ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.30ರಂದು ಶಾಲಾ ಸಭಾಭವನದಲ್ಲಿ ದೀಪಾವಳಿ ಆಚರಿಸಲಾಯಿತು. ಈ ಕಾರ್ಯಕ್ರಮವು ಪ್ರಾರ್ಥನಾ ವಿಧಿಯೊಂದಿಗೆ ದೀಪ ಬೆಳಗಿಸುವುದರ ಮೂಲಕ ಪ್ರಾರಂಭವಾಯಿತು. ವಿದ್ಯಾರ್ಥಿಯಾದ ಸುಧ್ಯಾನ್ ಜೈನ್ ದೀಪಾವಳಿಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿನಿಯರು ನೃತ್ಯದ ಮೂಲಕ ಎಲ್ಲರನ್ನೂ ಮನರಂಜಿಸಿದರು.
ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ವಂ. ಸ್ವಾ. ಸ್ಟ್ಯಾನಿ ಗೋವಿಯಸ್ ಆಗಮಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ದೀಪಾವಳಿಯು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬವಾಗಿದೆ ಎಂದು ಹೇಳಿ ಮಕ್ಕಳಿಗೆ ದೀಪಾವಳಿಯ ಶುಭಾಶಯವನ್ನು ಕೋರಿದರು. ಈ ಕಾರ್ಯಕ್ರಮದಲ್ಲಿ ಮಾಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಸ್ , ಶಾಲಾ ಮುಖ್ಯೋಪಾಧ್ಯಾಯ ವಂ. ಸ್ವಾ. ದೀಪಕ್ ಲಿಯೊ ಡೇಸ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ವಿನಯ್ ಜಾನ್ಸನ್ ಡಿ’ಸೋಜ ಹಾಗೂ ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸತತ ಹದಿನೈದು ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ಕರ್ತವ್ಯಕ್ಕೆ ರಾಜೀನಾಮೆ ನೀಡಿರುವ ಅನಿತಾ ಡಿ’ಸೋಜ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಬಿಂದು ಮತ್ತು ಸಹಶಿಕ್ಷಕಿಯಾದ ಪ್ರಿನ್ಸಿಯ ಮಾಸ್ಕರೇನಸ್ ನಿರೂಪಿಸಿ, ಸಹಶಿಕ್ಷಕಿಯರಾದ ಸ್ಟೆಲ್ಲಾರವರು ಸ್ವಾಗತಿಸಿ, ರಮ್ಯಾಲತಾ ಧನ್ಯವಾದವನ್ನು ಸಮರ್ಪಿಸಿದರು.