Site icon Suddi Belthangady

ಬೆಳ್ತಂಗಡಿ: ಮುಂಡಾಜೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ. ಪುರಾಣವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸುಲಭ ಕಲಾ ಮಾರ್ಗ ಯಕ್ಷಗಾನ: ಮಚ್ಚಿಮಲೆ ಅನಂತ ಭಟ್

ಬೆಳ್ತಂಗಡಿ: ಪುರಾಣವನ್ನು ರೂಪಕದ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಸುಲಭ ಕಲಾ ಮಾರ್ಗವೇ ಯಕ್ಷಗಾನ. ಈ ಕಲೆ ಉಳಿದು ಬೆಳೆದರೆ ಸಾಹಿತ್ಯ ಪರಂಪರೆಯೊಂದು ಸದಾ ಜೀವಂತವಾಗಿರಲು ಸಾಧ್ಯ ಎಂದು ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ, ಕೃಷಿಕ ಮಚ್ಚಿಮಲೆ ಅನಂತ ಭಟ್ ಹೇಳಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಮುಂಡಾಜೆ ಶ್ರೀ ಶಾರದಾ ನಗರದಲ್ಲಿ ನಡೆದ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಇದನ್ನು ನ.17 ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಾರದಾ ನಗರ ಶ್ರೀ ದುರ್ಗಾಪರಮೇಶ್ವರೀ ಆರಾಧನಾ ಮಂದಿರದ ವಠಾರದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.

ಕಲಿತ ಕಲೆಯನ್ನು ಧಾರೆ ಎರೆದರೆ ಅದು ಗುರು ಋಣ ಸಂದಾಯ ಕ್ಕೆ ಸಮ: ರವಿಕುಮಾರ್
ಅಧ್ಯಯನ ಕೇಂದ್ರದ ಮುಖ್ಯಸ್ಥ, ಕಟೀಲು ಮೇಳದ ಯುವ ಯಕ್ಷಗಾನ ಕಲಾವಿದ ರವಿಕುಮಾರ್ ಮುಂಡಾಜೆ ಪ್ರಾಸ್ತವಿಕವಾಗಿ ಮಾತನಾಡಿ, ಯಕ್ಷಗಾನದಲ್ಲಿ ನಾವು ಮಾತ್ರ ಕಾಣಿಸಿಕೊಳ್ಳುವುದಲ್ಲ, ನಮ್ಮ ಊರು ಕೂಡ ಕಾಣಿಸಿಕೊಳ್ಳಬೇಕು.ನಮ್ಮಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಈ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಾರಂಭ ಮಾಡಲಾಗಿದೆ. ನಾವು ಕಷ್ಟಪಟ್ಟು ಕಲಿತ ವಿದ್ಯೆಯನ್ನು ಇನ್ನೊಬ್ಬನಿಗೆ ಧಾರೆ ಎರೆದು ಕೊಟ್ಟರೆ ಗುರು ಋಣದಿಂದ ಮುಕ್ತಿ ಹೊಂದಲು ಸಾಧ್ಯ ಎಂಬುದು ನನ್ನ ಕಲ್ಪನೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಕೂಳೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ದಯಾನಂದ ಪಿ. ಬೆಳಾಲು ಮತ್ತು ರಾಘವ ಹೆಚ್. ಗೇರುಕಟ್ಟೆ, ಯಕ್ಷಗಾನ ಗುರು ದಿವಾಣ ಶಿವಶಂಕರ್ ಭಟ್, ಕಟೀಲು ಮೇಳದ ಯಕ್ಷಗಾನ ಕಲಾವಿದ ರಾಮಣ್ಣ ಭಂಡಾರಿ ಚಾರ್ಮಾಡಿ, ಕೀರ್ತನಾ ಕಲಾತಂಡದ ಸಂಚಾಲಕ ಸದಾನಂದ ಬಿ., ಸಿವಿಲ್ ಗುತ್ತಿಗೆದಾರ ಚೆನ್ನಕೇಶವ ನಾಯ್ಕ ಅರಸಮಜಲು, ಶ್ರೀ ಮಂಜುಶ್ರೀ ಭಜನಾ ಮಂಡಳಿ ಕಾರ್ಯದರ್ಶಿ ಉಮೇಶ ಆಚಾರ್ಯ, ಜನಪದ ಕಲಾವಿದೆ ರಂಜಿನಿ ಆರ್ ಉಪಸ್ಥಿತರಿದ್ದರು. ಜಾನಪದ ಕಲಾವಿದ ಜಯರಾಮ್ ಕೆ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು.

Exit mobile version