Site icon Suddi Belthangady

ಬೆಳ್ತಂಗಡಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ವಿಳಂಬ- ಉಜಿರೆಯಲ್ಲಿ ಎಬಿವಿಪಿ ಪ್ರತಿಭಟನೆ

ಬೆಳ್ತಂಗಡಿ: ತಾಲೂಕಿನ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಉಜಿರೆ ಮತ್ತು ಬೆಳ್ತಂಗಡಿ ನಗರವನ್ನು ಹೆಚ್ಚಾಗಿ ಅವಲಂಬಿಸಿದ್ದು, ಅಸಮರ್ಪಕ ಸಾರಿಗೆ ವ್ಯವಸ್ಥೆಯಿಂದಾಗಿ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಬರುವುದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಎ.ಬಿ.ವಿ.ಪಿ. ವತಿಯಿಂದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಾರ್ಗವಾಗಿ ಚಲಿಸುವ ಬಸ್ಸಿನಲ್ಲಿ ತೆರಳುವ ವಿದ್ಯಾರ್ಥಿಗಳು, ಬಂದಾರುವಿನಿಂದ ಬೆಳ್ತಂಗಡಿ ಮಾರ್ಗವಾಗಿ ಚಲಿಸುವ ಬಸ್ಸಿನಲ್ಲಿ ತೆರಳುವ ವಿದ್ಯಾರ್ಥಿಗಳು ಮತ್ತು ಧರ್ಮಸ್ಥಳದಿಂದ ಮಂಗಳೂರು ಮಾರ್ಗವಾಗಿ ಚಲಿಸುವ ಬಸ್‌ಗಳಲ್ಲಿ ತೆರಳುವ ವಿದ್ಯಾರ್ಥಿಗಳು ಬಸ್ ನಿಲುಗಡೆ ಸಮಸ್ಯೆಯ ಬಗ್ಗೆ ಮತ್ತು ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಮಾರ್ಗವಾಗಿ ಬರುವ ವಾಯುವ್ಯ ಸಾರಿಗೆ ಬಸ್, ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಸಂಚರಿಸುವ ಈಶಾನ್ಯ ಸಾರಿಗೆ ಬಸ್ ವಿದ್ಯಾರ್ಥಿಗಳಿಗೆ ನಿಲುಗಡೆ ನೀಡುವಂತೆ ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್ ಅವರಿಗೆ ಮನವಿಯನ್ನು ನೀಡುವ ಮೂಲಕ ವಿನಂತಿಸಿಕೊಳ್ಳಲಾಗಿತ್ತು.

ಮನವಿ ಸಲ್ಲಿಸಿದರೂ ಕೂಡಾ ಮತ್ತೆ ಅ.19ರಂದು ಇಚಿಲಂಪಾಡಿಯಲ್ಲಿ ಕಾರವಾರಕ್ಕೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನಿಲುಗಡೆ ನೀಡದಿದ್ದುದರಿಂದ 15 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ಸಮಸ್ಯೆಯುಂಟಾಗಿದ್ದು, ಇದರಿಂದ ಬೇಸತ್ತ ವಿದ್ಯಾರ್ಥಿಗಳು ಉಜಿರೆ ಕಾಲೇಜಿನ ಮುಂಬಾಗ ಇರುವ ಎ.ಬಿ.ವಿ.ಪಿ. ಕಟ್ಟೆಯ ಬಳಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಮಾತುಕತೆಯನ್ನು ನಡೆಸಿದ ಬಳಿಕ ಬಸ್ ತೆರಳಲು ಅವಕಾಶ ಮಾಡಿಕೊಡಲಾಯಿತು.

Exit mobile version