Site icon Suddi Belthangady

ಪುದುವೆಟ್ಟು: ಕಸ್ತೂರಿ ರಂಗನ್ ವರದಿ ವಿರುದ್ಧ ಪುದುವೆಟ್ಟಿನಲ್ಲಿ ಪ್ರತಿಭಟನೆ- ಯೋಜನೆಯನ್ನು ಕೈಬಿಡಲು ಕಿಶೋರ್ ಶಿರಾಡಿ ಆಗ್ರಹ

ಪುದುವೆಟ್ಟು: ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪುದುವೆಟ್ಟು ಗ್ರಾಮದಲ್ಲಿ ನ.5ರಂದು ಪ್ರತಿಭಟನೆ ನಡೆಯಿತು.

ಬೊಳ್ಮನಾರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಿಂದ ಪುದುವೆಟ್ಟು ಗ್ರಾಮ ಪಂಚಾಯತ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ಗ್ರಾಮಸ್ಥರು, ಪಂಚಾಯತ್ ವಠಾರದಲ್ಲಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ಜನವಿರೋಧಿಯಾಗಿದ್ದು, ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಈ ಭಾಗದ ಜನರ ನೆಮ್ಮದಿಯ ಬದುಕಿಗಾಗಿ ಪಶ್ಚಿಮಘಟ್ಟದ ಜಂಟಿ ಸರ್ವೇ ನಡೆಸಿ, ಗಡಿಗುರುತು ಮಾಡಬೇಕು ಎಂದು ಆಗ್ರಹಿಸಿದರು. ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ದಾಮೋದರ ಗೌಡ ಮುಜಾರ್ದಡ್ಡ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕುಮಾರಿ, ಉಪಾಧ್ಯಕ್ಷ ಪೂರ್ಣಾಕ್ಷ, ಮಾಜಿ ಅಧ್ಯಕ್ಷರಾದ ಯಶವಂತ ಗೌಡ, ಗಫೂರ್ ಸಾಹೇಬ್, ಪ್ರಮುಖರಾದ ಚಿತ್ತರಂಜನ್ ಜೈನ್, ರೋಯಿ ಜೋಸೆಫ್, ಭಾಸ್ಕರ ಅಡ್ಯ, ನಿತ್ಯಾನಂದ ಗೌಡ, ಸೋಯಿ ಮತ್ತಿತರರು ಭಾಗವಹಿಸಿದ್ದರು.

Exit mobile version