ತೆಕ್ಕಾರು: ದೇವರಗುಡ್ಡೆ ಭಟ್ರಬೈಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿಯ ಪ್ರಧಾನ ಅಂಗಗಳಲ್ಲೊಂದಾದ ಷಢಾಧಾರ ಹಾಗೂ ಗರ್ಭನ್ಯಾಸ ಕಾರ್ಯಕ್ರಮ ನ.13ರಂದು ನಡೆಯಿತು. ವೈಧಿಕ ವಿಧಿವಿಧಾನಗಳೊಂದಿಗೆ ಷಢಾಧಾರ ಪ್ರತಿಷ್ಠೆ ಹಾಗೂ ಗರ್ಭನ್ಯಾಸ ತಂತ್ರಾಗಮ ಪ್ರಕಾರ ಪ್ರತಿಷ್ಠಾಧಿಗಳನ್ನು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೇರವೇರಿಸಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ವಿಧಾನ ಪರಿಷತ್ ಸದಸ್ಯನಾಗಿ ಪ್ರಥಮ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ಶೀ ಕ್ಷೇತ್ರ ಭಟ್ರಬೈಲ್‌ನಲ್ಲಿ ಒದಗಿ ಬಂದಿದೆ. ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದ ಅವರು ಕ್ಷೇತ್ರದ ಶಿಲಾ ದೇಣಿಗೆಯ ಕೂಪನ್ ಬಿಡುಗಡೆಗೊಳಿಸಿದರು.
ಪುತ್ತೂರಿನ ವಾಸ್ತು ತಜ್ಞ ಪಿ.ಜಿ.ಜಗನ್ನಿವಾಸ್ ರಾವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಗಪ್ಪ ಬಂಗೇರ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕರಾಮ ನಾಯಕ್ ನಾಗರಕೋಡಿ, ಟ್ರಸ್ಟ್ ಅಧ್ಯಕ್ಷ ನಾಗಭೂಷನ್ ಬಾಗ್ಲೋಡಿ, ಟ್ರಸ್ಟಿ ಲಕ್ಷ್ಮಣ ಭಟ್ರಬೈಲು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಟ್ರಸ್ಟಿಗಳು ಹಾಗೂ ಊರಿನವರು ಹಾಜರಿದ್ದರು.
ಬೆಳಗ್ಗೆ ಶ್ರೀ ಗೋಪಾಕೃಷ್ಣ ದೇವರ ವಿಶೇಷ ಪೂಜೆ, ಪ್ರಾರ್ಥನೆ, ಪುಣ್ಯಾಹ, ಮುಷ್ಟಿ ಆದಿ ಶುದ್ಧಿ, ಆಧಾರ ಶಿಲೆ ಪ್ರತಿಷ್ಠೆ, ನಿಧಿಕುಂಭ, ಪದ್ಮಕೂರ್ಮ ಹಾಗೂ ಯೋಗನಾಳ ಪ್ರತಿಷ್ಠಾ ಕ್ರಿಯೆಗಳು, ದಕ್ಷಿಣ ಭಾಗದಲ್ಲಿ ಗಣಪತಿ, ದಕ್ಷಿಣಮೂರ್ತಿ ಸಂಕಲ್ಪ ಪ್ರತಿಷ್ಠೆ ಹಾಗೂ ಮಧ್ಯಾಹ್ನ ಪ್ರಸಾದ ಭೋಜನ ನಡೆಯಿತು. ರಾತ್ರಿ ವಾಸ್ತುಬಲಿ, ಗರ್ಭಪಾತ್ರೆ ಸಂಸ್ಕಾರ ಹೋಮ, ಕಲಶಪೂರಣ ಹಾಗೂ ಗರ್ಭನ್ಯಾಸ ನೇರವೇರಿತು.