ವರದಿ: ಭುವನೇಂದ್ರ ಪುದುವೆಟ್ಟು
ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ಮುಗೇರ ಸಮುದಾಯದವರು ತಲೆತಲಾಂತರದಿಂದ ನಡೆಸಿಕೊಂಡು ಬರುತ್ತಿದ್ದ ಅಳಿವಿನಂಚಿನಲ್ಲಿರುವ ವಿಶಿಷ್ಟ ಆಟಿಕಳೆಂಜ ಆಚರಣೆ ಪುನರಾರಂಭಗೊಂಡಿದೆ. ಮುಗೇರರ ಆಟಿಕಳೆಂಜವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಮತ್ತು ತುಳು ವಿಕಿಮೀಡಿಯನ್ಸ್ ಯಶಸ್ವಿಯಾಗಿದ್ದಾರೆ.
ತುಳುನಾಡಿನ ಅನನ್ಯ ಆಚರಣೆಯಾಗಿರುವ ಆಟಿಕಳೆಂಜ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ದೈವದ ವೇಷಭೂಷಣವನ್ನು ಹೋಲುವ ನಲಿಕೆ ಸಮುದಾಯದವರ ಕುಣಿತ. ಮುಖಕ್ಕೆ ಅರಸಿನ ಬಣ್ಣ, ಮೈಕೈಗೆ ಆಕರ್ಷಕ ಬಣ್ಣ, ಕಾಲಿಗೆ ಗಗ್ಗರ, ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಮುಂತಾದುವು ಇರುತ್ತದೆ. ಒಬ್ಬ ವೇಷಧಾರಿಯೊಂದಿಗೆ ತೆಂಬರೆ ನುಡಿಸಲು ಇನ್ನೊಬ್ಬರು ಸಹಾಯಕ್ಕೆ ಇರುತ್ತಾರೆ. ಆದರೆ, ಮುಗೇರರ ಆಟಿಕಳೆಂಜ ವಿಭಿನ್ನವಾದುದು.
ಅಳಿವಿನಂಚಿನಲ್ಲಿ ಅಪೂರ್ವ ಕಲೆ:
ಮೂಲನಿವಾಸಿಗಳಾದ ಮುಗೇರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಂಚಿ ಹೋಗಿದ್ದಾರೆ. ಆದರೆ, ಈ ಸಮುದಾಯದ ಆಟಿಕಳೆಂಜ ಇತ್ತೀಚಿನ ವರ್ಷಗಳಲ್ಲಿ ಎಲ್ಲಿಯೂ ನಡೆದಿರುವ ಉಲ್ಲೇಖಗಳು ಸಿಕ್ಕಿಲ್ಲ. ಪುದುವೆಟ್ಟು ಗ್ರಾಮದ ಮೇಲಿನಡ್ಕ ಎಂಬಲ್ಲಿ ಸುಮಾರು 15 ವರ್ಷಗಳ ಹಿಂದಿನವರೆಗೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್, ಈ ಅಪೂರ್ವ ಪರಂಪರೆಯ ಕುಣಿತವನ್ನು ಪುನರಾರಂಭಿಸಲು ಪ್ರೋತ್ಸಾಹಿಸಿದೆ.
ಮುಗೇರರ ಆಟಿಕಳೆಂಜ ದಾಖಲೀಕರಣ:
ಯೋಜನೆಯ ನಿರ್ದೇಶಕ ಭರತೇಶ ಅಲಸಂಡೆಮಜಲು ಹಾಗೂ ಮಾರ್ಗದರ್ಶಕರಾದ ವಿಶ್ವನಾಥ ಬದಿಕಾನ, ಕಿಶೋರ್ ಕುಮಾರ್ ರೈ ಶೇಣಿ, ಯದುಪತಿ ಗೌಡ, ದಿವಾ ಕೊಕ್ಕಡ ನೇತೃತ್ವದಲ್ಲಿ ವಿನೋದ ಮಮತಾ ರೈ, ಯಕ್ಷಿತಾ ಮೂಡುಕೊಣಾಜೆ, ಚಿದಾನಂದ ಕಂಪ ಅವರನ್ನೊಳಗೊಂಡ ಸಂಶೋಧನಾ ತಂಡವು ಸ್ಥಳೀಯ ಜನಪದ ಕಲಾವಿದರ ಬೆಂಬಲದೊಂದಿಗೆ ಮುಗೇರರ ಆಟಿಕಳೆಂಜವನ್ನು ದಾಖಲೀಕರಣ ಮಾಡಲು ಯೋಜಿಸಿತು. ಸಮುದಾಯದವರನ್ನು 2024ರ ಆಟಿ ತಿಂಗಳಿಗೂ ಮೊದಲು ಭೇಟಿ ಮಾಡಿ, ನಂತರ ಆಟಿ ತಿಂಗಳಲ್ಲಿ ದಾಖಲೀಕರಣವನ್ನೂ ನಡೆಸಿದೆ. ಸುಜಿತ್ ಮುಗೆರೋಡಿ ಮತ್ತು ಚಂದ್ರಶೇಖರ ಬಂದಾರು ಛಾಯಾಚಿತ್ರದಲ್ಲಿ ಸಹಕರಿಸಿದ್ದಾರೆ.
ಸಮುದಾಯದಿಂದ ಸಹಕಾರ:
ಮುಗೇರರ ಆಟಿಕಳೆಂಜ ನಶಿಸಿ ಹೋಗುವ ಭೀತಿಯಲ್ಲಿತ್ತು. ವಿಕಿಮೀಡಿಯನ್ಸ್ ಪ್ರೋತ್ಸಾಹದೊಂದಿಗೆ ಪುಟಿದೆದ್ದ ಸಮುದಾಯದವರು, ಮೇಲಿನಡ್ಕದ ನಾರಾಯಣರ ನೇತೃತ್ವದಲ್ಲಿ ಆಟಿಕಳೆಂಜಕ್ಕೆ ಸಿದ್ಧರಾದರು. ಕುಂಞ ಹಾಗೂ ಶೀನ ವೇಷ ಹಾಕಿದ್ದು, ಇವರಿಗೆ ಸಮುದಾಯದ ಹತ್ತಾರು ಮಂದಿ ಸಹಕಾರ ನೀಡಿದ್ದಾರೆ. ಗ್ರಾಮದ ಪಡ್ಡಡ್ಕ, ಮಾಂಜೀಲು, ದಡಹಿತ್ತಿಲು, ನಡ್ಯೇಲ್, ಡೆಚ್ಚಾರು ಬೊಳ್ಮನಾರ್ ಮತ್ತಿತರ ಕಡೆಯ 450ಕ್ಕೂ ಹೆಚ್ಚು ಮನೆಗಳಲ್ಲಿ ಈ ಬಾರಿ ಆಟಿಕಳೆಂಜ ಕುಣಿತ ನಡೆದಿದೆ. ಐದು ದಿನಗಳ ಕುಣಿತದ ಬಳಿಕ ಸಮುದಾಯದ ಪ್ರಮುಖರ ಮನೆಯಲ್ಲಿ ಮುಗೇರರ ಕುಲದೇವರು ನಾಗ ಬೆರ್ಮೆರ್ ಪೂಜೆ, ನಾಗನಿಗೆ ಹಾಲು, ಸೀಯಾಳ ಸಮರ್ಪಣೆಯೊಂದಿಗೆ ಸಮಾಪ್ತಿ ಕಂಡಿದೆ.
ಆಟಿಕಳೆಂಜ ಶುಭ ಸಂಕೇತ:
ಆಟಿ ಎಂದರೆ ಆಷಾಢ, ಕಳೆಂಜ ಎಂದರೆ ಕಳೆಯುವವನು ಎಂಬರ್ಥವಿದೆ. ಮನೆಯ ಅನಿಷ್ಟ, ಊರಿನ ಕಷ್ಟ (ಮಾರಿ) ದೂರವಾಗುತ್ತದೆ ಎಂಬುದು ನಂಬಿಕೆ. ತುಳುನಾಡಿನಾದ್ಯಂತ ಆಟಿ ತಿಂಗಳಲ್ಲಿ ಮನೆಮನೆಗೆ ತೆರಳುವ ಆಟಿಕಳೆಂಜನು ಊರಿನ ಮಾರಿಯನ್ನು ಕಳೆದು ಹಳ್ಳಿಗರನ್ನು ರೋಗದಿಂದ ರಕ್ಷಿಸುತ್ತಾನೆ, ಹೊಸ ಹುಮ್ಮಸ್ಸಿನಿಂದ ಸಮೃದ್ಧಿಯನ್ನು ತರುತ್ತಾನೆ ಎಂದು ಜನಪದರು ನಂಬುತ್ತಾರೆ. ಊರಿನ ಮನೆ ಮಂದಿ ಮತ್ತು ಜಾನುವಾರುಗಳನ್ನು ಕಳೆಂಜ ಹಾನಿಯಿಂದ ರಕ್ಷಿಸುತ್ತಾನೆ. ಕಳೆಂಜ ನೀರು ಹೊಯ್ದರೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ, ಮೈನರೆಯದವರು ಮೈನರೆಯುತ್ತಾರೆ, ಹೂ ಬಿಡದ ತೆಂಗಿನ ಮರದಲ್ಲಿ ಫಸಲು ಬರುತ್ತದೆ.. ಹೀಗೆ ಕಳೆಂಜನಿಂದ ಊರಿಗೆ ಒಳ್ಳೆಯದಾಗುತ್ತದೆ, ಮಾರಿ ಹೋಗುತ್ತದೆ ಎಂಬ ನಂಬಿಕೆಗಳಿವೆ.
ಮುಂದುವರಿಯಲಿ ಆಚರಣೆ:
ಮುಗೇರರ ಆಟಿಕಳೆಂಜವು ಶತಮಾನಗಳ ಹಳೆಯ ಆಚರಣೆಯಾಗಿದ್ದು, ಆಧುನಿಕ ತಂತ್ರಜ್ಞಾನ, ಶಿಕ್ಷಣ, ಉದ್ಯೋಗ, ವಲಸೆ ಮತ್ತು ರಾಜಕೀಯ ಧ್ರುವೀಕರಣದ ಕಾರಣದಿಂದ, ಯುವಜನತೆಯ ಆಸಕ್ತಿ, ಆರ್ಥಿಕ ಇಚ್ಛಾಶಕ್ತಿ ಮತ್ತು ಮಾರ್ಗದರ್ಶನದ ಕೊರತೆಯಿಂದ ಸಂಪೂರ್ಣವಾಗಿ ನಿಂತುಹೋಗಿತ್ತು. ಕಳೆದೊಂದು ದಶಕದಲ್ಲಿ ಈ ಆಚರಣೆ ಎಲ್ಲೂ ನಡೆದಿಲ್ಲ. ಮುಗೇರರ ಆಟಿಕಳೆಂಜ ಕುಣಿತವನ್ನು ತಿಳಿದ ಹಿರಿಯರಿದ್ದರೂ ಕುಣಿತಕ್ಕೆ ಬೇಕಾದ ಮೂಲ ಸಲಕರಣೆಗಳನ್ನು ಸಂರಕ್ಷಿಸಿಡುವ ಮುಂದಾಲೋಚನೆ ನಡೆದಿಲ್ಲ. ಈ ಆಚರಣೆ ಹಿರಿಯರ ಮೂಲಕ ಕಿರಿಯರಿಗೆ ತಲುಪಲು ಅಗತ್ಯ ತರಬೇತಿ ನೀಡಬೇಕಾದ ಅವಶ್ಯಕತೆಯಿದೆ. ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯ ಸಹಕಾರ ಪಡೆದು, ಈ ಆಚರಣಾತ್ಮಕ ಕುಣಿತವನ್ನು ನಿರ್ವಹಿಸಲು ಪ್ರಯತ್ನ ನಡೆಯಬೇಕೆನ್ನುತ್ತಾರೆ ವಿಕೀಮಿಡಿಯನ್ನರು.
ವೇಷ ಹಾಕುವ ಕ್ರಮವೇ ವಿಶಿಷ್ಟ:
ನಲಿಕೆ ಸಮುದಾಯದವರ ಆಟಿಕಳೆಂಜಕ್ಕೂ ಮುಗೇರ ಆಟಿಕಳೆಂಜಕ್ಕೂ ಅಜಗಜಾಂತರವಿದೆ. ಮುಗೇರರ ಆಟಿಕಳೆಂಜದಲ್ಲಿ ವೇಷ-ಬಣ್ಣಗಾರಿಕೆಗೆ ಪ್ರಾಕೃತಿಕ ವಿಧಾನವನ್ನೇ ಅನುಸರಿಸುತ್ತಾರೆ. ಸ್ಥಳೀಯವಾಗಿ ದೊರಕುವ ಸೇಡಿ ಅಥವಾ ಜೇಡಿ ಮಣ್ಣನ್ನು ಬಿಳಿ ಬಣ್ಣವಾಗಿ ಮತ್ತು ಹೆಂಚಿನ ತುಂಡುಗಳನ್ನು ಅರೆದು ಕೆಂಪು ಬಣ್ಣ ಮಾಡಿ ತೆಂಗಿನ ಗೆರಟೆಯಲ್ಲಿ ತುಂಬಿಸಿಡುತ್ತಾರೆ. ಸಮುದಾಯದ ಹಿರಿಯನ ಮನೆಯಲ್ಲಿ ಒಟ್ಟು ಸೇರಿ, ಪ್ರಾಕೃತಿಕ ಬಣ್ಣವನ್ನು ಮೈಗೆ ಬಳಿದು, ತೇರು ಮತ್ತು ಭೂತ ಸಂಪಿಗೆ ಹೂವುಗಳ ಕಿರೀಟಿಗಳನ್ನು ಕಟ್ಟಿ ಹಿಂಗಾರದಿಂದ ಶೃಂಗರಿಸುತ್ತಾರೆ. ಸೊಂಟದ ಸುತ್ತ ತೆಂಗಿನ ಗರಿಗಳನ್ನು ಸುತ್ತಿಕೊಳ್ಳುತ್ತಾರೆ. ಮೊದಲ ದಿನ ಬಳಸಿದ ಗರಿಯನ್ನು ಕೊನೆಯ ದಿನದವರೆಗೂ ಬಳಸಬೇಕು ಎಂಬುದು ನಿಯಮ. ಗಡ್ಡ - ಮೀಸೆಯನ್ನೂ ತೆಂಗಿನ ಸಿಪ್ಪೆಯ ನಾರಿನಿಂದಲೇ ಮಾಡುತ್ತಾರೆ. ಕೈಯಲ್ಲಿ ಅತ್ರ (ಗರಿಯ ಛತ್ರಿ) ಹಿಡಿದುಕೊಂಡು ಗ್ರಾಮದ ಮನೆ-ಮನೆಗೆ ತೆರಳಿ ಕುಣಿತ ಪ್ರದರ್ಶಿಸಿ, ಕಳೆಂಜ ಕಳೆಂಜ.... ಹಾಡನ್ನು ಹಾಡುತ್ತಾರೆ. ಮನೆಯವರು 1 ಸೇರು ಅಕ್ಕಿ, ತೆಂಗಿನಕಾಯಿ, ಹುಳಿ, ಮೆಣಸು, ಉಪ್ಪು ಕೊಡುವ ಕ್ರಮವಿದೆ. ಇವರು ಮುಗೇರ್ಲು ಮತ್ತು ನಾ ಬಿರ್ಮೆರ್ ಹೆಸರಿನಲ್ಲಿ ವೇಷ ಹಾಕುವುದರಿಂದ ಇವರನ್ನು ಬಿರ್ಮೆರೆ ಮಾಣಿಲು ಎಂದು ಕರೆಯುತ್ತಾರೆ. ವೇಷ ಹಾಕುವವರು ಪಾವಿತ್ರ್ಯತೆ ಕಾಪಾಡಬೇಕಿದ್ದು, ಶುದ್ಧಾಚಾರದಿಂದ ಇರಬೇಕು. ಮದ್ಯ, ಮಾಂಸ ಸೇವಿಸಬಾರದು ಎಂಬ ನಿಯಮಗಳಿವೆ.
ಪಾರಂಪರಿಕ ಕುಣಿತ ಪುನರಾರಂಭ:
ನಾವು ರಿವೀಲಿಂಗ್ ದಿ ಎಸೆನ್ಸ್ ಆಫ್ ಆಟಿ ಮಂತ್ ಯೋಜನೆಯಡಿಯಲ್ಲಿ ಇಡೀ ತುಳುನಾಡಿನ ಆಟಿ ವಿಶೇಷವನ್ನು ದಾಖಲೀಕರಣ ಮಾಡಿದ್ದೇವೆ. ಕೇರಳದ ಅಡೂರು, ಪೆರ್ಲ ಭಾಗದ ಬೇಡನ್ ಮರ್ದನ್, ಸುಳ್ಯದಲ್ಲಿ ಆಟಿಕಳೆಂಜ, ವಿಟ್ಲ ಭಾಗದಲ್ಲಿ ಆಟಿಯಲ್ಲಿ ನಡೆಯುವ ದೈವಾರಾಧನೆ, ಬೆಳ್ತಂಗಡಿಯ ಪುದುವೆಟ್ಟಿನಲ್ಲಿ ಮುಗೇರರ ಆಟಿಕಳೆಂಜ ಮತ್ತಿತರ ವಿಚಾರಗಳನ್ನು ದಾಖಲೀಕರಣ ಮಾಡಿದ್ದೇವೆ. ಪುದುವೆಟ್ಟಿನಲ್ಲಿ ಸಮುದಾಯದವರನ್ನು ಭೇಟಿ ಮಾಡಿ, ಈ ಪಾರಂಪರಿಕ ಕುಣಿತವನ್ನು ಪುನರಾರಂಭಿಸುವಂತೆ ಮನವೊಲಿಸಿದೆವು. ನಮ್ಮ ತಂಡದ ಯದುಪತಿ ಗೌಡರು ಅತ್ರ ಒದಗಿಸಿದರು. ಈಗ ಸಮುದಾಯದವರು ಆಚರಣೆಯನ್ನು ಮುಂದುವರಿಸುವ ಉಮೇದಿನಲ್ಲಿದ್ದಾರೆ. ಅವರಿಗೆ ಎಲ್ಲರ ಪ್ರೋತ್ಸಾಹದ ಅಗತ್ಯವಿದೆ.
- ಭರತೇಶ ಅಲಸಂಡೆಮಜಲು, ಯೋಜನೆಯ ನಿರ್ದೇಶಕ
-----------------
ನಿಂತಿದ್ದ ಆಚರಣೆ ಪುನರಾರಂಭ:
ಮುಗೇರರ ಆಟಿಕಳೆಂಜ ಕುರಿತು 80ರ ದಶಕದಲ್ಲೇ ಅಧ್ಯಯನ ನಡೆಸಿದ್ದೆ. ಇದು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಇದ್ದ ಆಚರಣೆ. ಹಿಂದೆ ಉಜಿರೆ ಸಹಿತ ತಾಲೂಕಿನ ಇತರ ಕೆಲವು ಕಡೆ ನಡೆಯುತ್ತಿತ್ತು. ಪುದುವೆಟ್ಟಿನಲ್ಲಿ ಆಚರಣೆ ನಿಂತು ಹಲವು ವರ್ಷಗಳಾಗಿದ್ದವು. ಈ ಬಾರಿ ನಮ್ಮ ಪ್ರಯತ್ನದಿಂದ ಪುನರಾರಂಭಗೊಂಡಿದೆ. ಆಟಿಕಳೆಂಜ ಬರುವುದೆಂದರೆ ಮಾರಿ ಕಳೆಯುವುದು ಎಂದರ್ಥ. ಕಳೆಂಜನ ಮೂಲಕ ದೋಷ ನಿವಾರಣೆಗೆ ನೀರು ಹೊಯ್ಯುವ ಕ್ರಮವಿದೆ. ನಮ್ಮ ಪರಿಚಯದ ಒಬ್ಬರ ಎರಡು ವರ್ಷದ ಮಗು ನಡೆಯಲು ಕಲಿತಿರಲಿಲ್ಲ. ಈ ಬಾರಿಯ ಮುಗೇರರ ಆಟಿಕಳೆಂಜ ಬರುವಾಗ ನೀರು ಹಾಕಿಸಲಾಗಿತ್ತು. ಮರುದಿನವೇ ಮಗು ನಡೆಯಲಾರಂಭಿಸಿದೆ. ಹಿಂದಿನ ಕಾಲದಲ್ಲಿ ಇಂಥ ಹಲವು ನಂಬಿಕೆಗಳಿಗೆ ಆಟಿಕಳೆಂಜದ ಮೂಲಕ ಇಂಬು ದೊರೆಯುತ್ತಿತ್ತು.
- ಯದುಪತಿ ಗೌಡ, ತುಳು ಜಾನಪದ ತಜ್ಞ
----------
20 ವರ್ಷ ಐವರೊಂದಿಗೆ ವೇಷ:
ನಾನು ಸುಮಾರು 20 ವರ್ಷ ಆಟಿಕಳೆಂಜ ವೇಷ ಹಾಕಿದ್ದೇನೆ. ನನ್ನ ತಂದೆ ಕುಂಡ ಅವರಿಂದ ಕಲಿತು ಅವರೊಂದಿಗೆ, ತಂದೆ ತೀರಿಕೊಂಡ ನಂತರ ತಮ್ಮ ಚೋಮನೊಂದಿಗೆ, ಇನ್ನೋರ್ವ ತಮ್ಮ ಮುದರನೊಂದಿಗೆ, ಗುರಿಪಳ್ಳ ನಿಡಿಗಲ್‌ನಲ್ಲಿ ಇನ್ನೊಬ್ಬರೊಂದಿಗೆ, ಈಗ ನನ್ನ ತಮ್ಮನ ಮಗ ಶೀನನೊಂದಿಗೆ ವೇಷ ಹಾಕಿದ್ದೇನೆ. ಹಿಂದೆ ಉಜಿರೆ (ಗುರಿಪಳ್ಳ ನಿಡಿಗಲ್), ಕೊಕ್ಕಡ, ನಿಡ್ಲೆ ಮುಂತಾದ ಕಡೆ ನಮ್ಮವರು ಆಟಿಕಳೆಂಜ ಮಾಡುತ್ತಿದ್ದರು. ಈಗ ಎಲ್ಲಿಯೂ ನಡೆಯುತ್ತಿಲ್ಲ.
- ಕುಂಞ, ಈ ಬಾರಿ ವೇಷ ಹಾಕಿದವರು
------------------
ಮುಂದುವರಿಸುವ ಇಚ್ಛೆಯಿದೆ:
ನಮ್ಮ ಸಮುದಾಯದ ಆಟಿ ಕಳೆಂಜದಲ್ಲಿ ಜೋಡಿಯಾಗಿ ಇಬ್ಬರು ವೇಷ ಹಾಕಬೇಕು. ಅವರು ತಂದೆ-ಮಗ, ಅಣ್ಣ-ತಮ್ಮ, ಬಾವ-ಬಾಮೈದ ಹೀಗೆ ಸಂಬಂಧಿಕರಾಗಿರಬೇಕು ಎಂಬ ನಿಯಮವಿದೆ. ವೇಷ ಹಾಕಿದವರೇ ದುಡಿ (ಚರ್ಮವಾದ್ಯ) ನುಡಿಸಬೇಕು. ಹಿಂದೆ ನನ್ನ ತಂದೆ ಚೋಮ ಮತ್ತು ದೊಡ್ಡಪ್ಪ ಕುಂಞ ಕಳೆಂಜನ ವೇಷ ಹಾಕುತ್ತಿದ್ದರು. ಆಗ ಪುದುವೆಟ್ಟು ಮಾತ್ರವಲ್ಲ, ಧರ್ಮಸ್ಥಳಕ್ಕೂ ಹೋಗುತ್ತಿದ್ದರು. ತಂದೆಯ ಮರಣಾನಂತರ ಆಚರಣೆ ನಿಂತಿತ್ತು. ಈಗ ನಾನು ಮತ್ತು ದೊಡ್ಡಪ್ಪ ಕುಂಞ ವೇಷ ಹಾಕಿದ್ದೇವೆ. ಮುಂದುವರಿಸಬೇಕು ಎಂದು ಸಮುದಾಯದ ಎಲ್ಲರೂ ಹೇಳುತ್ತಿದ್ದಾರೆ.
- ಶೀನ, ಈ ಬಾರಿ ವೇಷ ಹಾಕಿದವರು
-------------
ಸಂಪ್ರದಾಯ ಮುಂದುವರಿಸುತ್ತೇವೆ:
ನಿಂತು ಹೋಗಿದ್ದ ನಮ್ಮ ಆಟಿಕಳೆಂಜ ಮುಂದುವರಿಸಬೇಕು ಎಂದು ಮಾತನಾಡಿಕೊಂಡಿದ್ದೆವು. ಅದೇ ಹೊತ್ತಿಗೆ ವಿಕಿಮೀಡಿಯನ್ಸ್ ಭೇಟಿ ಮಾಡಿ ಹುರಿದುಂಬಿಸಿದರು. ಯದುಪತಿ ಗೌಡರು ನೇತೃತ್ವ ವಹಿಸಿ ಅತ್ರ ಒದಗಿಸಿದರು. ಅದರಂತೆ ಈ ಬಾರಿ 5 ದಿನ ತಿರುಗಾಟ ನಡೆಸಿ 500ರಷ್ಟು ಮನೆಗಳಿಗೆ ಭೇಟಿ ನೀಡಿದ್ದೇವೆ. ಎಲ್ಲ ಕಡೆ ಪ್ರೋತ್ಸಾಹ ಸಿಕ್ಕಿದ್ದು, ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ. ನಮ್ಮ ಈ ಅಪೂರ್ವ ಪರಂಪರೆಯ ಬಗ್ಗೆ ಹೆಮ್ಮೆ ಇದೆ. ಖಂಡಿತಾ ಇನ್ನು ನಿಲ್ಲಿಸುವುದಿಲ್ಲ. ಯುವಕರಿಗೆ ತರಬೇತಿ ನೀಡಿ ಮುಂದುವರಿಸುತ್ತೇವೆ.
- ನಾರಾಯಣ ಮೇಲಿನಡ್ಕ, ಸಮುದಾಯದ ಪ್ರಮುಖ