Site icon Suddi Belthangady

ಕೊಕ್ಕಡ: ಆತ್ಮಹತ್ಯೆಗೆ ಯತ್ನಿಸಿದ್ದ ಬಿಎಸ್ಸಿ ವಿದ್ಯಾರ್ಥಿನಿ ಸಾವು

ಕೊಕ್ಕಡ: ಎಂಟು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನ.5ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪೌಲೋ ಡಿಸೋಜ – ಗ್ರೇಸಿ ಡಿಸೋಜ ದಂಪತಿ ಪುತ್ರಿ ಪ್ರಿಯಾಂಕಾ ಡಿ’ಸೋಜ(19) ಮೃತಪಟ್ಟವಳು. ಈಕೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ಮೃತಪಟ್ಟ ಹಿನ್ನೆಲೆಯಲ್ಲಿ ನ.5ರಂದು ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಪ್ರಿಯಾಂಕಾ, ಕೆಲದಿನ ಸಂಬಂಧಿಕರ ಮನೆಯಲ್ಲಿದ್ದು, ನಂತರ ಕೊಕ್ಕಡಕ್ಕೆ ವಾಪಸ್ ಬಸ್ಸಿನಲ್ಲಿ ಬಂದಿದ್ದಳು. ಮದುವೆಯಾಗಬೇಕಿದ್ದ ಯುವಕನಿಗೆ ಕರೆ ಮಾಡಿ, ಮುದ್ದಿಗೆ ಎಂಬಲ್ಲಿಗೆ ತೆರಳಿ ಇಲಿಪಾಷಾಣ ಸೇವಿಸಿ ಹೊಳೆಗೆ ಬಿದ್ದಿದ್ದಳು. ಆಕೆಯ ಕರೆಯಂತೆ ಸ್ಥಳಕ್ಕೆ ತೆರಳಿದ್ದ ಯುವಕ, ಅಸ್ವಸ್ಥಳಾಗಿ ಬಿದ್ದಿದ್ದ ಯುವತಿಯನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ, ಪುತ್ತೂರು, ಕೊನೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಅಪಪ್ರಚಾರ ಕಾರಣ: ಯುವತಿಯ ಬಗ್ಗೆ ಕೆಲದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಇದರಿಂದ ಯುವತಿ ನೊಂದಿದ್ದಳು ಎಂಬ ಮಾಹಿತಿ ಇದೆ. ಈ ಕುರಿತು ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version