Site icon Suddi Belthangady

ಬೆಳ್ತಂಗಡಿ: ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ- ರಾಜ್ಯಾದ್ಯಂತ ಸಿರಿ ಉತ್ಪನ್ನಗಳು ಮನೆಮಾತಾಗಿದೆ: ರಾಜೇಶ್ ಪೈ

ಬೆಳ್ತಂಗಡಿ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು, ಆರ್ಥಿಕವಾಗಿ ಬಲಿಷ್ಡರಾಗಬೇಕು, ಅದಕ್ಕಾಗಿ ಅವರಿಗೆ ಉದ್ಯೋಗ ಬೇಕು ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಸಿರಿ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಈ ಸಂಸ್ಥೆಯಲ್ಲಿ ಉತ್ಪಾದನೆಗೊಳ್ಳುವ ನೂರಾರು ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದಿಂದ ರಾಜ್ಯಾದ್ಯಂತ ಮನೆಮಾತಾಗಿದೆ ಎಂದು ಉದ್ಯಮಿ, ಸಿರಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಾಜೇಶ್ ಪೈ ಹೇಳಿದರು.

ಅವರು ಅ.26ರಂದು ಉಜಿರೆಯಲ್ಲಿರುವ ಸಿರಿ ಕೇಂದ್ರ ಕಛೇರಿಯಲ್ಲಿ ನಡೆದ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿದರು. ಗ್ರಾಹಕರಿಗೆ ಮತ್ತು ಉದ್ದಿಮೆದಾರಿಗೆ ವಿಜಯವಾಣಿ ಈ ವಿಜಯೋತ್ಸವ ಉತ್ತಮ ಯೋಜನೆಯಾಗಿದೆ. ಎಲ್ಲರಿಗೂ ಸಿರಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಾರು, ಬೈಕ್ ಸಹಿತ 2500 ಬಹುಮಾನಗಳನ್ನು ಪಡೆಯುವ ಸೌಭಾಗ್ಯ ಒದಗಿ ಬರಲಿ ಎಂದು ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.

ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಹಾಗೂ ಲಕ್ಷ್ಮೀ ಗ್ರೂಪ್ ನ ಮಾಲಕ ಮೋಹನ್ ಕುಮಾರ್ ಮಾತನಾಡಿ ಯಾವುದೇ ಉತ್ಪನ್ನಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದಲ್ಲಿ ಮಾತ್ರ ಗ್ರಾಹಕರು ಕೇಳಿ ಪಡೆಯುತ್ತಾರೆ. ಅಂತಹ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳು ಸಿರಿ ಸಂಸ್ಥೆಯಲ್ಲಿದೆ. ಆರ್ಥಿಕವಾಗಿ ಹಿಂದುಳಿದಿರುವ ಬಡ ಗ್ರಾಮೀಣ ಮಹಿಳೆಯರ ಸಬಲೀಕರಣದ ಧ್ಯೇಯೋದ್ದೇಶದೊಂದಿಗೆ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾಗಿ ಸಿರಿ ಸಂಸ್ಥೆ ಬೆಳೆಯುತ್ತಿದೆ. ಎಲ್ಲರೂ ಸಿರಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ವಿಜಯವಾಣಿಯ ಅದೃಷ್ಟ ಬಹುಮಾನ ಗೆಲ್ಲಿರಿ ಎಂದು ಎಲ್ಲಾ ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.

ಒಂದು ಸಂಸ್ಥೆಯು ಬೆಳವಣಿಗೆ ಕಾಣಬೇಕಾದರೆ ಸಿಬ್ಬಂದಿಗಳ ಪ್ರಾಮಾಣಿಕ ಶ್ರಮದಿಂದ ಮಾತ್ರ ಸಾಧ್ಯವಿದೆ. ಅಂತೆಯೇ ಇಂದು ಸಿರಿ ಸಂಸ್ಥೆಯು ಯಶಸ್ವಿಯಾಗಿ, ಈ ಮಟ್ಟಕ್ಕೆ ಬೆಳೆದು, ಲಾಭದಾಯಕವಾಗಿ ನಡೆಯಲು ಸಿರಿ ಸಿಬ್ಬಂದಿಗಳ ಪ್ರಾಮಾಣಿಕತೆ, ಅವಿರತ ಶ್ರಮದಿಂದ ಸಾಧ್ಯವಾಗಿದೆ. ಸಿರಿ ಸಂಸ್ಥೆ ಮತ್ತು ಇಲ್ಲಿ ದುಡಿಯುತ್ತಿರುವ ಸಾವಿರಾರು ಸಿಬ್ಬಂದಿಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಪರಮಪೂಜ್ಯರು ಮತ್ತು ಸಿರಿ ಸಂಸ್ಥೆಯ ಕನಸನ್ನು ಕಂಡ ಮಾತೃಶ್ರೀ ಅಮ್ಮನವರು ಮಹಿಳೆಯರು ಆರ್ಥಿಕವಾಗಿ ಸಧೃಢರಾಗಬೇಕು ಎನ್ನುವ ಕನಸನ್ನು ಹೊತ್ತು ಯಾವುದೇ ಲಾಭವನ್ನು ಬಯಸದೆ ಸಿರಿ ಉತ್ಪನ್ನಗಳ ಆದಾಯವನ್ನು ಮತ್ತೆ ಸಿರಿ ಸಂಸ್ಥೆಯ ಬೆಳವಣಿಗೆಗೆ ವಿನಿಯೋಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸುಮಾರು 2,000ಕ್ಕೂ ಅಧಿಕ ಬಡ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ನೀಡುವ ಉದ್ದೇಶದಿಂದ ಸಿರಿ ಸಂಸ್ಥೆಗೆ ಬೆಳ್ತಂಗಡಿಯ ರೆಂಕೆದಗುತ್ತು ಎಂಬಲ್ಲಿ ಸುಮಾರು 1.50ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸುಮಾರು 80.00 ಕೋಟಿ ವೆಚ್ಚದ ಅತ್ಯಾಕರ್ಷಕ ಕಟ್ಟಡವನ್ನು ಪೂಜ್ಯ ಹೆಗ್ಗಡೆಯವರು ಮಂಜೂರುಗೊಳಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿರಿ ನೂತನ ಕಟ್ಟಡದ ಉದ್ಘಾಟನೆಯು ಅದ್ದೂರಿಯಾಗಿ ನೆರವೇರಲಿದೆ. ವಿಜಯವಾಣಿ ವಿಜಯೋತ್ಸವದಲ್ಲಿ ಸಿರಿ ಸಂಸ್ಥೆ ಪಾಲುದಾರಿಕೆ ಪಡೆದದ್ದು ಬಹಳ ಹೆಮ್ಮೆಯ ವಿಚಾರವಾಗಿದೆ. ಕಳೆದ ವರ್ಷವೂ ಸಿರಿ ಸಂಸ್ಥೆಯ ಹೆಚ್ಚಿನ ಗ್ರಾಹಕರಿಗೆ ಬೈಕ್, ಚಿನ್ನದ ನಾಣ್ಯ ಸಹಿತ ಅನೇಕ ಬಹುಮಾನಗಳು ಲಭಿಸಿದ್ದು, ಈ ಭಾರಿಯೂ ಸಿರಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅದೃಷ್ಟಶಾಲಿಗಳಾಗಿ ಬಹುಮಾನ ಗೆಲ್ಲಿರಿ ಎಂದು ಸಿರಿ ಎಂ.ಡಿ. ಕೆ. ಎನ್. ಜನಾರ್ಧನ ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ 50ನೇ ವರ್ಷಾಚರಣೆಯ ಪ್ರಯುಕ್ತ ‘ಸೇವಾರತ್ನ ಗೌರವ’ ಪಡೆದ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಅವರನ್ನು ಸಿರಿ ಸಂಸ್ಥೆಯ ವತಿಯಿಂದ ಸಿರಿ ಎಂ.ಡಿ. ಸನ್ಮಾನಿಸಿ, ಗೌರವಿಸಿದರು.

ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು. ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಸ್ವಾಗತಿಸಿ, ಮಾರುಕಟ್ಟೆ ವಿಭಾಗದ ಡಿ.ಜಿ.ಎಂ. ವಿನ್ಸೆಂಟ್ ಲೋಬೋ ವಂದಿಸಿದರು. ಗೋದಾಮು ವಿಭಾಗದ ಜಿ.ಎಂ. ಜೀವನ್ ಕಾರ್ಯಕ್ರಮ ನಿರೂಪಿಸಿದರು.

Exit mobile version