ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನ.16ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮಾರಿಗುಡಿ ಸಮೀಪದ ಏಕತಾ ಸೌಧದಲ್ಲಿ ನಡೆಯಿತು. ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಒಟ್ಟು 7 ಮಂದಿ ಅಂತಿಮ ಕಣದಲ್ಲಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸರಕಾರಿ ಪ್ರಾಥಮಿಕ ಶಾಲೆಗಳ ಜಯರಾಜ ಜೈನ್ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್‌ನ ಪ್ರಶಾಂತ್ ಡಿ. ಬಳಂಜ ನಾಮಪತ್ರ ಸಲ್ಲಿಸಿದ್ದು ಜಯರಾಜ ಜೈನ್ ಅಧ್ಯಕ್ಷರಾಗಿ ಆಯ್ಕೆಯಾದರು. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್‌ನ ಪ್ರಶಾಂತ್ ಡಿ. ಬಳಂಜ 7 ಮತಗಳನ್ನು ಪಡೆದು ಪರಭಾವಗೊಂಡಿದ್ದಾರೆ. ಖಜಾಂಜಿ ಸ್ಥಾನಕ್ಕೆ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯ ಶೆಟ್ಟಿ ನಾರಾಯಣ ಸಂಜೀವ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವೆಯ ಸದಾಶಿವ ಭಟ್ ಕೆ. ಅಂತಿಮ ಕಣದಲ್ಲಿದ್ದರು. ಖಜಾಂಚಿಯಾಗಿ ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯ ಶೆಟ್ಟಿ ನಾರಾಯಣ ಸಂಜೀವ ಅವರು 17 ಮತಗಳಿಂದ ಜಯ ಗಳಿಸಿದರು. ಪಶು ವೈದ್ಯ ಸೇವೆಯ ಸದಾಶಿವ ಭಟ್ ಕೆ ಅವರು 5 ಮತಗಳಿಸಿ ಸೋಲು ಅನುಭವಿಸಿದರು.
ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸರಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಆನಂದ ಡಿ., ಕಂದಾಯ ಇಲಾಖೆಯ ಪ್ರದೀಪ್ ಕುಮಾರ್ ಸಿ. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೋಮನಾಥ ಆರ್. ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಂದಾಯ ಇಲಾಖೆಯ ಪ್ರದೀಪ್ ಕುಮಾರ್ ಸಿ. 8 ಮತಗಳನ್ನು ಪಡೆದು ರಾಜ್ಯ ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸರಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಆನಂದ ಡಿ. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೋಮನಾಥ ಆರ್ ಅವರು ತಲಾ 7 ಮತ ಗಳಿಸಿದರು.