ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 2024-25ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡುವ ಜಿಲ್ಲಾ ಪ್ರಶಸ್ತಿಗಳಿಗೆ ಬೆಳಾಲಿನ ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಗೌಡ, ಜಾನಪದ ಕಲಾವಿದ ಉದಯ ಕುಮಾರ್ ಲಾಯಿಲ, ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ, ಬಹುಮುಖ ಪ್ರತಿಭೆ ವಸಂತಿ ಟಿ. ನಿಡ್ಲೆ ಭಾಜನರಾಗಿದ್ದಾರೆ. ಸಂಘಸಂಸ್ಥೆಗಳ ವಿಭಾಗದಲ್ಲಿ ಬೆಳ್ತಂಗಡಿಯ ದಯಾ ವಿಶೇಷ ಶಾಲೆ ಮತ್ತು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಮಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನ.1ರಂದು ಮಂಗಳೂರಿನ ನೆಹರು ಮೈದಾನದಲ್ಲಿ ದ.ಕ. ಜಿಲ್ಲಾಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ 60 ಸಾಧಕರು ಹಾಗೂ 22 ಸಂಘಸಂಸ್ಥೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮನೋಜ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದ ಬೆಳಾಲು ಲಕ್ಷ್ಮಣ ಗೌಡ: ಬೆಳಾಲು ಗ್ರಾಮದ ಪುಳಿತ್ತಡಿ ನಿವಾಸಿ ಲಕ್ಷ್ಮಣ ಗೌಡ ಹಿರಿಯ ಯಕ್ಷಗಾನ ಕಲಾವಿದ. 1974ರಲ್ಲಿ ಶ್ರೀ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಯಕ್ಷರಂಗದ ಗುರುದ್ರೋಣ ಪಡ್ರೆ ಚಂದು ಅವರಲ್ಲಿ ನಾಟ್ಯಾಭ್ಯಾಸ ಮಾಡಿ ಯಕ್ಷಗಾನ ಲೋಕಕ್ಕೆ ಪಾದಾರ್ಪಣೆ. ಪುಂಡು ವೇಷ ಮತ್ತು ಸ್ತ್ರೀ ವೇಷ, ರಾಜ, ನಾಟಕೀಯ ವೇಷಗಳನ್ನು ಮಾಡಿ ಕೀರ್ತಿ ಪಡೆದವರು. ಕಟೀಲು ಮೇಳದಲ್ಲಿ ಬಾಲಕಲಾವಿದರಾಗಿ ಸೇರ್ಪಡೆಯಾಗಿ ಹಂತಹಂತವಾಗಿ ಸ್ತ್ರೀ ವೇಷಧಾರಿಯಾಗಿ ಪದೋನ್ನತಿ ಪಡೆದು, ದೇವಿ, ವಿಷ್ಣು, ಚಂಡ, ಬಬ್ರುವಾಹನ, ಪ್ರಮೀಳೆ, ಶಶಿಪ್ರಭೆ, ಚಂದ್ರಮತಿ, ದಮಯಂತಿ, ದ್ರೌಪದಿ ಇತ್ಯಾದಿ ಪಾತ್ರಗಳಲ್ಲಿ ಜನಮನ್ನಣೆ ಪಡೆದಿದ್ದು, ನಂತರ ಪುತ್ತೂರು ಮೇಳದಲ್ಲಿ ಏಳು, ಸುಂಕದಕಟ್ಟೆ ಮೇಳದಲ್ಲಿ ಎಂಟು, ಕದ್ರಿ ಮೇಳದಲ್ಲಿ ಎರಡು, ಕುಂಟಾರು ಮೇಳದಲ್ಲಿ ಎರಡು, ಎಡನೀರು ಮೇಳದಲ್ಲಿ ನಾಲ್ಕು ಹಾಗೂ ಧರ್ಮಸ್ಥಳ ಮೇಳದಲ್ಲಿ 13 ವರ್ಷಗಳ ಕಾಲ ಯಕ್ಷಕಲಾ ಮಾತೆಯ ಸೇವೆಗೈದಿದ್ದಾರೆ. ಧರ್ಮಸ್ಥಳ ಮೇಳದಲ್ಲಿರುವಾಗಲೇ ಶ್ರೀ ಕ್ಷೇತ್ರದ ಲಲಿತಕಲಾ ಕೇಂದ್ರದಲ್ಲಿ ಯಕ್ಷಗಾನ ಗುರುಗಳಾಗಿ ಕರ್ತವ್ಯ. ಹಲವು ಶಾಲೆಗಳಲ್ಲಿ ನಾಟ್ಯ, ಅಭಿನಯ, ಅರ್ಥಗಾರಿಕೆ ತರಬೇತಿ ನೀಡಿದ್ದು, ಪ್ರಸಂಗಗಳ ಪ್ರದರ್ಶನ ಕೂಡ ಮಾಡಿಸಿದ್ದಾರೆ. ಪ್ರಸ್ತುತ ನಿವೃತ್ತರಾಗಿದ್ದು, ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಆರು ಶಾಲೆಗಳಲ್ಲಿ ಯಕ್ಷಗಾನ ನಾಟ್ಯ ತರಬೇತಿ ನೀಡುತ್ತಿದ್ದಾರೆ. ಕಲಾವಿದ ಉದಯ ಕುಮಾರ್ ಲಾಯಿಲ: ಸುಗಮ ಸಂಗೀತ, ಜಾನಪದ ಹಾಡುಗಳು, ಜಾನಪದ ನೃತ್ಯ, ಕಾವ್ಯ-ಗಾನ-ಕುಂಜ, ತುಳುನಾಡ ವೈಭವ, ವಿವಿಧ ಜನಜಾಗೃತಿ ಪ್ರಹಸನಗಳು, ಬೀದಿ ನಾಟಕಗಳು, ಜಾನಪದ ಕಮ್ಮಟಗಳು, ಮಕ್ಕಳ ಬೇಸಿಗೆ ಶಿಬಿರ ಹೀಗೆ ಹತ್ತಾರು ಕಲಾಪ್ರಕಾರಗಳ ಪ್ರದರ್ಶನ ಕಲಾವಿದ, ನಿರ್ದೇಶಕ ಉದಯ ಕುಮಾರ್ ಲಾಯಿಲ. ಇವರ ನಿರ್ದೇಶನದ ತುಳುನಾಡ ಐಸಿರಿ ಎಂಬ ವೈವಿಧ್ಯಮಯ ಕಾರ್ಯಕ್ರಮ 100ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮಂಗಳೂರು ಆಕಾಶವಾಣಿ, ಚಂದನ ದೂರದರ್ಶನ ಕಲಾವಿದರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪದ ಕಲಾವಿದರಾಗಿ, ಕಲಾ ಸಂಪನ್ಮೂಲ ವ್ಯಕ್ತಿಯಾಗಿ, ರಾಜ್ಯಮಟ್ಟದ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ದ.ಕ. ಜಿಲ್ಲಾ ಜಾನಪದ ಪರಿಷತ್‌ನ ಸಂಘಟನಾ ಕಾರ್ಯದರ್ಶಿಯಾಗಿದ್ದು, ಬೆಳ್ತಂಗಡಿಯ ಕಲಾಗುಡಿ ಸಂಗೀತ ಮತ್ತು ನೃತ್ಯ ಕಲಾವೇದಿಕೆಯ ಕಲಾ ನಿರ್ದೇಶಕರಾಗಿದ್ದಾರೆ. ಶಿಸ್ತು, ಪ್ರಾಮಾಣಿಕ ಸೇವಕ ಜಯಾನಂದ: ಗೃಹರಕ್ಷಕ ದಳ ಬೆಳ್ತಂಗಡಿಯ ಘಟಕಾಧಿಕಾರಿ ಜಯಾನಂದ ದಕ್ಷ ಸೇವೆಯಿಂದಲೇ ಹೆಸರಾಗಿದ್ದಾರೆ. ಜಿಲ್ಲೆ ಮಾತ್ರವಲ್ಲ, ಹೊರ ಜಿಲ್ಲೆ, ಹೊರ ರಾಜ್ಯಗಳಿಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದವರು. ಹಬ್ಬಗಳು, ತುರ್ತು ಸಂದರ್ಭಗಳಲ್ಲಿ ಕರ್ತವ್ಯ, ತಾಲೂಕಿಗೆ ಗಣ್ಯರು ಆಗಮಿಸುವಾಗ ಬಂದೋಬಸ್ತ್, ಚಾರ್ಮಾಡಿ ಸಹಿತ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ, ನೆರವು, ಕೊರೊನಾ ಅವಧಿಯಲ್ಲಿ ಕೋವಿಡ್ ವಾರಿಯರ್ ಆಗಿ ಸೇವೆ, ಗೃಹ ರಕ್ಷಕ ಸಿಬ್ಬಂದಿ ನಿಯೋಜನೆ, ಸ್ವಚ್ಛತಾ ಕಾರ್ಯಕ್ರಮಗಳು, ಶ್ರಮದಾನ, ಪರಿಸರ ಸಂರಕ್ಷಣೆ, ವನಮಹೋತ್ಸವ ಮೂಲಕ ಗಿಡ ನೆಡುವ ಕಾರ್ಯಕ್ರಮ ಹೀಗೆ ಹಲವು ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಯುವ ಸಾಧಕಿ ವಸಂತಿ ಟಿ. ನಿಡ್ಲೆ: ನಿಡ್ಲೆ ಗ್ರಾಮದ ಕೈರೋಳಿ ದಿ.ಮುದರ - ದಿ.ಕಾಳಿಯಮ್ಮ ಎಂ. ದಂಪತಿ ಪುತ್ರಿ ವಸಂತಿ ಟಿ. ನಿಡ್ಲೆ ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆ. ಯಕ್ಷಗಾನ, ತಾಳಮದ್ದಲೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, 8 ರಾಜ್ಯ ಪ್ರಶಸ್ತಿ, 1 ತಾಲೂಕು ಮಟ್ಟದ ಯುವಸಾಧಕಿ ಪ್ರಶಸ್ತಿ, 1 ರಾಷ್ಟ್ರ ಪ್ರಶಸ್ತಿ ಪಡೆದ ಬಹುಮುಖ ಪ್ರತಿಭೆ. ಸೇವೆ ಸಲ್ಲಿಸುತ್ತಿದ್ದ ಕೆಮ್ಮಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಗದ್ದೆ ಕೃಷಿ, ಶಾಲಾ ಜಮೀನಿನಲ್ಲಿ ದಾನಿಗಳ ಸಹಾಯದಿಂದ ಅಡಿಕೆ ಕೃಷಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಇವರ ಪ್ರಮುಖ ಸಾಧನೆಗಳು. ಸಾಹಿತ್ಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು, ಹಲವು ನಿಯತಕಾಲಿಕೆಗಳಲ್ಲಿ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಇವರ ಕವನ 33 ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ಕವನ ಸಂಕಲಗಳಲ್ಲಿ ಮುದ್ರಣಗೊಂಡಿದೆ. ಯೋಗೀಶ್ ಶರ್ಮ ಅವರಲ್ಲಿ ಯಕ್ಷಗಾನ, ವಿಜಯಲಕ್ಷ್ಮೀ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದು, ಮೋಹನ ಬೈಪಾಡಿತ್ತಾಯರಲ್ಲಿ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಬರೆಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ನಿಸ್ವಾರ್ಥ ಸೇವೆಯ ದಯಾ ವಿಶೇಷ ಶಾಲೆ: ಬೆಳ್ತಂಗಡಿಯ ಲಾಯಿಲದಲ್ಲಿರುವ ದಯಾ ವಿಶೇಷ ಶಾಲೆಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಜಿಲ್ಲಾ ಪ್ರಶಸ್ತಿ ನೀಡಲಾಗಿದ್ದು, ಶಾಲೆಯ ಸಂಚಾಲಕ ವಂ.ಫಾ.ವಿನೋದ್ ಮಸ್ಕರೇನಸ್ ಪ್ರಶಸ್ತಿ ಸ್ವೀಕರಿಸಿದರು. ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳಿದ್ದು, ವಾಕ್ ಮತ್ತು ಶ್ರವಣ ಚಿಕಿತ್ಸೆ, ಭೌತ ಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆ, ನೈರ್ಮಲ್ಯ ತರಬೇತಿ, ಕೌಶಲ್ಯ ತರಬೇತಿ ಮತ್ತು ಪೌಷ್ಟಿಕ ಆಹಾರವನ್ನು ಪ್ರತಿನಿತ್ಯವೂ ಆಡಳಿತ ಮಂಡಳಿಯು ಉಚಿತವಾಗಿ ಒದಗಿಸುತ್ತಿದೆ. ಈ ವಿಶೇಷ ಚೇತನರು ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣುತ್ತಿದ್ದು, ವಿವಿಧ ದಾನಿಗಳು ಸಹಾಯಹಸ್ತ ನೀಡುತ್ತಿದ್ದಾರೆ ಎಂದು ಸಹ ನಿರ್ದೇಶಕ ವಂ.ಫಾ.ರೋಹನ್ ಲೋಬೊ ತಿಳಿಸಿದ್ದಾರೆ. ಮಾದರಿಯಾದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ: ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯು 45 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಸಮಾಜಮುಖಿ ಸಂಸ್ಥೆ. ಸಮಾಜದಲ್ಲಿ ತೀರಾ ಹಿಂದುಳಿದಿರುವ ಬಡ ಕುಟುಂಬಗಳಿಗೆ ಆರ್ಥಿಕ ನೆರವು, ಗ್ರಾಮಗ್ರಾಮಗಳಲ್ಲಿ ಸಾಮಾಜಿಕ ಕಾರ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ವೃತ್ತಿ ಮಾರ್ಗದರ್ಶನ ಶಿಬಿರ, ಆಶಕ್ತರಿಗೆ ಆರೋಗ್ಯ ನೆರವು, ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ, ಯೋಗ ಶಿಬಿರ, ಗುರು ಜಯಂತಿ, ಶಾರದೋತ್ಸವ, ಬೊಳ್ಳಜ್ಜ ದೈವದ ಅಗೇಲು ಸೇವೆ, ಭರತನಾಟ್ಯ, ಕುಣಿತ ಭಜನೆ, ಶಾಸ್ತ್ರೀಯ ಸಂಗೀತ, ಧರ್ಮ ಶಿಕ್ಷಣ, ಕ್ರೀಡಾಕೂಟ, ದೀಪಾವಳಿ, ಗುರು ಪೂಜೆ, ದತ್ತಿನಿಧಿಯಿಂದ ಪುಸ್ತಕ ವಿತರಣೆ, ಸತ್ಯನಾರಾಯಣ ಪೂಜೆ, ಸರ್ವೇಶ್ವರಿ ದೇವಿಯ ಪೂಜೆ, ಭಜನೆ, ವ್ಯಕ್ತಿತ್ವ ವಿಕಸನ ಶಿಬಿರ, ಆಟಿಕೂಟ, ಸಾಧಕರಿಗೆ ಸನ್ಮಾನ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುಪೂಜೆ ಹೀಗೆ ನೂರಾರು ಕಾರ್ಯಕ್ರಮಗಳನ್ನು ಸಂಘ ನಡೆಸುತ್ತಿದೆ. ಕಳೆದೆರಡು ವರ್ಷದಿಂದ ಸಂಘದ ಆಶ್ರಯದಲ್ಲಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಮುಂದಾಳತ್ವದಲ್ಲಿ ಸಾರ್ವಜನಿಕ ಶಾರದೋತ್ಸವ ಆಚರಿಸಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಡಿಮೆ ಬಾಡಿಗೆಯಲ್ಲಿ ಸಭೆ, ಸಮಾರಂಭಗಳಿಗೆ ನೀಡಲಾಗುತ್ತಿದೆ. ಭವನದಲ್ಲಿ ಶ್ರೀ ಕಲಾ ಸರಸ್ವತಿ ಭರತನಾಟ್ಯ ಮತ್ತು ಸಂಗೀತ ತರಬೇತಿ ತರಗತಿಗಳು ನಡೆಯುತ್ತಿವೆ. ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ತರಬೇತಿಯೂ ಭವನದಲ್ಲಿ ನಡೆಯುತ್ತಿದ್ದು, ಇದು ಜಿಲ್ಲೆಯ ಪ್ರಸಿದ್ಧ ತಂಡಗಳಲ್ಲಿ ಒಂದಾಗಿದೆ. ಸಂತೋಷ್ ಕೋಟ್ಯಾನ್ ಪ್ರಶಸ್ತಿ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ದಿನೇಶ್ ಅಂತರ, ಕಾರ್ಯದರ್ಶಿ ಜಗದೀಶ್ ಬಳ್ಳಿದಡ್ಡ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್ ಸಾಲಿಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ಹಾಗೂ ಪುರಸಭೆ ಸದಸ್ಯ ಜಯ ಪೂಜಾರಿ ದರ್ಖಾಸು, ನಿರ್ದೇಶಕರಾದ ಯತೀಶ್ ವೈ.ಎಲ್, ದಿನೇಶ್ ನಿಟ್ಟಡ್ಕ, ರಂಜಿತ್ ಮಜಲಡ್ಡ, ಸದಸ್ಯರಾದ ಚಂದ್ರಹಾಸ ಬಳಂಜ, ರೂಪನಾಥ ವೈ. ಬಳಂಜ, ಶಿವಧ್ಯಾನ್ ಉಪಸ್ಥಿತರಿದ್ದರು. (((ಬಾಕ್ಸ್))) ಬಿ.ಸೀತಾರಾಮ ತೋಳ್ಪಡಿತ್ತಾಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ, ಚೆಂಡೆ-ಮದ್ದಳೆವಾದನ ಕಲಾವಿದರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖ ಸಾಧನೆ ಮಾಡಿರುವ ಬಿ.ಸೀತಾರಾಮ ತೋಳ್ಪಡಿತ್ತಾಯರಿಗೆ ನ.1ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಶಿವರಾಜ್ ಎಸ್. ತಂಗಡಗಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಉಪಸ್ಥಿತರಿದ್ದರು. ----------------- ಡಾ.ಯು.ಪಿ.ಶಿವಾನಂದರಿಗೆ ಪುತ್ತೂರು ತಾಲೂಕು ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಸಂದರ್ಭ ಪುತ್ತೂರು ತಾಲೂಕು ಆಡಳಿತ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದು, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ---------- ಪ್ರೊ.ವಿ.ಬಿ. ಅರ್ತಿಕಜೆಯವರಿಗೆ ದ.ಕ. ಜಿಲ್ಲಾ ಪ್ರಶಸ್ತಿ ಪ್ರದಾನ ಸುದ್ದಿ ಬಿಡುಗಡೆಯ ಅಂಕಣಕಾರ, ಹಿರಿಯ ಸಾಹಿತಿ ಹಾಗೂ ವಿದ್ವಾಂಸರಾಗಿರುವ ಪುತ್ತೂರಿನ ಪ್ರೊ.ವಿ.ಬಿ. ಅರ್ತಿಕಜೆಯವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ವಿಕಟಾನಂದ, ಅರ್ತಿಕಜೆ, ವಿ.ಬಿ. ಮತ್ತಿತರ ಹೆಸರುಗಳಲ್ಲಿ ಸುದ್ದಿ ಬಿಡುಗಡೆಯಲ್ಲಿ ಅಂಕಣಗಳನ್ನು ಬರೆಯುತ್ತಿರುವ ಅವರು, ಇತಿಹಾಸ ಪ್ರಾಧ್ಯಾಪಕರಾಗಿದ್ದವರು. ಪತ್ರಿಕೋದ್ಯಮ, ಸಾಹಿತ್ಯ ಪತ್ರಿಕೆಗಳಿಗೆ ವರದಿಗಾರರಾಗಿದ್ದ ಅವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. --------------------- ಎಕ್ಸಲೆಂಟ್‌ನ ರಶ್ಮಿತಾ ಜೈನ್‌ರಿಗೆ ಜಿಲ್ಲಾ ಪ್ರಶಸ್ತಿ: ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್‌ರಿಗೆ ರಾಜ್ಯೋತ್ಸವ ಸಂದರ್ಭದಲ್ಲಿ ದ.ಕ. ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶಿಕ್ಷಣ ಕ್ಷೇತ್ರ, ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ರಶ್ಮಿತಾ ಜೈನ್ ಪತಿ ಯುವರಾಜ್ ಜೈನ್ ಜತೆಗೂಡಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿದ್ದು, ಸಂಸ್ಥೆಯಲ್ಲಿ ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗೆ 3000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.