ಬೆಳ್ತಂಗಡಿ: ದಾರುನ್ನೂರು ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ದಶಮಾನೋತ್ಸವ ಪ್ರಯುಕ್ತ ಬ್ಯಾರಿ ಸಾಂಸ್ಕೃತಿಕ ಸಮ್ಮಿಲನವು ನ.2ರಂದು ನಡೆಯಿತು.
ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್. ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಸಮನ್ವಯ ಶಿಕ್ಷಣ ಸಂಸ್ಥೆಯೊಂದು ತನ್ನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬ್ಯಾರಿ ಸಾಂಸ್ಕೃತಿಕ ಸಮ್ಮಿಲನಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಇದು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹೇಳಿದರು. ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆ ಗೈದರು. ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಯು.ಹೆಚ್ ಖಾಲಿದ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು. ಎಸ್ ಕೆ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಎಂ.ಎ. ಮುಹಮ್ಮದ್ ಕುಂಞಿ ಮಾಸ್ಟರ್ ಮತ್ತು ಪತ್ರಕರ್ತ ಹಂಝ ಮಲಾರ್ ಉಪನ್ಯಾಸ ನೀಡಿದರು.
ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ತಪಸ್ವಿ ಹರೇಕಳ ಹಾಜಬ್ಬ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೊಯ್ಯೂರು, ಮಾಸ್ಟರ್ ಶೆಫ್ ಇಂಡಿಯಾ ವಿಜೇತ ಮುಹಮ್ಮದ್ ಆಶಿಕ್, ಬ್ಯಾರಿ ಅಕಾಡಮಿಯ ಗೌರವ ಪ್ರಶಸ್ತಿ ಪುರಸ್ಕೃತ ಎಂ.ಜಿ. ಶಾಹುಲ್ ಹಮೀದ್ ಗುರುಪುರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಬಿ.ಎಂ.ಶರೀಫ್ ವೈಟ್ ಸ್ಟೋನ್ ಮತ್ತಿತರರು ಉಪಸ್ಥಿತರಿದ್ದರು. ದಾರುನ್ನೂರು ಎಜುಕೇಶನ್ ಸೆಂಟರ್ ಉಪಾಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ ಹಾಜಿ ಸ್ವಾಗತಿಸಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಸಲಹೆಗಾರ ಡಾ.ಸಿದ್ದೀಕ್ ಅಡ್ಡೂರು ದಿಕ್ಸೂಚಿ ಭಾಷಣಗೈದರು. ವಿದ್ಯಾರ್ಥಿಗಳಾದ ಸ್ವಾದಿಕ್ ಪೆರಾಲ್ದರಕಟ್ಟೆ ಕಿರಾಅತ್ ಪಠಿಸಿದರು. ತನೀಫ್ ಅಣಜೂರು ವಂದಿಸಿದರು.