ಕೊಕ್ಕಡ: ಕಳೆದ ಕೆಲವು ದಿನಗಳಿಂದ ಕೊಕ್ಕಡದ ಹೃದಯ ಭಾಗದಲ್ಲಿರುವ ಕೆನರಾ ಬ್ಯಾಂಕ್ ಒಂದಿಲ್ಲೊಂದು ವಿಷಯದಿಂದ ಸುದ್ದಿಯಾಗುತ್ತಿದೆ. ಗ್ರಾಹಕರ ಖಾತೆಯ ಹಣ ಗ್ರಾಹಕರಿಗೆ ಅರಿವಿಲ್ಲದಂತೆ ವರ್ಗಾವಣೆಯಾಗುವ ಆರೋಪ ಒಂದೆಡೆಯಾದರೆ ಗ್ರಾಹಕರ ಪಾಸ್ ಬುಕ್ ಗಳು ಕ್ಲಪ್ತ ಸಮಯದಲ್ಲಿ ಎಂಟ್ರಿ ಆಗುತ್ತಿಲ್ಲ ಎಂದು ಗ್ರಾಹಕರು ದೂರನ್ನಿತ್ತಿದ್ದಾರೆ. ಈ ಬ್ಯಾಂಕ್ ನಲ್ಲಿ ಗ್ರಾಮೀಣ ಭಾಗದ ಗ್ರಾಹಕರೇ ಹೆಚ್ಚಾಗಿರುವ ಕಾರಣ ಇಲ್ಲಿನ ಕೃಷಿಕರಿಗೆ ಹಾಗೂ ಕೂಲಿ ಮಾಡಿ ಬದುಕುವವರಿಗೆ ಸರಕಾರದ ಸೌಲಭ್ಯಗಳು ಬ್ಯಾಂಕ್ ನ ಖಾತೆಗೆ ಜಮಯಾದರೆ ಅದನ್ನು ಮೊಬೈಲ್ ಸಂದೇಶದ ಮೂಲಕ ತಿಳಿದುಕೊಳ್ಳುಲು ಹೆಚ್ಚಾಗಿ ಗೊತ್ತಿಲ್ಲದೆ ಇರುವ ಕಾರಣ ಪಾಸ್ ಪುಸ್ತಕದಲ್ಲಿನ ದಾಖಲೆಗಳು ಅತಿ ಅವಶ್ಯಕ ಎಂದು ಹೇಳುತ್ತಿದ್ದಾರೆ.
ತಮ್ಮ ಖಾತೆಗೆ ಹಣ ಜಮಯಾದರೆ ಅಥವಾ ವರ್ಗಾವಣೆ ಆದರೆ ಅದರ ಮಾಹಿತಿ ತಿಳಿಯಲು ನಮಗೆ ಪಾಸ್ ಬುಕ್ ಎಂಟ್ರಿ ಸಹಕಾರಿಯಾಗುತ್ತದೆ ಆದರೆ ಬ್ಯಾಂಕಿಗೆ ಹೋದಾಗಲೆಲ್ಲ ಈಗ ಎಂಟ್ರಿ ಇಲ್ಲ ಎಂದು ನಮ್ಮನ್ನು ಕಳುಹಿಸುತ್ತಿದ್ದಾರೆ. ಪ್ರತಿಸಲವೂ ಇದೇ ಮಾತು ಬ್ಯಾಂಕ್ ನ ಸಿಬ್ಬಂದಿಗಳು ಹೇಳುತ್ತಿದ್ದು ನಮಗೆ ಈ ಸೇವೆಯಿಂದ ಕಷ್ಟವಾಗಿದೆ ಎಂದು ಸುದ್ದಿ ಬಿಡುಗಡೆ ಪತ್ರಿಕೆಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಗ್ರಾಹಕರಿಗೆ ಸೇವೆಯನ್ನು ಕೊಡಲಾಗದಿದ್ದರೆ ಈ ಬ್ಯಾಂಕನ್ನು ಮುಚ್ಚಿ ಬೇರೆ ಯಾವುದಾದರೂ ಬ್ಯಾಂಕ್ ಇಲ್ಲಿ ತೆರೆಯುವಂತಾಗಲಿ, ಆ ಮೂಲಕ ಗ್ರಾಮೀಣ ಭಾಗದ ನಮಗೆ ಸರಿಯಾದ ಸೇವೆ ದೊರಕುವಂತಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.