Site icon Suddi Belthangady

ಬೆಳ್ತಂಗಡಿ: ಧರ್ಮಸ್ಥಳ-ಮಂಗಳೂರು ಬಸ್ಸಿನ ಕೊರತೆ- ನಿತ್ಯ ಪ್ರಯಾಣಿಕರು, ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ

ಬೆಳ್ತಂಗಡಿ: ಮಂಗಳೂರಿನಿಂದ ಧರ್ಮಸ್ಥಳ ಮಾರ್ಗವಾಗಿ ಸರಕಾರಿ ಬಸ್ಸಿನ ತೀರಾ ಕೊರತೆ ಇರೂದರಿಂದ ಸದ್ರಿ‌ಮಾರ್ಗದ ನಿತ್ಯ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ‌ ಎಂಬಂತಾಗಿದೆ.
ಬಸ್ಸುಗಳ ಕೊರತೆಯ ಕಾರಣದಿಂದಾಗಿ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕಕ್ಕಿಂಜೆ, ಚಾರ್ಮಾಡಿ ಹಾಗೂ ನೆರಿಯ ಪ್ರದೇಶದ ಸಾರ್ವಜನಿಕರು ದಿನನಿತ್ಯ ಇನ್ನಿಲ್ಲದಂತೆ ಪಾಡು ಪಡಬೇಕಾಗಿದೆ.

ಸಂಜೆ ಹೊತ್ತಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮೇತ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಇರುವ ಬೆರಳೆಣಿಕೆಯ ಬಸ್ಸಿನಲ್ಲಂತೂ ಕುಳಿತುಕೊಳ್ಳುವುದು ಬಿಡಿ, ಮೇಲೆ ಹತ್ತಿ ನಿಲ್ಲಲೂ ಸ್ಥಳವಿಲ್ಲದ ಸ್ಥಿತಿ ಇದೆ. ಸಂಜೆ 4 ಗಂಟೆಯಿಂದ 6, 6:30, 7 ಗಂಟೆಯ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಹಿಳೆ ಪುರುಷರೆಂಬ ಭೇದವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್ಸಿನಲ್ಲಿ‌‌ ಜಾಗ ಇಲ್ಲದೆ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗದೆ ಅಲ್ಲೇ ಬಿಟ್ಟು ಬರುತ್ತಿದ್ದಾರೆ. ಈಗ ಸಂಜೆ ಐದುಮುಕ್ಕಾಲು, 6 ಗಂಟೆಯ ಸಮಯಕ್ಕೆ ಕತ್ತಲು ಕೂಡ ಆಗುತ್ತಿರುವುದರಿಂದ ಬಸ್ಸಿನಿಂದಿಳಿದು ಮಹಿಳೆಯರು ಮಕ್ಕಳು ಮನೆ ಸೇರುವಾಗ ರಾತ್ರಿಯೇ ಆಗುತ್ತಿದೆ. ಇನ್ನು ಕೆಲವೆಡೆ ಹದಿಹರೆಯದ ಹೆಣ್ಣು ಮಕ್ಕಳು, ಮಹಿಳೆಯರು ಗುಡ್ಡಗಾಡು ಪ್ರದೇಶದವರಾದರೆ ಅವರ ಸಮಸ್ಯೆ ಕೇಳುವುದೇ ಬೇಡ ಅಂತಹಾ ಸ್ಥಿತಿ ಇದೆ.
ಇನ್ನೊಂದೆಡೆ ಬಂದ ಬಸ್ಸಿಗೆ ಕಷ್ಟಪಟ್ಟು ಹತ್ತಿಕೊಂಡರೂ ದಾರಿಯುದ್ದಕ್ಕೂ ಮುಕ್ಕಾಲು ಭಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮಂಗಳೂರುನಿಂದ ಉಜಿರೆ ತಲುಪಲು ಬಸ್ಸುಗಳಿಗೆ 3 ರಿಂದ 3:30 ಗಂಟೆ ಸಮಯ ತಾಗುತ್ತಿದೆ. ಈ ವೇಳೆ ವಯೋ ವೃದ್ಧರು, ಅಬಲೆಯರು ನಿಲ್ಲಲೂ ಆಗದ, ಕೂರಲೂ ಆಗದೆ ಹಿಂಸೆ ಅನುಭವಿಸುತ್ತಿದ್ದಾರೆ. ಮಹಿಳೆಯರೇ ಬಸ್ಸಿನ ಬಾಗಿಲಿನಲ್ಲಿ ನೇತಾಡುವ ದುಸ್ಥಿತಿ ಎದುರಾಗಿದೆ. ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ. ಕೆಲವು ವರ್ಷಗಳಿಂದ ದಿನ ನಿತ್ಯದ ಪ್ರಯಾಣಿಕರು ಈ ಸಮಸ್ಯೆ ಎದುರಿಸಿಕೊಂಡು ಬರುತ್ತಿದ್ದಾರೆ.

ಈ ಬಗ್ಗೆ ಸರಕಾರ, ಶಾಸಕರು ಅಥವಾ ಸಾರಿಗೆ ಇಲಾಖೆ ಗಮನಹರಿಸಿ ತುರ್ತು ಸಭೆ ನಡೆಸಿ ಈ ಬಗ್ಗೆ ಸರಿಯಾದ ಪರ್ಯಾಯ ಕ್ರಮ ಕೈಗೊಳ್ಳದೆ ಇದ್ದರೆ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಎದುರಿಸಬೇಕಾದೀತು ಎಂಬ ಎಚ್ಚರಿಕೆ ಕೇಳಿಬಂದಿದೆ.

Exit mobile version