ಬೆಳ್ತಂಗಡಿ: ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು. ಅವರು ಬೆಳ್ತಂಗಡಿಯ ಸಿ.ವಿ.ಸಿ ಸಭಾಂಗಣದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ಸಮಿತಿಗಳ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಚುನಾಯಿತ ಸದಸ್ಯರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಬರುತ್ತಿದ್ದು ಅದನ್ನು ಎದುರಿಸಲು ಪಕ್ಷ ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ ಎಂದರು. ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಬಗ್ಗೆ ಸಮಗ್ರವಾದ ಅನುಭವವಿರುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ ಎಂದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ರಾಜು ಪೂಜಾರಿ ಮಾತನಾಡಿ ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲ ಸ್ಥಳೀಯ ಸಂಸ್ಥೆಗಳ ಮೂಲಕ ಜನಸೇವೆ ಮಾಡಿದ್ದೇನೆ ಪಕ್ಷ ಒಂದು ಮಹತ್ವದ ಜವಾಬ್ದಾರಿಯನ್ನು ನೀಡಿದ್ದು ಈ ಚುನಾವಣೆಯಲ್ಲಿ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ವಹಿಸಿದ್ದರು. ಕೆ.ಪಿ.ಸಿ.ಸಿ ಕಾರ್ಯದರ್ಶಿ ಪದ್ಮರಾಜ್ ಆರ್., ರಕ್ಣಿತ್ ಶಿವರಾಂ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ಧರಣೇಂದ್ರ ಕುಮಾರ್, ಎಂ.ಎಸ್. ಮಹಮ್ಮದ್, ನಮಿತ ಪೂಜಾರಿ, ಲೋಕೇಶ್ವರಿ ವಿನಯ ಚಂದ್ರ, ಪದ್ಮನಾಭ ಮಾಲಾಡಿ, ಪ್ರಶಾಂತ್ ವೇಗಸ್, ಸುಭಾಶ್ಚಂದ್ರ ರೈ, ಸಂತೋಷ್ ಕುಮಾರ್, ರೂಯಿ ಪುದುವೆಟ್ಟು, ಪ್ರದೀಪ್ ಕೆ.ಸಿ. ಹಾಗೂ ಇತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶೀಪಟ್ಣ ಸ್ವಾಗತಿಸಿ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ವಂದಿಸಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.