ಅಂಟಾಡಿ, ದಿವಾಕರ ನಡ, ನಾಗರಾಜ ಕಡೆಶಿವಾಲ್ಯ, ಕುಶಾಲ್ ಅನಂತಾಡಿ, ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ಪುತ್ತೂರು ತಾಲೂಕು ಅಧ್ಯಕ್ಷರಾದ ಹೊನ್ನಪ್ಪ, ಬಂಟ್ವಾಳ ತಾಲೂಕು ಅಧ್ಯಕ್ಷರಾದ ಮೋಹನ್, ಹಾಗೂ ಜಿಲ್ಲೆಯ ನೌಕರರು ಉಪಸ್ಥಿತರಿದ್ದರು.

Exit mobile version