ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.30ರಂದು ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಲು ಹಣತೆಗಳ ಜೊತೆಗೆ ದೀಪ ಹಚ್ಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜಾ ಆಗಮಿಸಿ ದೀಪಾವಳಿ ಹಬ್ಬದ ಆಚರಣೆಯ ಮಹತ್ವ, ಹಿನ್ನೆಲೆ ಮತ್ತು ಸಂದೇಶವನ್ನು ಕಥೆಗಳ ಮೂಲಕ ತಿಳಿಸಿದರು. ಶಾಲಾ ಸಂಚಾಲಕ ಅತೀ ವಂ. ಫಾ. ವಾಲ್ಟರ್ ಡಿಮೆಲ್ಲೋ ದೀಪವು ಪ್ರಜ್ವಲಿಸಿ ಜಗತ್ತಿಗೆ ಬೆಳಕು ನೀಡುವಂತೆ ನಾವು ಕಷ್ಟದಲ್ಲಿರುವವರಿಗೆ ಬೆಳಕಾಗಿರಬೇಕೆಂದು ನುಡಿದು ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ವಂ. ಫಾ. ಕ್ಲಿಫರ್ಡ್ ಪಿಂಟೋ ದೀಪಾವಳಿ ಹಬ್ಬದ ಸಂದೇಶವನ್ನು ಸಾರಿದರು. ವಿದ್ಯಾರ್ಥಿನಿ ನುಶೈಫಾ ದೀಪಾವಳಿ ಹಬ್ಬದ ಕುರಿತು ಮಾತನಾಡಿದರು.
2, 4 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದೀಪಾವಳಿ ಹಬ್ಬದ ಆಚರಣೆ ಮತ್ತು ಹಿನ್ನೆಲೆಯನ್ನು ಹಾಡು, ನೃತ್ಯ ಮತ್ತು ರೂಪಕಗಳ ಮೂಲಕ ಪ್ರಸ್ತುತಪಡಿಸಿ ಎಲ್ಲರ ಮನ ರಂಜಿಸಿದರು. ವಿದ್ಯಾರ್ಥಿನಿಯರಾದ ಸ್ಯಾನ್ಸಿಯಾ ಡಿ’ಸೋಜ ಮತ್ತು ಆಧ್ಯಾ ಬಿ.ಆರ್. ಸ್ವಾಗತಿಸಿ, ಅನ್ವಿತಾ ಬೆನ್ನಿಸ್ ಮತ್ತು ಏಂಜಲಿನ್ ಡೇಸಾ ವಂದಿಸಿದರು. ಶ್ರಾವಣಿ ಮತ್ತು ವ್ಯಾನಿಯ ಡಿ’ಸೋಜ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿಯರಾದ ಸರಿತಾ ರೊಡ್ರಿಗಸ್, ಸುಮಿತ್ರಾ ಹಾಗೂ ಅನಿತಾ ಸಹಕರಿಸಿದರು.