Site icon Suddi Belthangady

ಕಾಶಿಪಟ್ಣ: ದಾರುನ್ನೂರು ವಿದ್ಯಾ ಸಂಸ್ಥೆಯ ದಶಮಾನೋತ್ಸವ- 17 ಮಂದಿ ಯುವ ವಿದ್ವಾಂಸರಿಗೆ “ದಾರಾನಿ” ಧಾರ್ಮಿಕ ಪದವಿ ಪ್ರದಾನ

ಬೆಳ್ತಂಗಡಿ: ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೊಳಪಟ್ಟ ಕಾಶಿಪಟ್ಣ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳನ್ನು ಸಮನ್ವಯವಾಗಿ ನೀಡುತ್ತಿರುವ ಕರ್ನಾಟಕದ ಹೆಮ್ಮೆಯ ಸಂಸ್ಥೆ ಶಹೀದ್ ಸಿ.ಎಂ ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ದಶಮಾನೋತ್ಸವ ಸಂಭ್ರಮ, 17 ಮಂದಿಗೆ “ದಾರಾನಿ” ಧಾರ್ಮಿಕ ಪದವಿ ಪ್ರದಾನ ಸಮಾರಂಭ ನ.1 ರಿಂದ 3ರವರೆಗೆ ಅದ್ದೂರಿಯಾಗಿ ಸಂಪನ್ನಗೊಂಡಿತು.

ಹತ್ತು ವರ್ಷಗಳ ಕಾಲ ದಾರುನ್ನೂರ್ ಸಂಸ್ಥೆಯಲ್ಲಿ ಸಮನ್ವಯ ವಿದ್ಯಾಭ್ಯಾಸವನ್ನು ಪೂರೈಸಿ, ದೀನೀ ಸೇವೆಗೆ ಸಮರ್ಪಣೆಗೊಂಡು ನವ ಬಿರುದುದಾರರಾಗಿ ಹೊರಟಿರುವ ಒಟ್ಟು 17 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಸಾರಥಿ ದ.ಕ ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಪದವಿ ಪ್ರದಾನ‌‌ ನೆರವೇರಿಸಿದರು.

ದಶಮಾನೋತ್ಸವದ ಅಂಗವಾಗಿ ನ.1ರಂದು ಮಧ್ಯಾಹ್ನ ತೋಡಾರು ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಂಸ್ಥೆಯ ಕ್ಯಾಂಪಸ್ ವರೆಗೆ ವಾಹನ ಜಾಥಾ ನಡೆದು, ಸಂಸ್ಥೆಯ ಆವರಣದಲ್ಲಿ ದ್ವಜಾರೋಹಣ, ಮಗ್ರಿಬ್ ನಮಾಝಿನ ಬಳಿಕ ಅಂತರಾಷ್ಟ್ರೀಯ ವಾಗ್ಮಿ ಅಲ್ ಹಾಫಿಕ್ ಅಹ್ಮದ್ ಕಬೀರ್ ಬಾಖವಿ ಕೇರಳ ಇವರಿಂದ ಮುಖ್ಯ ಪ್ರಭಾಷಣ ನಡೆಯಿತು.

ದಶಮಾನೋತ್ಸವ ಪ್ರಯುಕ್ತ ದಾರುನ್ನೂರು ಕ್ಯಾಂಪಸ್ ನಲ್ಲಿ ಮೂರು ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಗಣಿತ, ಪಾರಂಪರಿಕ ವಸ್ತುಗಳು, ವಿಸ್ಮಯ ಲೋಕ, ಮೆಂಟಲಿಸಂ, ಎ.ಐ ಮತ್ತು ಇತರ ವಿಶೇಷ ಆಕರ್ಷಣೆಗಳ “ದಾರುನ್ನೂರು ಎಕ್ಸ್ಪೋ -2024” ಮೊದಲಾದ ಕಾರ್ಯಕ್ರಮಗಳು ಬಹುಜನರ ಮನಸೂರೆಗೊಂಡಿತು.

ನ.2ರಂದು ಶಹೀದ್ ಸಿ.ಎಂ ಉಸ್ತಾದ್ ಕಾನ್ಸರೆನ್ಸ್ ನಲ್ಲಿ ಸಿ.ಎಂ ಉಸ್ತಾದ್ ಜೀವನ ಚರಿತ್ರೆಯ ಬಗ್ಗೆ ವಿವಿಧ ಸೆಮಿನಾರ್ ಗಳು ನಡೆದವು. ಸಂಜೆ ಮಲಪ್ಪುರಂ ಚೆಮ್ಮಾಡ್ ದಾರುಲ್ ಹುದಾ ಯುನಿವರ್ಸಿಟಿಯ ವೈಸ್ ಚಾನ್ಸ್‌ಲರ್ ಬಹಾವುದ್ದೀನ್ ನೂತನ ಗ್ರಂಥಾಲಯ ಉದ್ಘಾಟಿಸಿದರು. ಮಗ್ರಿಬ್ ನಮಾಝಿನ ಬಳಿಕ ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಕೇರಳ ಇವರು ಮುಖ್ಯ ಪ್ರಭಾಷಣ ನಡೆಸಿಕೊಟ್ಟರು. ವಲಿಯುಲ್ಲಾಹಿ ಫೈಝಿ ವಾಯಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಿತು.

ನ.3 ರಂದು “ಮಹಲ್ಲ್ ಅಭಿವೃದ್ಧಿ ಮತ್ತು ನಾಯಕತ್ವದ” ವಿಷಯದ ಕುರಿತಂತೆ ಮಹಲ್ಲ್ ಸಾರಥಿ ಸಂಗಮ ನಡೆಯಿತು. ಆ ದಿನ ಅಂತರಾಷ್ಟ್ರೀಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕೇರಳ ಇವರಿಂದ ಮುಖ್ಯ ಪ್ರಭಾಷಣ ನಡೆಯಿತು. ಸಯ್ಯಿದ್ ಕಾಜೂರು ತಂಙಳ್ ಸೇರಿದಂತೆ ಸಮಸ್ಥದ ಹಲವಾರು ಪಂಡಿತ ಶಿರೋಮಣಿಗಳು, ಜಿಲ್ಲೆಯ ಹಲವಾರು ಉಮರಾ ನಾಯಕರುಗಳು, ದಾರುನ್ನೂರು ಕಾಶಿಪಟ್ಣ ಸಮಿತಿ ಹಾಗೂ ದಶಮಾನೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ಅಮೀನ್ ಹುದವಿ ಸ್ವಾಗತಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೆ ಸಾವಿರಾರು ದೀನೀ ಪ್ರೇಮಿಗಳು ಸಾಕ್ಷಿಯಾದರು.

Exit mobile version