Site icon Suddi Belthangady

ಅರಸಿನಮಕ್ಕಿ: ಕಾನ ಭಾರಿ ಮಳೆಯಿಂದ ಮನೆಗೆ ಹಾನಿ – ಕೊಚ್ಚಿಕೊಂಡು ಹೋದ ಸ್ಕೂಟಿ, ರುಬ್ಬುವ ಕಲ್ಲು ಸಹಿತ ಇನ್ನಿತರ ಮನೆ ಸಾಮಾಗ್ರಿಗಳು

ಅರಸಿನಮಕ್ಕಿ: ಅ.24ರಂದು ಸಂಜೆ 5ಗಂಟೆ ನಂತರ ಸುರಿದ ಭೀಕರ ಮಳೆಗೆ ಅರಸಿನಮಕ್ಕಿಯ ಕಾನ ಎಂಬಲ್ಲಿ ಹತ್ತಿರದ ಗುಡ್ಡದಿಂದ ರಭಸವಾಗಿ ಬಂದ ನೀರು ಹಳ್ಳದ ಮೂಲಕ ಅಪಾರ ಪ್ರಮಾಣದಲ್ಲಿ ರಸ್ತೆಗೆ ನುಗ್ಗಿದ ಪರಿಣಾಮ ಜಾನಕಿ ಎಂಬವರ ಮನೆಗೆ ಹಾನಿಯಾಗಿದ್ದು, ಮನೆಯ ವಸ್ತುಗಳು ನೀರಿನಲ್ಲಿ ತೇಲಿ ಹೋದ ಘಟನೆ ನಡೆದಿದೆ.

ಏಕಾಏಕಿ ಬಂದ ನೀರಿನಿಂದಾಗಿ ಮನೆಯಲ್ಲಿದ್ದ ತಾಯಿ, ಮಗಳು ಹಾಗೂ ಮಕ್ಕಳನ್ನು ರಿಕ್ಷಾ ಚಾಲಕ/ಸಂಬಂಧಿ ರವಿ ಅವರು ನೋಡಿ ಅವರನ್ನು ಪಕ್ಕದ ರಬ್ಬರ್ ತೋಟಕ್ಕೆ ಸ್ಥಳಾಂತರಿಸಿದರಿಂದ ಯಾವುದೇ ಪ್ರಾಣಪಾಯವಾಗಲಿಲ್ಲ.

ಮನೆಮುಂದೆ ನಿಲ್ಲಿಸಿದ್ದ ಸ್ಕೂಟಿ ಕೂಡ ನೀರಿನಲ್ಲಿ ತೇಲಿಕೊಂಡು ಮನೆ ಹಿಂಬದಿಯ ತೋಟದಲ್ಲಿ ಸಿಲುಕಿ ಕೊಂಡಿದ್ದು, ಕೋಳಿ ಗೂಡಲ್ಲಿದ್ದ ಕೋಳಿಮರಿ, ಮನೆಯ ಪಕ್ಕದಲ್ಲಿ ಕೊಟ್ಟಿಗೆಯ ಎದುರು ಭಾಗದಲ್ಲಿ ಇದ್ದ ಅರೆಯುವ ಕಲ್ಲು ನೀರಿನ ರಭಸಕ್ಕೆ ಸುಮಾರು ದೂರ ತೇಲಿಕೊಂಡು ಹೋಗಿತ್ತು. ಕೋಳಿ ಗೂಡಿನಲ್ಲಿ ಇದ್ದ ಸಣ್ಣ ಸಣ್ಣ ಕೋಳಿ ಮರಿಗಳು ಕೂಡ ನೀರಿನ ರಭಸಕ್ಕೆ ಕೊಚ್ಚಿ ಕೊಂಡು ಹೋಗಿದೆ.

ಅ.25ರಂದು ನವಶಕ್ತಿ ಆಟೋ ಚಾಲಕ ಮಾಲಕರು ಮತ್ತು ಸಂಭಂದಿಕರು ಊರವರು ಸೇರಿ ಹಾನಿಯಾದ ಮನೆಯ ಮತ್ತು ಕೊಟ್ಟಿಗೆ ಹಾಗೂ ಮನೆಯoಗಳದ ದುರಸ್ತಿ ಕಾರ್ಯ ನಡೆಸಿದರು. ದುರಸ್ತಿ ಕಾರ್ಯದಲ್ಲಿ ನವಶಕ್ತಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್ ಹಾಗೂ ಸಂಘದ ಇತರ ಸದಸ್ಯರು, ಊರವರಾದ ಗಣೇಶ್ ಕೆ ಹೊಸ್ತೋಟ, ಪ್ರೇಮಚಂದ್ರ, ಮುರಳಿಧರ್ ಶೆಟ್ಟಿಗಾರ್ ಹಾಗೂ ಇನ್ನಿತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಪಿಡಿಒ ಜಯರಾಜ್, ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾ‌ರ್ ಎಂ ಎಸ್ ಭೇಟಿ ನೀಡಿ ಪಂಚಾಯತ್ ನಿಂದ ಸಿಗುವ ಪರಿಹಾರದ ಭರವಸೆ ನೀಡಿದರು.

Exit mobile version