Site icon Suddi Belthangady

ಉಜಿರೆ: ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ- ಶಿಸ್ತು ಶಿಕ್ಷಣದ ಅವಿಭಾಜ್ಯ ಅಂಗ: ಬಿ. ಸೋಮಶೇಖರ ಶೆಟ್ಟಿ

ಉಜಿರೆ: ಬದುಕು ಉತ್ತಮವಾಗಿ ರೂಪುಗೊಳ್ಳಲು ಆತ್ಮವಿಶ್ವಾಸದ ಜೊತೆಗೆ ಶಿಸ್ತು ಇರಬೇಕು. ಶಿಸ್ತು ಶಿಕ್ಷಣದ ಅವಿಭಾಜ್ಯ ಅಂಗ ಎಂದು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ. ಸೋಮಶೇಖರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅ.21ರಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ಬದುಕನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಬದುಕು ನಮಗೆ ಹೆತ್ತವರು ನೀಡಿದ ಕೊಡುಗೆ. ಬದುಕು ಸಾರ್ಥಕವಾಗಬೇಕಾದರೆ ನಾವು ಏನನ್ನಾದರೂ ಸಾಧಿಸಬೇಕು. ಬದುಕು ಸಾರ್ಥಕವಾಗಬೇಕಾದರೆ ನಿರ್ದಿಷ್ಟ ಗುರಿ ಇರಬೇಕು. ಗುರಿ ತಲುಪಲು ಅಚಲವಾದ ಆತ್ಮವಿಶ್ವಾಸ ಅತೀ ಅಗತ್ಯ” ಎಂದು ಅವರು ಹೇಳಿದರು. “ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿರಬೇಕು. ದುಶ್ಚಟಗಳಿಂದ ದೂರ ಇರಲು ಉತ್ತಮ ಗೆಳೆಯರ ಬಳಗ ಇಟ್ಟುಕೊಳ್ಳಿ, ಸೋತಾಗ ಕುಗ್ಗದಿರಿ, ಗೆದ್ದಾಗ ಹಿಗ್ಗದಿರಿ, ತಿಳಿಯಾದ ನೀರಿನಂತೆ ಇರಬೇಕು. ಸಾಧ್ಯವಾದಷ್ಟು ಓದುವ ಹವ್ಯಾಸ ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬಾಳಿ” ಎಂದು ಅವರು ಹಾರೈಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಶಿಸ್ತು, ಸ್ವಚ್ಛತೆ ಪಾಲನೆ ಮಾಡುವ ಕುರಿತು ಹಾಗೂ ದುಶ್ಚಟಗಳಿಂದ ದೂರ ಇರುವುದಾಗಿ ದೇವರ ಮೇಲೆ ಪ್ರಮಾಣ ವಚನ ಬೋಧಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು.

Exit mobile version