Site icon Suddi Belthangady

ಅಳದಂಗಡಿ: ಶ್ರೀ ಸೋಮನಾಥೇಸ್ವರಿ ದೇವಸ್ಥಾನ ವಠಾರದಲ್ಲಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ ಆಯೋಜಕತ್ವದಲ್ಲಿ ಅಂಗಾಂಗ ದಾನ ನೋಂದಣಿ- ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಯೋಧರಿಗೆ ಗೌರವ ಸಮರ್ಪಣೆ

ಅಳದಂಗಡಿ: ‘ರಾಜಕೀಯ ಅಶಾಂತಿಯ ಕ್ಷೇತ್ರ. ಅಲ್ಲಿ ಸ್ವಾರ್ಥವಿರುತ್ತದೆಯೇ ಹೊರತು ಶಾಮತಿಯಿರುವುದಿಲ್ಲ. ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ ರಾಜಕೀಯ ರಹಿತ ಎಂಬುದೇ ಖುಷಿಯ ವಿಚಾರ. ಯುವ ಸಮುದಾಯ ಒಟ್ಟಾಗಿ ಹಲವು ವಿಧದ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದು ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್ ಹೇಳಿದರು.

ಅವರು ಅ.17ರಂದು ಅಳದಂಗಡಿ ಶ್ರೀ ಸೋಮನಾಥೇಸ್ವರಿ ದೇವಸ್ಥಾನದ ವಠಾರದಲ್ಲಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ ಇವರ ಆಯೋಜಕತ್ವದಲ್ಲಿ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಿಸಿ ಮಾತನಾಡಿದರು.

‘ನಾನು ಎಂಬ ಅಹಂ ನಮ್ಮಲ್ಲಿರ ಕೂಡದು. ಅದು ಇದ್ದದ್ದೇ ಆದರೆ ಅಶಾಂತಿ ನಿರ್ಮಾಣವಾಗುತ್ತದೆ. ನಮ್ಮೊಳಗಿನ ದ್ವೇಷಗಳಿಗೆ ಅಶಾಂತಿಯೇ ಮೂಲ ಕಾರಣ. ಹಾಗಾಗಿ ಸಮಯ ಪ್ರಜ್ಞೆಯೊಂದಿಗೆ ಶಾಂತಿಯುತ ಉತ್ತಮ ಸಮಾಜ, ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು’ ಎಂದರು.

ಕಾರ್ಗಿಲ್ ಯುದ್ಧ ಸಂದರ್ಭ ತನ್ನ ಕೈಗಳನ್ನೇ ಕಳೆದುಕೊಂಡ ನಿವೃತ್ತ ಯೋಧ ರಂಗಪ್ಪ ಹುಲಿಯಪ್ಪ ಆಲೂರು ಗೌರವ ಸ್ವೀಕರಿಸಿ, ಕಾರ್ಗಿಲ್ ಯುದ್ಧ ಸಂದರ್ಭದ ತನ್ನ ಅನುಭವಗಳನ್ನು ವಿವರಿಸಿ ‘ದೇಶ ಸೇವೆ ಎಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಬೇಕು. ಪ್ರತಿ ಮನೆಗೊಬ್ಬ ಸೈನಿಕ ಮೂಡಿ ಬಂದು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಬೆಂಗಳೂರು ನಿರಾಶ್ರಿತರ ಆಶ್ರಮದ ಜನಸ್ನೇಹಿ ಯೋಗೀಶ್ ಮಾತನಾಡಿ, ‘ಮನುಷ್ಯನಾದವನಲ್ಲಿ ರಕ್ತದಾನ, ಅಂಗಾಂಗದಾನ ಹೀಗೆ ತನ್ನಿಂದಾಗುವ ಒಂದಲ್ಲ ಒಂದು ರೀತಿಯ ದಾನ ಗುಣ ಇರಬೇಕು. ಹಲವು ದುಡ್ಡಿದ್ದವರ ಕೈಯಲ್ಲಿ ಆಗದೇ ಇರುವ ಕೆಲಸವನ್ನು ದುಡ್ಡಿಲ್ಲದವರು ಸೇರಿಕೊಂಡು ಸಂಘಟನೆಯ ಮೂಲಕ ಮಾಡುತ್ತಿರುವುದು ದೇವರು ಮೆಚ್ಚುವ ಕಾರ್ಯ’ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ವಹಿಸಿದ್ದರು.

ನಿವೃತ್ತ ಯೋಧ ಹರೀಶ್ ರೈ ಪಿ., ಸಾಮಾಜಿಕ ಕಾರ್ಯಕರ್ತ ರವಿ ಕಕ್ಕೆಪದವು, ಜನಸ್ನೇಹಿ ಯೋಗೀಶ್ ಇವರನ್ನು ಸನ್ಮಾನಿಸಲಾಯಿತು. ನಿವೃತ ಸೈನಿಕರಾದ ತಂಗಚ್ಚನ್, ಅನಿಕ್ ಡಿ.ಎಲ್.ದಿನೇಶ್, ಭಾಸ್ಕರ್ ನಾಯ್ಕ್, ರಮಾನಾಥ ರೈ, ಕೃಷ್ಣಾನಂದ ಶೆಟ್ಟಿ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ವಸಂತ ಪೂಜಾರಿ ಅಂಡಿಂಜೆ, ಕೆ.ಎಂ.ಸಿ. ಆಸ್ಪತ್ರೆಯ ಡಾ. ಕಾರ್ತಿಕ್ ಕೆ.ಆರ್.ರಾವ್ ಅಮನಬೈಲು, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಅಂಗಾಂಗ ಕಸಿ ಸಂಯೋಜಕಿ ಪದ್ಮ ವೇಣೂರು, ಉದ್ಯಮಿ ನಾಗಕುಮಾರ್ ಜೈನ್ ಉಪಸ್ಥಿತರಿದ್ದರು.

ಅಳದಂಗಡಿ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಇದರ ಅಧ್ಯಕ್ಷ ದೇವದಾಸ್ ಕೆ. ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಯುವ ಸಾಹಿತಿ ಚಂದ್ರಹಾಸ್ ಬಳಂಜ ನಿರೂಪಿಸಿದರು. ಹರೀಶ್ ಕಲ್ಲಾಜೆ ವಂದಿಸಿದರು. ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಯ ಸದಸ್ಯರು ಸಹಕರಿಸಿದರು.

ಬೃಹತ್ ಮೆರವಣಿಗೆ: ಬೆಳಿಗ್ಗೆ ಆರೋಗ್ಯ ಮೇಳವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸ್ವಾತಿ ಡೆಂಟಲ್ ಕ್ಲಿನಿಕ್ ಡಾ. ಶಶಿಧರ್ ಡೋಂಗ್ರೆ, ಶಿರ್ತಾಡಿ ನವಚೇತನಾ ಕ್ಲಿನಿಕ್ ಡಾ. ಕೃಷ್ಣ ರಾಜ್ ಭಟ್, ಪಿಲ್ಯ ನಾಟಿ ವೈದ್ಯ ಬೇಬಿ ಪೂಜಾರಿ, ಮಂಗಳೂರು ಕೆ.ಎಂ.ಸಿ ಅರ್ಬಟ್, ಮಂಗಳೂರು ರೆಡ್ ಕ್ರಾಸ್ ಪ್ರವೀಣ್, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾಶಿವ ಪೂಜಾರಿ ಊರ ಉಪಸ್ಥಿತರಿದ್ದರು. ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಅಳದಂಗಡಿ ಪೇಟೆಯಿಂದ ಕಾರ್ಗಿಲ್ ಯೋಧರ ಬೃಹತ್ ಮೆರವಣಿಗೆಗೆ ಡಾ. ಎನ್. ಯಂ ತುಳಪುಳೆ ಅಳದಂಗಡಿರವರು ಚಾಲನೆ ನೀಡಿದರು. ವಿವಿಧ ಭಜನಾ ತಂಡ, ಚೆಂಡೆ ವಾದ್ಯ, ಸಂಗೀತದೊಂದಿಗೆ ಸೋಮನಾಥೇಶ್ವರಿ ದೇವಸ್ಥಾನದ ವಠಾರದವರೆಗೆ ಮೆರವಣಿಗೆ ನಡೆಯಿತು.

Exit mobile version