Site icon Suddi Belthangady

ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಹೆತ್ತವರೊಂದಿಗೆ ಆಪ್ತ ಸಮಾಲೋಚನ ಸಭೆ

ಮೊಬೈಲ್ ಹಾಗೂ ಹಣ ಈ ಎರಡು ಶತ್ರುಗಳ ಬಳಕೆ ನಮ್ಮ ಮಕ್ಕಳು ಆದಷ್ಟು ಕಡಿಮೆ ಮಾಡಿದರೆ ಅವರ ಬದುಕು ಉತ್ತಮಗೊಳ್ಳುವುದು. ಹೆತ್ತವರು ನೀಡುವ ಅತಿಯಾದ ಕಾಳಜಿ, ಪ್ರೀತಿ ಮಕ್ಕಳಿಗೆ ಮಾರಕ, ತಂದೆಯ ಶಿಸ್ತು, ತಾಯಿಯ ಪ್ರೀತಿ ಮಗುವಿನ ಏಳಿಗೆಗೆ ಪೂರಕವಾಗಬೇಕು, ಕಷ್ಟದ ಸ್ಥಿತಿಗಳನ್ನು ಎದುರಿಸುವ ಮನೋಬಲ ತುಂಬುವ ಕೆಲಸ ಹೆತ್ತವರಿಂದ ಆಗಬೇಕು. ಕಾಗೆಯಂತೆ ಪರಿಶ್ರಮ, ಬಕದಂತೆ ಗಮನ ವಿದ್ಯಾರ್ಥಿಗಳಲ್ಲಿದ್ದರೆ ಎಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು. ಹೆತ್ತವರು ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿಯುವ ಮನಸ್ಥಿತಿ ಹೊಂದದೆ, ಅವರಿಗೆ ಸಮಾಜದೊಂದಿಗೆ ಬೆರೆತು ಕಷ್ಟ ಸಹಿಷ್ಟುತೆ ಭಾವದ ಜೊತೆ ಬೆರೆವ ಗುಣಗಳನ್ನು ಕಲಿಸಬೇಕೆಂದು ಪುಂಜಾಲಕಟ್ಟೆ ಸರಕಾರಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಸಂಯೋಜಕರು ಆದ ರವಿ ಎಂ.ಎನ್.ಹೇಳಿದರು.

ವಿದ್ಯಾರ್ಥಿಗಳ ಕಲಿಕೆ ಹಾಗೂ ಭವಿಷ್ಯ ನಿರ್ಮಾಣದಲ್ಲಿ ಹೆತ್ತವರ ಪಾತ್ರ ಎಷ್ಟು ಮುಖ್ಯ ಎಂಬುದರ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ತಿಳಿಸಿದರು. ಸಮಾಜ ಸುಧಾರಕ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು ಹಾಗೂ ಹೆಚ್ಚು ಅಂಕ ಪಡೆದ ಪ್ರಥಮ ಪದವಿ ಪೂರ್ವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಸಿ.ಇ.ಟಿ, ನೀಟ್, ಜೆಇಇ ತರಗತಿ ಬಗ್ಗೆ ಭೌತಶಾಸ್ತ್ರ ಉಪನ್ಯಾಸಕ ರಮೇಶ್ ಬಾಬು ಅವರು ಮಾಹಿತಿ ನೀಡಿದರು. ಸಹ ಪ್ರಾಂಶುಪಾಲ ಮನೀಶ್ ಕುಮಾರ್ ಹಾಗೂ ಎಸ್.ಡಿ.ಎಂ. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಯುವರಾಜ ಪೂವಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕಿ ವಾಣಿ ಎಂ.ಎಂ ಪ್ರಸ್ತಾವನೆ ನುಡಿಗಳನ್ನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಂಸ್ಕೃತ ಉಪನ್ಯಾಸಕ ಮಹೇಶ್ ಎಸ್.ಎಸ್ ನಿರೂಪಿಸಿದರು.

Exit mobile version