ಬೆಳ್ತಂಗಡಿ: ತೀವ್ರ ಹದಗೆಟ್ಪ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯ ದುರಸ್ತಿಗೆ ಆಗ್ರಹಿಸಿ ಎಸ್ ಡಿಪಿ ಐ ಕಣಿಯೂರು ಬ್ಲಾಕ್ ನೇತೃತ್ವದಲ್ಲಿ ಕಲ್ಲೇರಿಯಲ್ಲಿ ರಸ್ತೆ ತಡೆ ನಿರ್ಮಿಸುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಯಿತು. ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ ರಸ್ತೆ ತಡೆ ನಿರ್ಮಿಸಿ ಪ್ರತಿಭಟನೆ ನಡೆಸಿದ ಎಸ್ ಡಿ ಪಿ ಐ ಮುಖಂಡರು ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯವನ್ನು ಖಂಡಿಸಿದರು. ಹೊಂಡ, ಗುಂಡಿಗಳಿಂದ ಪ್ರಯಾಣಿಕರ ಪಾಲಿಗೆ ನಿತ್ಯ ನರಕ ಯಾತನೆಗೆ ಕಾರಣವಾಗುತ್ತಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಕಲ್ಲೇರಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಎಸ್ ಡಿ ಪಿ ಐ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಮುಖಂಡ ನವಾಜ್ ಕಟ್ಟೆ , ಕಣಿಯೂರು ಬ್ಲಾಕ್ ಅಧ್ಯಕ್ಷ ಮುಸ್ತಾಫ ಬಂಗೆರಕಟ್ಟೆ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ಟೀಕಿಸಿದರು. ಪ್ರತಿಭಟನಾಕಾರರು ಗ್ರಾಮಪಂಚಾಯತ್ ಕಾರ್ಯದರ್ಶಿ ಮೂಲಕ ತಹಶೀಲ್ದಾರರಿಗೆ ಮನವಿ ನೀಡಿದರು. ಈ ಸಂದರ್ಭ ಪ್ರತಿಭಟನೆ ಗ್ರಾ.ಪಂ.ಸದಸ್ಯ ಅನೀಶ್ ಫೈಜಲ್ ಮೂರುಗೋಳಿ ಬಂಗೇರಕಟ್ಟೆ, ಅಸ್ಫಾಕ್ ಪುಂಜಾಲಕಟ್ಟೆ, ಹನೀಫ್ ಪುಂಜಾಲಕಟ್ಟೆ, ಹನೀಫ್ ಟಿ.ಎಸ್., ನಝೀರ್ ಬಾಜಾರ್, ಅನ್ವರ್ ತೆಕ್ಕಾರು , ಅಶ್ರಫ್ ಕಲ್ಲೇರಿ ಮತ್ತಿತರರು ಉಪಸ್ಥಿತರಿದ್ದರು.