Site icon Suddi Belthangady

ಬೆಳ್ತಂಗಡಿ: ತ್ರಿ ಸ್ಟಾರ್ ವೈನ್ ಶಾಪ್ ಮತ್ತು ಉಜಿರೆಯ ಮೊಬೈಲ್ ಶಾಪ್ ಕಳ್ಳತನ ಪ್ರಕರಣ- ಅಪ್ರಾಪ್ತ ಬಾಲಕ ಸೇರಿ ಇಬ್ಬರು ಕುಂದಾಪುರದಲ್ಲಿ ವಶಕ್ಕೆ

ಬೆಳ್ತಂಗಡಿ: ಎರಡು ಕಳ್ಳತನ ಪ್ರಕರಣವನ್ನು ಬೆನ್ನತ್ತಿದ್ದ ಬೆಳ್ತಂಗಡಿ ಪೊಲೀಸರಿಗೆ ಕುಂದಾಪುರ ಬ್ಯಾಂಕ್ ಕಳ್ಳತನ ಯತ್ನ ಮಾಡುತ್ತಿದ್ದಾಗ ಒಬ್ಬ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಬೆಳ್ತಂಗಡಿ ಬಸ್‌ ನಿಲ್ದಾಣದ ಶ್ರೀ ಗುರುನಾರಾಯಣ ಕಟ್ಟಡದ ನೆಲ ಮಹಡಿಯಲ್ಲಿರುವ ತ್ರಿ ಸ್ಟಾರ್ ವೈನ್ಸ್‌ ಗೆ ಬೀಗ ಒಡೆದು ನುಗ್ಗಿದ ಕಳ್ಳರು ಹಣ ಹಾಗೂ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿದ ಘಟನೆ ಅ.13ರಂದು ನಡೆದಿತ್ತು. ಅದೇ ದಿನ ರಾತ್ರಿ ಉಜಿರೆಯ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೂಡ ಕಳ್ಳತನ ಮಾಡಲಾಗಿತ್ತು.

ವೈನ್ ಶಾಪ್ ನ ಹೊರಗಿನ ಬೀಗ ಒಡೆದು ಶಟರ್‌ ತೆಗೆದು ಒಳಗೆ ನುಗ್ಗಿದ ಕಳ್ಳರು ಅಂಗಡಿಯ ಒಳಗೆ ಇರಿಸಲಾಗಿದ್ದ ಸುಮಾರು ಒಂಬತ್ತು ಸಾವಿರ ನಗದು, ಎರಡು ಬಿಯರ್ ಬಾಟಲ್ ಕಳ್ಳತನ ಮಾಡಲಾಗಿತ್ತು ಹಾಗೂ ಉಜಿರೆ ಮೊಬೈಲ್ ಶಾಪನಲ್ಲಿ ಕಳ್ಳತನ ಮಾಡಿ 600 ರೂಪಾಯಿ ಎಗರಿಸಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳ್ತಂಗಡಿ ಪೊಲೀಸ್‌ ಠಾಣೆಯ ಇನ್ಸ್ ಪೆಕ್ಟರ್ ಸುಬ್ಬಪುರ್ ಮಠ್ ಮತ್ತು ಬೆಳ್ತಂಗಡಿ ಸಬ್ ಇನ್ಸ್ ಪೆಕ್ಟರ್ ಮುರುಳಿಧರ್ ನಾಯ್ಕ್ ನೇತೃತ್ವದ ತಂಡ ಎರಡು ಕಳ್ಳತನ ಪ್ರಕರಣವನ್ನು ಭೇದಿಸಲು ಸಿಸಿಕ್ಯಾಮರಗಳ ಮೂಲಕ ಕಳ್ಳತನಕ್ಕೆ ಬಳಸಿದ ಬೈಕ್ ಪತ್ತೆ ಹಚ್ಚಿದಾಗ ಆರೋಪಿಗಳು ಕೊಪ್ಪಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದಾಗ ಅಪ್ರಾಪ್ತ ಬಾಲಕ ಮತ್ತು ಮತ್ತೊಬ್ಬನ ಸುಳಿವು ಸಿಕ್ಕಿತ್ತು. ಇಬ್ಬರನ್ನು ಬೆನ್ನತ್ತಿದಾಗ ಈ ಆರೋಪಿಗಳು ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅ.16ರಂದು ಮಧ್ಯರಾತ್ರಿ 2:45ಕ್ಕೆ ಕೋಣಿ ಶಾಖೆಯ ಕರ್ನಾಟಕ ಬ್ಯಾಂಕ್‌ ಕಳ್ಳತನಕ್ಕೆ ಯತ್ನ ಮಾಡುತ್ತಿರುವಾಗ ಬ್ಯಾಂಕ್‌ ನ ಮಾನಿಟರಿಂಗ್ ಹೈದರಾಬಾದ್‌ ಸಂಸ್ಥೆ ನೋಡಿಕೊಳ್ಳುತ್ತಿದ್ದು, ಅವರು ಲೈವ್ ಮೂಲಕ ಸಿಸಿಕ್ಯಾಮರದ ಮೂಲಕ ಕಳ್ಳತನ ಯತ್ನ ನೋಡುತ್ತಿದ್ದು ಈ ವೇಳೆ ಬ್ಯಾಂಕ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿ ಅಂತ‌ರ್ ರಾಜ್ಯ ಕಳ್ಳತನ ಆರೋಪಿಗಳಾದ ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್(22ವ) ಮತ್ತು ಅಪ್ರಾಪ್ತ ಬಾಲಕ ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.

ಅಪ್ರಾಪ್ತ ಬಾಲಕನನ್ನು ಬಾಲನ್ಯಾಯಾಲಕ್ಕೆ ಹಾಜರುಪಡಿಸಿದ್ದು ಬಾಲ ಮಂದಿರಕ್ಕೆ ಸೇರಿಸಲಾಗಿದ್ದು ಮತ್ತೊಬ್ಬನ್ನು ಉಡುಪಿ ಜೈಲಿಗೆ ಕಳುಹಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕ್‌ ವಶಪಡಿಸಿಕೊಂಡಿದ್ದಾರೆ. ಈ ಆರೋಪಿತರು ಕುಂದಾಪುರ ಠಾಣೆ ಮಾತ್ರವಲ್ಲದೆ, ಈ ಹಿಂದೆ ಬೆಳ್ತಂಗಡಿ ಠಾಣೆ, ಪಡುಬಿದ್ರಿ ಠಾಣೆ, ಬಳ್ಳಾರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬ್ಯಾಂಕ್‌ ಕಳ್ಳತನ, ಬೈಕ್‌ ಕಳ್ಳತನ, ಅಂಗಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸಲು ಇಬ್ಬರು ಆರೋಪಿಗಳನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅನುಮತಿಯನ್ನು ಕೋರಿದ್ದು ಎರಡು ದಿನದಲ್ಲಿ ಆರೋಪಿಗಳನ್ನು ಉಡುಪಿ ಜೈಲಿನಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

Exit mobile version