ತಣ್ಣೀರುಪಂತ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬೆಳ್ತಂಗಡಿ ತಾಲೂಕು ಪಂಚಾಯತ್, ಸುಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ತಣ್ಣೀರುಪಂತದ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಂಜೀವಿನಿ ಮಾಸಿಕ ಸಂತೆ ದೀಪ ಸಂಜೀವಿನಿ ಸಂತೆ ಅ.29ರಂದು ತಣ್ಣೀರುಪಂತ ಗ್ರಾ.ಪಂ.ವಠಾರದಲ್ಲಿ ನಡೆಯಿತು.
ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಒಕ್ಕೂಟಕ್ಕೆ ಸೇರಿ, ರಾಸಾಯನಿಕ ರಹಿತವಾದ, ತರಕಾರಿಯನ್ನು ಬೆಳೆದು ಹಾಗೂ ಖಾದ್ಯ ಉತ್ಪನ್ನಗಳನ್ನು ಸ್ವತಃ ತಾವೇ ತಯಾರಿಸುತ್ತಿರುವುದು ಪ್ರಸಕ್ತ ಸಮಾಜಕ್ಕೆ ಪ್ರೇರಣದಾಯಕ ಕಾರ್ಯವನ್ನು ಸಂಜೀವಿನಿ ಒಕ್ಕೂಟ ಮಾಡುತ್ತಿರುವುದು ಅಭಿನಂದನೀಯ. ಹಣತೆಯನ್ನು ಖರೀದಿಸುವುದರ ಮೂಲಕ ದೀಪಾವಳಿಯಂದು ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ನಮ್ಮ ಮನೆ ಮನದಲ್ಲಿ ಪಸರಿಸುತ್ತದೆ. ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ ಎಂದು ಹೇಳಿದರು.
ಪಿಡಿಓ ಶ್ರವಣ್ ಕುಮಾರ್ ಮಾತನಾಡಿ, ಸುಗಮ ಸಂಜೀವಿನಿ ಒಕ್ಕೂಟ ಗ್ರಾಮ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಸಂಜೀವಿನಿ ಒಕ್ಕೂಟದ ಸದಸ್ಯರು ತಾವೇ ಖುದ್ದಾಗಿ ಹತ್ತಾರು ಉತ್ಪನ್ನಗಳನ್ನು ತಯಾರಿಸಿದ್ದಾರೆ. ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಿ ಗ್ರಾಮೀಣ ಭಾಗದಲ್ಲಿ ಮಹಿಳೆಯರು ತರಕಾರಿಗಳನ್ನು ಬೆಳೆದು ಸಂತೆಯಲ್ಲಿ ಮಾರಾಟ ನಡೆಸುತ್ತಿದ್ದು ಪ್ರತೀ ತಿಂಗಳು ಗ್ರಾಮದಲ್ಲಿ ಮಾಸಿಕ ಸಂತೆ ನಡೆಯಲಿ ಎಂದು ಅಭಿಪ್ರಾಯಪಟ್ಟರು.
ವಿವಿಧ ಬಗೆಯ ಉತ್ಪನ್ನ: ಸಂತೆಯಲ್ಲಿ ತಣ್ಣೀರುಪಂತ, ಕಣಿಯೂರು, ಬಾರ್ಯ, ಮಚ್ಚಿನ, ಕಳಿಯ, ಚಾರ್ಮಾಡಿ, ಕುಕ್ಕೇಡಿ ಹಾಗೂ ಮಲಾಡಿಯ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಓಲೆಬೆಲ್ಲಕ್ಕೆ ವ್ಯಾಪಕ ಬೇಡಿಕೆ ಇತ್ತು. ಇನ್ನೂ ಉಳಿದಿದ್ದಂತೆ ಹಣತೆ, ತಂಪುಪಾನೀಯ, ತರಕಾರಿ, ಚಕ್ಕುಲಿ, ಉಪ್ಪಿನಕಾಯಿ, ಮಸಾಲೆ ಹುಡಿ, ಹೋಳಿಗೆ, ಫಿನಾಯಿಲ್, ಸಾಬೂನು ಹಾಗೂ ಧಾನ್ಯಗಳನ್ನು ಮಾರಟ ಮಾಡಿದ್ದು ರೂ.10ಸಾವಿರದ ವರೆಗೆ ಲಾಭ ಗಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಎಂ.ಹಾಗೂ ತಣ್ಣೀರುಪಂತ ಪ್ಯಾಕ್ಸ್ ಸಿಇಒ ಸುರೇಂದ್ರ ಪ್ರಸಾದ್ ಶುಭ ಹಾರೈಸಿದರು. ಕಲ್ಲೇರಿ ಮೆಸ್ಕಾಂ ಶಾಖೆಯ ಜೆಇ ಬೂಬ ಶೆಟ್ಟಿ, ಕಾರ್ಯದರ್ಶಿ ಆನಂದ ಹಾಗೂ ಒಕ್ಕೂಟದ ಅಧ್ಯಕ್ಷೆ ಸವಿತಾ ಉಪಸ್ಥಿತರಿದ್ದರು. ತಾಲೂಕು ವ್ಯವಸ್ಥಾಪಕ ಕೃಷಿಯೇತರ ನಿತೀಶ್, ವಲಯ ಮೇಲ್ವಿಚಾರಕ ಜಯಾನಂದ ಕನ್ನಾಜೆ, ವೀಣಾಶ್ರೀ ಕೊಕ್ಕಡ, ತಣ್ಣೀರುಪಂತ ಗ್ರಾ.ಪಂ.ಸಿಬ್ಬಂದಿಗಳಾದ ಸುಂದರ, ಪ್ರಸಾದ್, ಸಂಗೀತಾ ಹಾಗೂ ಸುಧಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕರಿಸಿದರು. ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.