ಕಾಯರ್ತಡ್ಕ: ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಪ್ರಗತಿ ಬಂದು ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟಗಳು ಕಳೆಂಜ ಎ ಮತ್ತು ಕಾಯರ್ತಡ್ಕ ಹಾಗೂ ಜನಜಾಗೃತಿ ವೇದಿಕೆ ಧರ್ಮಸ್ಥಳ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ಅ.21ರಂದು ಕಾಯರ್ತಡ್ಕ ಉಮಾಮಹೇಶ್ವರ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಚಿನ್ನಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿ ನಾರಾಯಣ ಪಾಟಾಲಿ, ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಆನಂದ ಗೌಡ ಕಾಯರ್ತಡ್ಕ, ಸೈಂಟ್ ಸಬಾಸ್ಟಿಯನ್ ಚರ್ಚ್ ಧರ್ಮ ಗುರುಗಳಾದ ಫಾದರ್ ಜೋಸೆಫ್ ವಾಲೂಕರನ್ ಹಾಗೂ ಕಾಯರ್ತಡ್ಕ ಜುಮ್ಮಾ ಮಸೀದಿ ಧರ್ಮಗುರು ಹನೀಫ್ ಮದನಿ ಉಪಸ್ಥಿತರಿದ್ದರು. ಗೌರವ ಉಪಸ್ಥಿತರಾಗಿ ವಿಜಯಕುಮಾರ್ ಕುಲಾಡಿ, ಸೀತಾರಾಮ್, ರಾಜೇಶ್ ಎಂ. ಕೆ., ಪ್ರಸನ್ನ ಎ.ಪಿ., ಕೊರಗಪ್ಪ ಗೌಡ, ಒಕ್ಕೂಟದ ನೂತನ ಅಧ್ಯಕ್ಷರಾದ ಉಮೇಶ್ ಗೌಡ ಹಾಗೂ ಧರ್ಣಪ್ಪ ಕುಂಬಾರ, ಸೇವಾಪ್ರತಿನಿಧಿ ಜನಾರ್ದನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ನಾರಾಯಣ ಪಾಟಾಲಿ ಮಾತನಾಡುತ್ತಾ, 1982ರ ಮೊದಲು ಜನರ ಬಡತನ ಹಾಗೂ ಕಷ್ಟಗಳನ್ನು ಮನಗಂಡು ಬಡತನ ನಿರ್ಮೂಲನೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಯೋಜನೆಯಿಂದ ಪಡಕೊಂಡ ಸವಲತ್ತುಗಳನ್ನು ಜನರು ಉಪಯೋಗಿಸಿಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಹೊಂದಿದ್ದಾರೆ ಹಾಗೂ ಮಹಿಳೆಯರು ಅಬಲೆ ಅಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಹಾಗೂ ಸಮಾಜದಲ್ಲಿ ಮಹಿಳೆಯರು ಗುರುತಿಸಿಕೊಳ್ಳುವಂತ ಕೆಲಸವನ್ನು ಮಾಡಲು ಸಹಕಾರಿಯಾಗಿದೆ, ಜನರ ಜೀವನಮಟ್ಟ ಸುಧಾರಣೆಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವತ್ತು ಬಿ ಸಿ ಟ್ರಸ್ಟ್ ಆಗಿ ಕೆಲಸವನ್ನು ನಿರ್ವಹಿಸುತ್ತಿದೆ. ಜನರ ಜೀವನಮಟ್ಟ ಸುಧಾರಣೆಯಾಗಲು ಆರೋಗ್ಯವಂತರಾಗಿ ಬದುಕಬೇಕಾದರೆ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿಯನ್ನು ಬದಲಿಸುವಂತಹ ಅನಿವಾರ್ಯತೆ ಇದೆ ಎಂಬುದಾಗಿ ಮಾಹಿತಿ ನೀಡಿದರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಒಗ್ಗಟ್ಟಿನಲ್ಲಿ ಕೆಲಸ ನಿರ್ವಹಿಸಿದಲ್ಲಿ ಒಕ್ಕೂಟದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದಾಗಿ ಮಾಹಿತಿ ನೀಡಿದರು.
ಎಂಟು ವರ್ಷಗಳ ಸುದೀರ್ಘ ಅವಧಿಯಲ್ಲಿ ಅರಣ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಪ್ರಶಾಂತ್ ಹಾಗೂ ನಾಟಿ ವೈದ್ಯೆಯಾಗಿ ಗುರುತಿಸಿಕೊಂಡಿರುವ ಡೀಕಮ್ಮ ಇವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಸದಸ್ಯ ಪ್ರಮೋದ್ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರ ವಸಂತ್ ನಿರ್ವಹಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಹರ್ಷಿತಾ ಸ್ವಾಗತಿಸಿ, ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ. ವಂದಿಸಿದರು.