Site icon Suddi Belthangady

ಉಜಿರೆ : ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜು- ಹೆತ್ತವರೊಂದಿಗೆ ಆಪ್ತ ಸಮಾಲೋಚನಾ ಸಭೆ

ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಹೆತ್ತವರೊಂದಿಗೆ ಆಪ್ತ ಸಮಾಲೋಚನಾ ಸಭೆಯು ಅ.29ರಂದು ನಡೆಯಿತು. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಕಲಿಯುವ ವಿದ್ಯಾರ್ಥಿಗಳಿಗೆ ನಾನಾ ಬಗೆಯ ಅವಕಾಶಗಳಿವೆ, ಕೇವಲ ವೈದ್ಯ, ಅಭಿಯಾಂತ್ರಿಕ ಕ್ಷೇತ್ರ ಮಾತ್ರವೇ ಎಂದು ಮಕ್ಕಳನ್ನು ದಂಡಿಸುವುದು ನ್ಯಾಯವಲ್ಲ, ಎಲ್ಲಾ ಮಕ್ಕಳ ಯೋಚನಾ ಶಕ್ತಿ, ಬುದ್ದಿಮತ್ತೆ ಒಂದೇ ರೀತಿಯಾಗಿರಲ್ಲ ಹೆತ್ತವರು ಅದನ್ನು ಅರ್ಥೈಸಿಕೊಂಡು, ಮಕ್ಕಳಿಗೆ ತಿಳಿ ಹೇಳಿದರೆ ಅವರಿಂದ ಖಂಡಿತ ಸಾಧನೆ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹಣದ ಹಿಂದೆ ಓಡುವ ಅದಕ್ಕಾಗಿ ಮಕ್ಕಳನ್ನು ಓದಿಸುವ ಪ್ರವೃತ್ತಿ ಹೆಚ್ಚುತ್ತಿದೆ ಅದನ್ನು ಹೊರತು ಪಡಿಸಿ ನೆಮ್ಮದಿಯ ಬದುಕಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಹೆತ್ತವರು ಆಲೋಚನೆ ಮಾಡಬೇಕೆಂದು ಎಸ್.ಡಿ.ಎಂ. ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಶ್ವನಾಥ್ ಪಿ. ಹೇಳಿದರು.

ಇನ್ನು ಇರುವ ಕಡಿಮೆ ಅವಧಿಯಲ್ಲಿ ಹೆಚ್ಚು ಓದುಗಾರಿಕೆ ಮೂಲಕ ಉತ್ತಮ ಸಾಧನೆಗೆ ತಯಾರುಗೊಳ್ಳಲು ಏನೇನು ಮಾಡಬೇಕೆಂದು ಹಾಗೂ ವಿದ್ಯಾರ್ಥಿಗಳ ಕಲಿಕೆ ಹಾಗೂ ಭವಿಷ್ಯ ನಿರ್ಮಾಣದಲ್ಲಿ ಹೆತ್ತವರ ಪಾತ್ರ ಎಷ್ಟು ಮುಖ್ಯ ಎಂಬುದರ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ತಿಳಿಸಿದರು. ಹೆಚ್ಚು ಅಂಕ ಪಡೆದ ಮೂವರು ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಸಿ.ಇ.ಟಿ, ನೀಟ್, ಜೆಇಇ ತರಗತಿ ಬಗ್ಗೆ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಉಪ ಪ್ರಾಂಶುಪಾಲರೂ ಆಗಿರುವ ಮನೀಶ್ ಕುಮಾರ್ ಮಾಹಿತಿ ನೀಡಿದರು. ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥೆ ಧನಲಕ್ಷ್ಮೀ ಪ್ರಸ್ತಾವನೆ ನುಡಿಗಳನ್ನು ಆಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಇಂಗ್ಲೀಷ್ ಉಪನ್ಯಾಸಕ ಪಾರ್ಶ್ವನಾಥ್ ಹೆಗ್ಡೆ ನಿರೂಪಿಸಿದರು.

Exit mobile version