ಕೊಕ್ಕಡ: ಮುಂಗಾರಿನ ಮಳೆಯ ಅಬ್ಬರ ಇಳಿದು ಚುಮುಚುಮು ಚಳಿಗಾಲದ ಆರಂಭದಲ್ಲಿ ಬರುವ ಹಬ್ಬವೇ ದೀಪಾವಳಿ. ಈ ಹಬ್ಬ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದ್ದು, ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಅಕ್ಟೋಬರ್ 30 ರಂದು ದೀಪಾವಳಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೆ. ಕೃಷ್ಣ ಭಟ್ ದೀಪಾವಳಿಯ ವಿಶೇಷತೆ ಬಗ್ಗೆ ತಿಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಂಪ್ರದಾಯಿಕ ರೀತಿಯಲ್ಲಿ ಗೋಪೂಜೆಯನ್ನು ನಡೆಸಿ ಸನಿವಾಸಿಗಳಿಗೆ, ಫಲಾನುಭವಿಗಳಿಗೆ, ಆರೈಕೆದಾರರಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ವಿಭಿನ್ನ ಚಟುವಟಿಕೆಗಳನ್ನು ಮಾಡಿ ಜೊತೆಗೆ ನೃತ್ಯ ಪ್ರದರ್ಶನವನ್ನು ನೀಡಿ ಎಲ್ಲರನ್ನು ಮನರಂಜಿಸಲಾಯಿತು. ಹಾಗೇ ಸೇವಾಧಾಮದ ಫಲಾನುಭವಿ ಶೇಖರ್ ಬೈಪಾಡಿ ತಮ್ಮ ಮಗಳ ಹುಟ್ಟುಹಬ್ಬವನ್ನು ಈ ಸಂದರ್ಭದಲ್ಲಿ ಆಚರಿಸಿಕೊಂಡರು. ಅಮೃತಗಳಿಗೆಯಲ್ಲಿ ಅಮೃತ ಹಸ್ತದಲ್ಲಿ ಹಣತೆಯನ್ನು ಹಚ್ಚಿ ಪಟಾಕಿಯನ್ನು ಸಿಡಿಸಿ ದೀಪಾವಳಿಯನ್ನು ಸಂಭ್ರಮಿಸಲಾಯಿತು.
ಸೇವಾಭಾರತಿ ಕನ್ಯಾಡಿ ಅಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ ಮುಂಬರುವ ನವೆಂಬರ್ 14ಕ್ಕೆ ನೂತನ ಕಟ್ಟಡದ ಭೂಮಿಪೂಜೆ ಮತ್ತು ಶಿಲನ್ಯಾಸದ ಪ್ರತಿಯನ್ನು ನೀಡಿ ಎಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ದಾನಿಗಳು, ಹಿತೈಷಿಗಳು, ಸಲಹಾ ಸಮಿತಿಯ ಸದಸ್ಯರು, ಫಲಾನುಭವಿಗಳು, ಸನಿವಾಸಿಗಳು, ಆರೈಕೆದಾರರು, ಸ್ವಯಂಸೇವಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 60 ಮಂದಿ ಭಾಗವಹಿಸಿದ್ದರು. ಡಾಕ್ಯುಮೆಂಟೇಶನ್ ಮೋಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಸ್ವಾಗತಿಸಿ, ನಿರೂಪಿಸಿದರು. ಸಂಸ್ಥೆಯ ಸಂಸ್ಥಾಪಕ ಕೆ. ವಿನಾಯಕ ರಾವ್ ಧನ್ಯವಾದವಿತ್ತರು.