ಬೆಳ್ತಂಗಡಿ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧ ಬೃಹತ್ ಪ್ರತಿಭಟನಾ ಸಭೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯಲಿದೆ. ಇದರ ಪೂರ್ವಭಾವಿ ಸಭೆಯು ಅ.23ರಂದು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.
ಮುಂದಿನ ತಾಲೂಕು ಮಟ್ಟದ ಮತ್ತು ಗ್ರಾಮ ಮಟ್ಟದ ಹೋರಾಟದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೋರಾಟಗಾರ ಕಿಶೋರ್ ಶಿರಾಡಿ ನೀಡಿದರು. ನ.11ರಂದು ಬೆಳ್ತಂಗಡಿ ತಾಲೂಕು ಕಛೇರಿ ಎದುರು ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿರ್ಮಾನಿಸಲಾಯಿತು. ತಾಲೂಕು ಕಛೇರಿಯಲ್ಲಿ ಪ್ರತಿಭಟಿಸುವ ಮುಂಚೆ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಭಟಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಗೌಡ, ನಾವೂರ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ ಗಣೀಶ್ ನಾವೂರ, ಜಯಂತ್ ಹೆಗ್ಡೆ ದಿಡುಪೆ, ಮಾಧವ ಶಿರ್ಲಾಲು ಉಪಸ್ಥಿತರಿದ್ದರು. ಕರುಣಾಕರ್ ಶಿಶಿಲ ಸ್ವಾಗತಿಸಿ, ನವೀನ್ ರೆಖ್ಯ ಧನ್ಯವಾದವಿತ್ತರು.