Site icon Suddi Belthangady

ಉಜಿರೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಪರಿಷತ್ ಉಪಚುನಾವಣೆ ಪ್ರಚಾರ – 2‌ ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿಗೆ ಗೆಲುವು – ಕಾಂಗ್ರೆಸ್ ಪಂಚ ಗ್ಯಾರಂಟಿಗಳು ಪಂಕ್ಚರ್ ಆಗಿದೆ: ಸಿ.ಟಿ.ರವಿ

ಉಜಿರೆ: ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.

ವಿಧಾನ ಪರಿಷತ್ ಉಪಚುನಾವಣೆಯ ಪ್ರಯುಕ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ನಂತರ ಉಜಿರೆಯ ಓಶಿಯನ್ ಫರ್ಲ್ ಹೊಟೇಲ್ ಸಭಾಂಗಣದಲ್ಲಿ ಅ.18ರಂದು ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ 2 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಮತ್ತು ಹಣದ ಬಲವಿದೆ. ನಮ್ಮಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಬಲವಿದೆ ಎಂದು ಹೇಳಿದ ಅವರು ಹಣ ಮತ್ತು ಅಧಿಕಾರದ ಬಲದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿದ್ದಾರೆ. ನಾವು ಪ್ರತಿ ಪಂಚಾಯತ್ ಸಭೆ ನಡೆಸುವ ಮೂಲಕ ಗೆಲುವನ್ನು ಖಾತ್ರಿಪಡಿಸಿಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಸಾಧನೆಯನ್ನು ಕೇಳಿದರೆ ಅದು ಶೂನ್ಯ. ಸಾಧನೆ ಬಗ್ಗೆ ಅವರು ಮಾತನಾಡುವುದಿಲ್ಲ. ಹಗರಣದ ಸಾಧನೆ ಬಿಟ್ಟರೆ ಬೇರೆ ಯಾವುದೇ ಸಾಧನೆ ಇಲ್ಲ. ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳು ಪಂಕ್ಚರ್ ಆಗಿವೆ. ಯುವಕರಿಗೆ ಯುವನಿಧಿ ಕೊಡದೆ ಮೂರು ನಾಮ ಹಾಕಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

ವೇದಿಕೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನಸಭಾ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್, ಪ್ರೇಮನ್ ಶೆಟ್ಟಿ, ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರಂಕಿ ಮತ್ತು ಸೀತಾರಾಮ ಬೆಳಾಲು ಉಪಸ್ಥಿತರಿದ್ದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಸ್ವಾಗತಿಸಿ, ಶಾಸಕ ಹರೀಶ್ ಪೂಂಜ ವಂದಿಸಿದರು.

Exit mobile version