Site icon Suddi Belthangady

ಉಜಿರೆ: ಎಸ್.ಡಿ.ಎಂ. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸ್ಪಟಿಕ ಸಂಘದ ವತಿಯಿಂದ ಕಾಲೇಜು ಮಟ್ಟದ ಕ್ರೆಸಿಟಾ’ ಫೆಸ್ಟ್- ಶಿಕ್ಷಣದ ಜೊತೆ ಸಂಸ್ಕಾರ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವೈಶಿಷ್ಟ್ಯ: ಡಾ.ರವೀಶ್ ಪಡುಮಲೆ

ಉಜಿರೆ: ಶಿಕ್ಷಣದ ಜೊತೆ ಸಂಸ್ಕಾರ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವೈಶಿಷ್ಟ್ಯ, ಹಾಗಾಗಿ ಕಾಲೇಜು ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಮುಖ್ಯ. ಆಗ ಮಾತ್ರ ನಿಮ್ಮನ್ನು ನೀವು ಹೆಚ್ಚು ತಿಳಿದುಕೊಳ್ಳಬಹುದು” ಎಂದು ಉಜಿರೆಯ ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರವೀಶ್ ಪಡುಮಲೆ ಹೇಳಿದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸ್ಪಟಿಕ ಸಂಘದ ವತಿಯಿಂದ ಅಕ್ಟೋಬರ್ 10ರಂದು ಆಯೋಜಿಸಿದ್ದ ಕಾಲೇಜು ಮಟ್ಟದ ಸ್ಪರ್ಧೆ ‘ಕ್ರೆಸಿಟಾ’ ಫೆಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಕ್ರೆಸಿಟಾದಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ವ್ಯಕ್ತಿತ್ವ ಬೆಳವಣಿಗೆ ಜೊತೆಗೆ, ತರಗತಿಯಲ್ಲಿ ಓದಿ ಕಲಿಯುವುದಕ್ಕಿಂತ ಹೆಚ್ಚಿನ ವಿಷಯಗಳನ್ನು ಕಲಿಯಲು ಮುಕ್ತ ಅವಕಾಶ ದೊರಕುತ್ತದೆ ಎಂದರು.
ವಿದ್ಯಾರ್ಥಿಗಳು ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ, ತಂದೆ, ತಾಯಿ ಮತ್ತು ಗುರುಗಳ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು. ಅವರನ್ನು ಗೌರವಿಸಬೇಕು. ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಇತರರಿಗೆ ಸ್ಫೂರ್ತಿದಾಯಕವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳುವುದು ಅತ್ಯಗತ್ಯ. ಗುರಿ ಸಾಧಿಸುವುದು ಸುಲಭದ ಮಾತಲ್ಲ. ಅದಕ್ಕಾಗಿ ನಾವು ಕೆಲವೊಂದು ವಿಶೇಷ ಅರ್ಹತೆ ಮತ್ತು ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ” ಎಂದರು. ಕ್ರೆಸಿಟಾದಂತಹ ಫೆಸ್ಟ್ ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿ, ದೌರ್ಬಲ್ಯ ಹಾಗೂ ಹಲವಾರು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶ ಒದಗಿಸುತ್ತದೆ. ನಮ್ಮಲ್ಲಿನ ಕೊರತೆಗಳನ್ನು ಬಲವಾಗಿ ಪರಿವರ್ತಿಸಿಕೊಂಡಾಗ ನಮ್ಮ ವೈಯಕ್ತಿಕ ಬೆಳವಣಿಗೆ ಕೂಡ ಸಾಧ್ಯ” ಎಂದು ಅವರು ತಿಳಿಸಿದರು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ., ಕಾರ್ಯಕ್ರಮದ ವಿದ್ಯಾರ್ಥಿ ಪ್ರತಿನಿಧಿ ಜಿ.ವಿ. ಚಂದನ, ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚಂದ್ರಿಕಾ ಸ್ವಾಗತಿಸಿದರು. ವೈದೇಹಿ ಮತ್ತು ಪೂರ್ವಿ ಪ್ರಾರ್ಥಿಸಿದರು. ಚಂದನ ವಂದಿಸಿದರು. ಸಿಂಧು ಕಾರ್ಯಕ್ರಮ ನಿರೂಪಿಸಿದರು.

Exit mobile version