ಬೆಳ್ತಂಗಡಿ: ಕ್ಯಾನ್ಸರ್ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡದೇ ಮೊದಲ ಹಂತದಲ್ಲಿಯೇ ಸೂಕ್ತ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಉತ್ತಮ ಚಿಕಿತ್ಸೆ ಪಡೆದಾಗ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಆತ್ಮವಿಶ್ವಾಸ, ಸಕಾರಾತ್ಮಕ ಆಲೋಚನೆ, ವ್ಯಾಯಾಮ ಹಾಗೂ ಪೌಷ್ಟಿಕ ಆಹಾರ ಸೇವನೆ ಮಾಡಿದಾಗ ಕ್ಯಾನ್ಸರ್ ಗೆಲ್ಲಬಹುದು ಎಂದು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಹೃತ್ವಿಕ್ ಅಭಿಪ್ರಾಯಪಟ್ಟರು. ಅವರು ನ.4 ರಂದು ಬೆಳ್ತಂಗಡಿ ಡಿ.ಕೆ.ಆರ್. ಡಿ.ಎಸ್. ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ ನವದೆಹಲಿ, ಎನ್.ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್, ಗ್ರಾಮ ಪಂಚಾಯತ್ ಕಡಬ, ಸಮುದಾಯ ಆರೋಗ್ಯ ಕೇಂದ್ರ ಕಡಬ, ಡಾ. ಕೆ. ಶಿವರಾಮ್ ಕಾರಂತ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ, ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ, ಬೆಳ್ತಂಗಡಿ ಸ್ನೇಹಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ಹಾಗೂ ಜೀವಜ್ಯೋತಿ ಮಹಾಸಂಘ ಕುಟ್ರುಪ್ಪಾಡಿ ಇವುಗಳ ಆಶ್ರಯದಲ್ಲಿ ಕಡಬ ಪೇಟೆಯಲ್ಲಿ ನಡೆದ ಕ್ಯಾನ್ಸರ್ ರೋಗದ ವಿರುದ್ಧದ ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಮಾತನಾಡಿದರು.
ಮಾನಿನಿ ರಾಜ್ಯ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ಕ್ಯಾನ್ಸರ್ ರೋಗದ ಬಗ್ಗೆ ತಯಾರಿಸಿದ ಕರಪತ್ರವನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಡಬ ಪಟ್ಟಣ ಪಂಚಾಯತ್ ಸಹಾಯಕ ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾ. ಬಿನೋಯಿ ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮೂಲಕ ನಡೆಸಲ್ಪಡುವ ಕ್ಯಾನ್ಸರ್ ರೋಗದ ವಿರುದ್ಧದ ಅಭಿಯಾನದ ಕುರಿತು ಸಮಗ್ರವಾಗಿ ವಿವರಿಸಿದರು. ಕಿರಣ್ ಮಹಿಳಾ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಗ್ರೇಸಿ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಎಲ್ಲರನ್ನು ಸ್ವಾಗತಿಸಿ, ಕಡಬ ಕಿರಣ್ ಮಹಿಳಾ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಗ್ರೇಸಿ ಪಿಂಟೋ ಧನ್ಯವಾದವಿತ್ತರು. ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಡಬ ಪೇಟೆಯಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮೈಕ್ ಉದ್ಘೋಷಣೆ ಮಾಡಿ, ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಬಗ್ಗೆ ಕರಪತ್ರ ಹಂಚಲಾಯಿತು. ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳ ವರ್ತಕರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು. ಸಂಸ್ಥೆಯ ಸಿಬ್ಬಂದಿ ವರ್ಗ, ಬೆಳ್ಳಾರೆ ಡಾ.ಕೆ. ಶಿವರಾಮ್ ಕಾರಂತ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸ್ವ ಸಹಾಯ ಸಂಘಗಳ ಮಹಿಳೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.