ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ 57ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಕಾರ್ಯಕ್ರಮ ಅ.24ರಂದು ಮಹೋತ್ಸವ ಸಭಾಭವನದಲ್ಲಿ ನಡೆಯಿತು.
“ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ಯೂ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣಗೊಂಡಿದ್ದು, ನ.8ರಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಲೋಕಾರ್ಪಣೆಗೊಳಿಸಲಿದ್ದಾರೆ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
“ಸಿರಿ ಸಂಸ್ಥೆಯ 70 ಕೋಟಿ ರೂ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯವಾಗಲಿದೆ. ಹೊಸ ಚಿಂತನೆ ಯೊಂದಿಗೆ ಕಾರ್ಯಕ್ರಮಗಳು ಉತ್ಸಾಹದಿಂದ ಅನುಷ್ಠಾನಗೊಳ್ಳಬೇಕು. ಭಜನೆ ಕಮ್ಮಟದ ಮೂಲಕ ಹೊಸ ನಾಯಕರು ಸೃಷ್ಟಿಯಾಗುತ್ತಿದ್ದಾರೆ. ಕ್ಷೇತ್ರದ ಧರ್ಮೋತ್ಥಾನ ಟ್ರಸ್ಟ್ ಮೂಲಕ 11,000 ದೇವಾಲಯಗಳಿಗೆ ಸಹಕಾರ ನೀಡಲಾಗಿದೆ” ಎಂದು ಹೇಳಿದರು.
ಮೂಡಬಿದಿರೆ ಶ್ರೀ ಜೈನಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ ಅವರ ಒಳ್ಳೆಯ ಕೆಲಸಗಳನ್ನು ಜೀವಂತ ಮೂರ್ತಿಗಳಾಗಿ ಇರುವ ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ನಾವು ಮಾಡೋಣ ಆಸೆ ಆಕಾಂಕ್ಷೆಗಳನ್ನು ಸಮಾಜಕ್ಕಾಗಿ ಸಮರ್ಪಣೆ ಮಾಡುತ್ತಿದ್ದಾರೆ. ಎಲ್ಲಿ ಹೆಚ್ಚು ಹೆಚ್ಚು ಕೆಲಸ ನಡೆಯುತ್ತದೆ ಅಲ್ಲಿ ದೃಷ್ಟಿ ಬೀಳುತ್ತದೆ ಎಂದರು. ಎಲ್ಲರಿಗೂ ಆದರ್ಶವಾಗಿ ಮನಸ್ಸು ಸೋಲದೆ ಹೊಳಪಿನ ಕಣ್ಣಿನಲ್ಲಿ ನೋಡುತ್ತಾ ತನ್ನ ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ನೋಡುತ್ತಾ ಹೃದಯವನ್ನು ತೆರೆದು ಧನ ದಾನವನ್ನು ಸಂಸ್ಕಾರ ಸಂಸ್ಕೃತಿಯನ್ನು ಕೊಡುತ್ತಿದ್ದಾರೆ.
ಸ್ವಾಮೀಜಿಗಳು ಯಾವ ತ್ಯಾಗದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾರೆ ಅದನ್ನು ತನ್ನ ಬಟ್ಟೆಯಲ್ಲಿ ಸೀಮಿತವಾಗಿ ಇಟ್ಟುಕೊಂಡವರು ಜೈನ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಇರುವ ಅನನ್ಯ ಬೆಸುಗೆ ಅದು ಸೂರ್ಯ ಚಂದ್ರರು ಇರುವಷ್ಟು ಸತ್ಯ ಲೋಕಕಲ್ಯಾಣದ ಕೆಲಸ ನಿರಂತರವಾಗಿ ನಡೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ ದೇವಸ್ಥಾನದಲ್ಲಿ ಮಂಜುನಾಥ ಸ್ವಾಮಿಯನ್ನು ಕಾಣುತ್ತೇವೆ. ಕಣ್ಣಿಗೆ ಕಾಣುವ ಪರಮೇಶ್ವರ ಆದರೆ ನಡೆದಾಡುವ ಪರಮೇಶ್ವರ ವೀರೇಂದ್ರ ಹೆಗ್ಗಡೆಯವರಾಗಿದ್ದಾರೆ. ವಿನಯ ಮಾನವೀಯತೆಯಿಂದ ಕೂಡಿರುವ ಧರ್ಮಸ್ಥಳ ಸರ್ವ ಜನಾಂಗದ ಶಾಂತಿಯ ತೋಟ ಆಗಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಪವಿತ್ರ ಕ್ಷೇತ್ರವಾಗಿದೆ. ಧರ್ಮಸ್ಥಳ ಕೇವಲ ದೇವಾಲಯ ಕ್ಷೇತ್ರವಾಗಿಲ್ಲ ನ್ಯಾಯಾಲಯ ಕ್ಷೇತ್ರವು ಆಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಲಕ್ಷಾಂತರ ಕುಟುಂಬಗಳಿಗೆ ಬೆಳಕಾಗಿ ನಮಗೆಲ್ಲರಿಗೂ ಪ್ರೇರಣೆ ಮಾರ್ಗದರ್ಶಕರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ ಡಾ| ಹೆಗ್ಗಡೆಯವರಿಗೆ ಗೌರರ್ವಾಪಣೆ ನಡೆಯಿತು.
ಕ್ಷೇತ್ರದ 30 ಹಿರಿಯ ನೌಕರರನ್ನು ಸನ್ಮಾನಿಸಲಾಯಿತು. ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಮೂಡಬಿದಿರೆ ಶ್ರೀ ಜೈನಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು, ಸಂಸದ ಡಾ.ಸಿ.ಎನ್. ಮಂಜುನಾಥ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಧರ್ಮಸ್ಥಳ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಜಿರೆ ಎಸ್.ಡಿ.ಎಂ.ಇ. ಸೊಸೈಟಿ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವದ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ವಂದಿಸಿದರು.